ನಮ್ಮನ್ನು ಬಿಟ್ಟು ಹೋಗಬೇಡಿ’ ಎಂದು ಅಂಗಲಾಚಿ ಕಣ್ಣೀರಿಟ್ಟ ವಿದ್ಯಾರ್ಥಿಗಳು!
ಉದಯರಶ್ಮಿ ದಿನಪತ್ರಿಕೆ
ಸಂಬರಗಿ: ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಕೇವಲ ಪಾಠಕ್ಕೆ ಸೀಮಿತವಲ್ಲ, ಅದೊಂದು ಅವಿನಾಭಾವ ಸಂಬಂಧ ಎಂಬುದಕ್ಕೆ ತಾಲೂಕಿನ ಸಂಬರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಕಳೆದ 10 ವರ್ಷಗಳಿಂದ ಇದೇ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ನಲಿ-ಕಲಿ ಮಾದರಿಯ ಮೂಲಕ ಮಕ್ಕಳಿಗೆ ಅಚ್ಚುಮೆಚ್ಚಿನ ಗುರುವಾಗಿದ್ದ ಶಶಿಕಲಾ ಬಜಂತ್ರಿ ಅವರ ವರ್ಗಾವಣೆಯ ಸಂದರ್ಭದಲ್ಲಿ ಶಾಲೆಯಲ್ಲಿ ಭಾವನಾತ್ಮಕ ದೃಶ್ಯಗಳು ಕಂಡುಬಂದವು. ಶಶಿಕಲಾ ಅವರು ಗಡಿಭಾಗದ ಈ ಹಳ್ಳಿಯ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.
ಕೌಟುಂಬಿಕ ಕಾರಣಗಳಿಗಾಗಿ ಶಿಕ್ಷಕಿಯ ವರ್ಗಾವಣೆ ಅನಿವಾರ್ಯವಾಗಿದ್ದರೂ, ನೆಚ್ಚಿನ ಶಿಕ್ಷಕಿ ಶಾಲೆಯನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಪುಟಾಣಿ ಮಕ್ಕಳು “ನಮ್ಮನ್ನು ಬಿಟ್ಟು ಹೋಗಬೇಡಿ” ಎಂದು ಶಿಕ್ಷಕಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಮಕ್ಕಳ ಪ್ರೀತಿಯನ್ನು ಕಂಡು ಶಿಕ್ಷಕಿ ಶಶಿಕಲಾ ಅವರು ಕೂಡ ಭಾವುಕರಾಗಿ ಕಣ್ಣೀರು ಹಾಕಿದರು.
ಕಪ್ಪು ಹಲಗೆಯ ಮೇಲೆ ಭವಿಷ್ಯದ ಕನಸುಗಳನ್ನು ಬಿತ್ತಿದ ಶಶಿಕಲಾ ಬಜಂತ್ರಿ ಅವರು ಕೇವಲ ಶಿಕ್ಷಕಿಯಾಗಿರದೆ, ಮಕ್ಕಳಿಗೆ ತಾಯಿರೂಪಿ ಮಾರ್ಗದರ್ಶಕರಾಗಿದ್ದರು. ಇರಬೇಕು ಇಂತಹ ಶಿಕ್ಷಕಿ ಎಂಬ ಮಾತುಗಳು ಪಾಲಕರಿಂದ ಕೇಳಿಬಂದವು.
10 ವರ್ಷಗಳ ಒಡನಾಟವನ್ನು ಕಡಿದುಕೊಂಡು ಹೋಗುವಾಗ ಶಾಲೆಯ ಇತರ ಶಿಕ್ಷಕರು ಹಾಗೂ ಗ್ರಾಮಸ್ಥರ ಕಣ್ಣುಗಳು ಕೂಡ ಒದ್ದೆಯಾಗಿದ್ದವು.

