ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸದ್ಯಕ್ಕೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿಲ್ಲ. ಇಂಡಿ ಹಾಗೂ ಚಡಚಣ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಬಹುದು. ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ನಿರ್ವಹಣೆ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆ ಸಂದರ್ಭದಲ್ಲಿ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ತಕ್ಷಣ ತೆರಳಿ ಸಭೆ ನಡೆಸಿ ನಿಮ್ಮ ನಿಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಇಂಡಿ ಸೇರಿದಂತೆ ಎಲ್ಲೆಲ್ಲಿ ನೀರಿನ ಸಮಸ್ಯೆ ಉದ್ಭವಿಸಿದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆಗಳನ್ನು ಕೈಗೆತ್ತಿಕೊಂಡು ಯಾವುದೇ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳುವುದರತ್ತ ನಿಗಾ ವಹಿಸಬೇಕು. ಸಾಧ್ಯವಾದರೆ ಬೋರವೆಲ್ ನಂತಹ ಜಲಮೂಲಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಬೇಸಿಗೆ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಸದಾ ಸನ್ನದ್ಧವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಮುಂದಿನ ಇಪ್ಪತ್ತು ದಿನಗಳವರೆಗೆ ನೀರು ಬಿಡುಗಡೆ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಿ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಎಂದರು.

ಆಲಮಟ್ಟಿ & ನಾರಾಯಣಪುರ ಜಲಾಶಯದಲ್ಲಿ ನೀರಿನ ಲಭ್ಯತೆ
ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಮಾತನಾಡಿ, ವಿಜಯಪುರ ಜಿಲ್ಲೆಯ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಕಳೆದ ವರ್ಷ ಇದ್ದ ನೀರಿನ ಲಭ್ಯತೆ ಎರಡೂ ಜಲಾಶಯದಲ್ಲಿ ಇದೆ ಎಂದು ಮಾಹಿತಿ ನೀಡುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಆಗಸ್ಟ್ ತಿಂಗಳವರೆಗೆ ಕುಡಿಯುವ ನೀರಿನ ಲಭ್ಯತೆಯನ್ನು ಬಳಸಿಕೊಳ್ಳಬೇಕು ಎಂದರು. ಗ್ರಾಮೀಣ ಪ್ರದೇಶ 40 ಬಹುಹಳ್ಳಿ ಕುಡಿಯುವ ನೀರಿನ (ಎಂವಿಎಸ್) ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

“ಆಲಮಟ್ಟಿ ಜಲಾಶಯದ ಸ್ಟೋರೇಜ್ ನೋಡಿಕೊಂಡು ನೀರಿನ ಸಮರ್ಪಕ ನಿರ್ವಹಣೆ ಮಾಡಬೇಕು.”
– ಸಿ.ಎಸ್. ನಾಡಗೌಡ
ಮುದ್ದೇಬಿಹಾಳ ಶಾಸಕರು
ನಾಳೆ ಕೆರೆಗಳಿಗೆ ನೀರು
ಕೆರೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ನಿಗಾವಹಿಸಿ ಕೊನೆಯ ಹಂತದವರೆಗೂ ನೀರು ತಲುವಂತೆ ನೋಡಿಕೊಳ್ಳಬೇಕು ಎಂದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು, ಕೆರೆ ತುಂಬುವ ಶೆಡ್ಯೂಲ್ ಪ್ರಕಾರ ತುಂಬಿಸಬೇಕು. ಒಟ್ಟು 2.3 ಟಿಎಂಸಿ ನೀರು ನಾಳೆ ಹರಿಸಲಾಗುವುದು ಎಂದರು.
ಮೊದಲು ಟೇಲ್ ಎಂಡ್ ನೀರು ತಲುಪುವಂತೆ ನಿರ್ವಹಣೆ ಮಾಡಿ, ಕುಡಿಯುವ ನೀರಿನ ಉದ್ಧೇಶಕ್ಕೆ ನೀರು ಹರಿಸಲಾಗುತ್ತಿದೆ. ಅದೇ ಉದ್ಧೇಶಕ್ಕೆ ಮಾತ್ರ ನೀರು ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ವಿಷಯದಲ್ಲಿ ಪೊಲೀಸ್ ಇಲಾಖೆ, ಸಂಬಂಧಿಸಿದ ಇಲಾಖೆ ಸಮನ್ವಯತೆ ಸಾಧಿಸಬೇಕು ಎಂದರು.

” ನಗರದ ಹಳೆಯ ಬೋರವೆಲ್ ಗಳು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಯಾವ ಯಾವ ವಾರ್ಡಿಗೆ ಎಷ್ಟು ನೀರು ಎಂಬುದಾಗಿ ಅಧಿಕಾರಿಗಳು ಶೆಡ್ಯೂಲ್ ಮಾಡಿ ಸಮರ್ಪಕವಾಗಿ ನೀರು ಪೂರೈಸಬೇಕು.”
– ಬಸನಗೌಡ ಪಾಟೀಲ, ಯತ್ನಾಳ
ವಿಜಯಪುರ ನಗರ ಶಾಸಕರು
ಭೂತನಾಳ ಕೆರೆಯಲ್ಲಿ ನೀರು ಸಂಗ್ರಹಿಸಿ
ಭೂತನಾಳ ಕೆರೆಗೆ ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ನಗರಕ್ಕೆ ನೀರಿನ ಯಾವುದೇ ತೊಂದರೆಯಾಗದ ಹಾಗೆ ನೀರು ನಿರ್ವಹಣೆ ಮಾಡಬೇಕು. ನಗರದ ಬಾವಿಗಳನ್ನು ಸ್ವಚ್ಚಗೊಳಿಸಿ, ಅನ್ಯ ಉದ್ಧೇಶಗಳಿಗೆ ನೀರು ಬಳಸಬಹುದಾಗಿದೆ. 26 ಬಾವಿಗಳಿಗೆ ಸಿಎಸ್ ಆರ್ ಅನುದಾನದಲ್ಲಿ ಬಾವಿ ಸ್ವಚ್ಛಗೊಳಿಸಿ ಮೋಟಾರ್ ಅಳವಡಿಸಲಾಗಿದೆ. ತಾಜಬಾವಡಿ ನೀರೂ ಬಳಕೆಯಗುತ್ತಿದೆ. ಬೋರವೆಲ್ ಮರುಪೂರಣಗೊಳಿಸಿ ನೀರು ಬಳಸಿಕೊಳ್ಳಬಹುದು. ಬಾವಿ ನೀರನ್ನು ಪರ್ಯಾಯ ವ್ಯವಸ್ಥೆ ಮಾಡಿ,ಸ್ಥಳೀಯ ಸಂಸ್ಥೆಯಲ್ಲಿ ಸಮಸ್ಯೆ ಇರದಂತೆ ಮುಂಜಾಗ್ರತೆ ವಹಿಸಬೇಕು ಎಂದರು.

ಜಲಧಾರೆ ಯೋಜನೆ ಶೀಘ್ರ ಪೂರ್ಣಗೊಳಿಸಿ
ಬೇಸಿಗೆಯಲ್ಲೂ ಜಿಲ್ಲೆಯಲ್ಲಿ ನೀರಿನ ಶಾಶ್ವತ ಪರಿಹಾರ ಕಲ್ಪಿಸಲಿರುವ ಮಹತ್ವಾಕಾಂಕ್ಷೆಯ ಜಲಧಾರೆ ಯೋಜನೆಯನ್ನು ಯುದ್ಧೋಪಾದಿಯಲ್ಲಿ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಬೇಕು.”
– ಡಾ. ಎಂ.ಬಿ. ಪಾಟೀಲ
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು
೨೦೨೭ ಮಾರ್ಚ್ ವೇಳೆಗೆ ಹಂತ-೨ ಪೂರ್ಣಗೊಳಿಸಿ
ಮಹತ್ವಕಾಂಕ್ಷೆಯ ಜಲಧಾರೆ ಹಂತ -1 ಹಾಗೂ ಹಂತ-೨ರ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ನಿವಾರಿಸಿಕೊಂಡು ಬೇಗ ಕಾಮಗಾರಿ ಮಾಡಿಸಬೇಕು. ಅರಣ್ಯ ಇಲಾಖೆ ಈ ಯೋಜನೆಯಡಿಯಿರುವ ತೊಂದರೆ ಬಗೆಹರಿಸಬೇಕು. ಪೂರ್ಣಗೊಳಿಸಬೇಕು. ೨೦೨೭ ಮಾರ್ಚ್ ಒಳಗಾಗಿ ಪೂರ್ಣಗೊಳಿಸುವಂತೆ ಸಚಿವ ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

