ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನಲ್ಲಿ ನೂತನವಾಗಿ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಲಕ್ಷ್ಮಣ ಸವದಿ ಅವರ ಸುಪುತ್ರ ಹಾಗೂ ಯುವ ನಾಯಕ ಚಿದಾನಂದ ಸವದಿ ಅವರು ಅನಿರೀಕ್ಷಿತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಟೋಕನ್ ಪಡೆದ ಅವರು, ಅಲ್ಲಿನ ಆಹಾರದ ರುಚಿ ಸವಿಯುವ ಮೂಲಕ ತಮ್ಮ ಸರಳತೆಯನ್ನು ಮೆರೆದರು.
ಕ್ಯಾಂಟೀನ್‌ನ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ ಚಿದಾನಂದ ಸವದಿ ಅವರು, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಬಳಿಕ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡಿ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಸೂಚನೆ ನೀಡಿದರು.
ಬಡವರು ಮತ್ತು ಶ್ರಮಿಕ ವರ್ಗದವರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಸಿಗಬೇಕು ಎಂಬುದು ಸರ್ಕಾರದ ಆಶಯ. ಅಥಣಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಗುಣಮಟ್ಟ ಉತ್ತಮವಾಗಿದೆ. ಬಡವರ ಹಸಿವು ನೀಗಿಸುವ ಈ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನಾವು ಸದಾ ನಿಗಾ ವಹಿಸುತ್ತೇವೆ. ತಾಲೂಕಿನ ಜನತೆ ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

