ಚಡಚಣದಲ್ಲಿ ರೈತರ ಪ್ರತಿಭಟನೆ | ಸೆ.30ರಂದು ಸೊಲ್ಲಾಪುರ–ವಿಜಯಪುರ ಹೆದ್ದಾರಿ ಬಂದ್‌ಗೆ ರೈತ ಸಂಘದ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪ್ರಸಕ್ತ ವರ್ಷ ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಹದಗೆಟ್ಟಿದ್ದು, ಚಡಚಣ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತರು ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದ ರೈತರು, ರಾಜ್ಯ ಸರ್ಕಾರ ಬುಧವಾರ ರಾತ್ರಿ ಚಡಚಣ ತಾಲೂಕನ್ನು ಮಧ್ಯಮ ಬರಪೀಡಿತ ತಾಲೂಕು ಎಂದು ಘೋಷಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ವಾಸ್ತವ ಪರಿಸ್ಥಿತಿ ತೀವ್ರ ಬರದ ಪರಿಸ್ಥಿತಿಯಾಗಿದ್ದು, ಮಧ್ಯಮ ಬರಪೀಡಿತ ಎಂಬ ಘೋಷಣೆಯನ್ನು ಕೂಡಲೇ ಹಿಂಪಡೆದು “ತೀವ್ರ ಬರಪೀಡಿತ ತಾಲೂಕು” ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ವಸಂತ ಭೈರಾಮಡಿ ಮಾತನಾಡಿ, ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಬರ ಪರಿಸ್ಥಿತಿಯನ್ನು ವಾಸ್ತವಿಕವಾಗಿ ಪರಿಗಣಿಸಿ ಚಡಚಣವನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಸೆ.30ರೊಳಗಾಗಿ ಈಡೇರಿಸದಿದ್ದರೆ, ವಿಜಯಪುರ–ಸೋಲಾಪುರ ಚತುಷ್ಪಥ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ವಸಂತ ಭೈರಾಮಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಘೇನಪ್ಪ ಬಿರಾದಾರ, ಮಹಾದೇವ ತೇಲಿ, ಸದಾನಂದ ಹಳದಕ್ಕಿ, ಮಹಾಂತೇಶ ಬಿರಾದಾರ, ಗುಂಡು ತೊಳನೂರ, ಸತೀಶ ತೊಳನೂರ, ರವಿ ಕಟ್ಟಿಮನಿ, ವಿಶ್ವನಾಥ ಬಿರಾದಾರ, ರೇವಪ್ಪ ತಿಡಗುಂದಿ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

