ವೇಳಾಪಟ್ಟಿ ಪ್ರಕಟಣೆ ಇಲ್ಲದೆ ನಾಮಪತ್ರ ಸ್ವೀಕಾರ | ಶಿಕ್ಷಕರ ಅಸಮಾಧಾನ
ಉದಯ ರಶ್ಮಿ ದಿನಪತ್ರಿಕೆ
ಅಥಣಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಶಿಕ್ಷಕ ಸಂಗಮೇಶ ಹಚಡದ ಹೇಳಿದರು.
ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಮತ್ತು ನಾಳೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಇದುವರೆಗೆ ಚುನಾವಣಾ ವೇಳಾಪಟ್ಟಿ, ಚುನಾವಣಾ ನಡೆಯುವ ಸ್ಥಳ ಹಾಗೂ ಸಂಬಂಧಿತ ಕಚೇರಿಗಳ ಕುರಿತು ಯಾವುದೇ ಅಧಿಕೃತ ಪ್ರಕಟಣೆ ನೀಡಲಾಗಿಲ್ಲ ಎಂಬುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಸಂಬಂಧಿಸಿದಂತೆ ಪ್ರಶ್ನೆಗಳು ಉದ್ಭವವಾಗಿವೆ. ಹಲವಾರು ಶಿಕ್ಷಕರು ಈ ಕ್ರಮವನ್ನು ಪ್ರಶ್ನಿಸಿ, ಸಮರ್ಪಕ ಮಾಹಿತಿ ನೀಡದೇ ನಾಮಪತ್ರ ಸ್ವೀಕಾರ ಪ್ರಾರಂಭಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಕರ ಸಂಘದ ಚುನಾವಣೆಯು ಪ್ರಜಾಸತ್ತಾತ್ಮಕ ವಿಧಾನದಲ್ಲಿ, ಸ್ಪಷ್ಟ ಮಾರ್ಗಸೂಚಿಗಳೊಂದಿಗೆ ನಡೆಯಬೇಕು ಎಂಬುದು ಶಿಕ್ಷಕರ ಒತ್ತಾಯವಾಗಿದೆ. ತಕ್ಷಣವೇ ಚುನಾವಣಾ ವೇಳಾಪಟ್ಟಿ, ಸ್ಥಳ ಮತ್ತು ಸಂಬಂಧಿತ ವಿವರಗಳನ್ನು ಪ್ರಕಟಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದ್ದು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು
ಶಿಕ್ಷಕರಾದ ಸಂಗಮೇಶ ಹಚಡದ, ಚನ್ನಬಸು ಮಗದುಮ, ಅಕ್ಬರ ಮುಜಾವರ ತಿಳಿಸಿದ್ದಾರೆ.
ಈ ವೇಳೆ ಶಿಕ್ಷಕರಾದ ಈಶ್ವರಪ್ಪ ಜಾಧವ,ಡಿ ಎಮ್ ಮೊಪಗಾರ ಸೇರಿದಂತೆ ಇನ್ನಿತರ ಶಿಕ್ಷಕರು ಉಪಸ್ಥಿತರಿದ್ದರು

