ಜಿಲ್ಲೆಯ ಆಕ್ಸಫರ್ಡ್ ಶಾಲೆಯ ಸೌಜನ್ಯಾ ರಾಜ್ಯ, ಜಿಲ್ಲೆಗೆ ಪ್ರಥಮ | ಫಲಿತಾಂಶದಲ್ಲಿ ಗಣನೀಯ ಸುಧಾರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ.೯೪.೧೬ ರಷ್ಟಾಗಿದ್ದು, ಜಿಲ್ಲೆ, ಈ ಬಾರಿ ರಾಜ್ಯ ಮಟ್ಟದಲ್ಲಿ ಫಲಿತಾಂಶದಲ್ಲಿ ಗಣನೀಯ ಸುಧಾರಣೆ ಕಂಡಿದೆ.
ಈ ಬಾರಿ ಜಿಲ್ಲೆಯ ಫಲಿತಾಂಶ ಶೇ. ೯೪.೧೬ ರಷ್ಟಾಗುವ ಮೂಲಕ ಉತ್ತಮ ಸಾಧನೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ೩೮೪೨೩ ಮಕ್ಕಳ ಪೈಕಿ ೩೬೧೮೦ ಮಕ್ಕಳು ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಈ ವರ್ಷದ ಫಲಿತಾಂಶದಲ್ಲಿ ಗಣನೀಯ ಹೆಚ್ಚಳವಾಗಿದೆ.
ಸೌಜನ್ಯಾ ರಾಜ್ಯ, ಜಿಲ್ಲೆಗೆ ಪ್ರಥಮ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೌಜನ್ಯಾ ಬಸವರಾಜ ಕಂದಕೂರ ೬೨೫ಕ್ಕೆ ೬೨೫ ಅಂಕ ಗಳಿಸುವ ಮೂಲಕ ರಾಜ್ಯ ಕ್ಕೆ ಪ್ರಥಮ ಸ್ಥಾನ ಪಡೆದ ೭ ಮಕ್ಕಳ ಪೈಕಿ ಒಬ್ಬರಾಗಿದ್ದು, ತನ್ಮೂಲಕ ರಾಜ್ಯ ಹಾಗೂ ಮತ್ತು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ವೀರಯ್ಯ ಸಾಲಿಮಠ ತಿಳಿಸಿದ್ದಾರೆ.
ನಾಗರಬೆಟ್ಟದ ಪಾಟೀಲ ಕನ್ನಡ ಮಾಧ್ಯಮ ಪ್ರೌಢಶಾಲೆಯ ನೇಹಾ ಪ್ರಭುಗೌಡ ಗುರಡ್ಡಿ ೬೨೫ಕ್ಕೆ ೬೨೪ ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದರೆ, ನಾಗರಬೆಟ್ಟದ ಎಸ್‌ಡಿಕೆ ಪ್ರೌಢಶಾಲೆಯ ಪೂಜಾ ಎಚ್. ಲಮಾಣಿ ಕನ್ನಡ ಮಾಧ್ಯಮದಲ್ಲಿ ಶೇ.೯೯.೮೪ ಅಂಕ ಪಡೆದು ಜಿಲ್ಲೆಗೆ ದ್ವಿತೀಯ, ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜ್ಯೋತ್ಸ್ನಾ ಬಾಲಚಂದ್ರ ಪಾಟೀಲ ಶೇ.೯೯.೬೮ ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಇವರೊಟ್ಟಿಗೆ ಮುದ್ದೇಬಿಹಾಳ ತಾಲೂಕಿನ ಮೈಲೇಶ್ವರ ಗ್ರಾಮದ ಬ್ರಿಲ್ಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಗಂಗಮ್ಮ ಅಶೋಕ ಕೋಳೂರ ಶೇ.೯೯.೬೮ ಅಂಕ ಹಾಗೂ ಜಿಲ್ಲೆಯ ಬೇಳೂರು ಕ್ರಾಸ್ ಜೆಎಸ್ಸೆಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುಪರ್ಣಿಕಾ ಸಂಗನಗೌಡ ಪಾಟೀಲ ಶೇ. ೯೯.೬೮ ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಡಿಡಿಪಿಐ ವೀರಯ್ಯ ಸಾಲಿಮಠ ತಿಳಿಸಿದ್ದಾರೆ.
