ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ತಾಲೂಕಿನ ಚಕ್ಕೋಡನಹಳ್ಳಿ ಗ್ರಾಮದಲ್ಲಿ ಶ್ರೀ ಕಾಳಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಕಾಳಮ್ಮ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೀದಿಗಳನ್ನು ವಿದ್ಯುತ್ ದೀಪಗಳಿಂದ, ಹೂಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ದೇವಿಯ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾಕ್ಷಿಯಾದರು.
ಇತಿಹಾಸ ಹಿನ್ನೆಲೆಯುಳ್ಳ ಕಾಳಮ್ಮ ದೇವಸ್ಥಾನಕ್ಕೆ ಶುಕ್ರವಾರ ಹಿರೇಹಳ್ಳಿ ಗ್ರಾಮಸ್ಥರು ಸೊಪ್ಪು ತಂದು ಚಪ್ಪರ ಹಾಕಿದರು. ಶನಿವಾರ ಸೋನಹಳ್ಳಿ ಕೆರೆಯಲ್ಲಿ ಕಾಳಮ್ಮ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸತ್ತಿಗೆ, ಡೊಳ್ಳು ಕುಣಿತ, ವಾದ್ಯಗೋಷ್ಠಿ ಸೇರಿದಂತೆ ಕಲಾತಂಡಗಳೊಂದಿಗೆ ಕೆರೆಯಿಂದ ಕಾಳಮ್ಮ ದೇವಸ್ಥಾನದವರೆಗೂ ತಾಯಿಯ ಮೆರವಣಿಗೆ ಮಾಡಿ ದೇವಸ್ಥಾನದಲ್ಲಿ ಪೂಜಿಸಲಾಯಿತು. ಭಾನುವಾರ ಮುಂಜಾನೆ ಮತ್ತೆ ಕೆರೆಯಲ್ಲಿ ಕಾಳಮ್ಮ ತಾಯಿ ವಿಗ್ರಹವನ್ನು ಶುದ್ಧಗೊಳಿಸಿ, ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು. ಬಳಿಕ ಕೆರೆಯಿಂದ ದೇವಸ್ಥಾನದವರೆಗೂ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮಾಡಲಾಯಿತು. ಈ ವೇಳೆ ಸಾವಿರಾರು ಮಹಿಳಾ ಭಕ್ತಾದಿಗಳು ತಂಬಿಟ್ಟು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಈ ದೃಶ್ಯವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದಾಗಿತ್ತು. ದೇವಸ್ಥಾನಕ್ಕೆ ಬಂದು ತಲುಪಿದ ನಂತರ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಿ ದೇವಸ್ಥಾನದಲ್ಲಿ ದೇವಿಯ ವಿಗ್ರಹ ಇರಿಸಲಾಯಿತು. ಬಳಿಕ ಮಹಿಳೆಯರು, ತಂಬಿಟ್ಟು ಪೂಜೆ ಮಾಡಿಸಿ ತಾಯಿಯ ಕೃಪೆಗೆ ಪಾತ್ರರಾದರು.
ದೇವಸ್ಥಾನದ ವಿಶೇಷತೆ
ನೂರು ವರ್ಷಗಳ ಇತಿಹಾಸ ಹೊಂದಿರುವ ಕಾಳಮ್ಮ ತಾಯಿ, ಚಕ್ಕೋಡನಹಳ್ಳಿ ಸೇರಿದಂತೆ 12 ಗ್ರಾಮಗಳ ಶಕ್ತಿ ದೇವತೆಯಾಗಿ ಹೊರಹೊಮ್ಮಿದಾಳೆ. ಸಂಕಷ್ಟ ನಿವಾರಿಸಿ, ಊರಿಗೆ ಉಳೀತು ಮಾಡುವ ಕಾಳಮ್ಮ ತಾಯಿ ಮೇಲೆ ಸುತ್ತಮುತ್ತಲಿನ ಗ್ರಾಮದ ಜನರಿಗೆ ಅಪಾರ ನಂಬಿಕೆ. ಹೀಗಾಗಿ ಹರಿಕೆ ಹೊತ್ತು ಜಾತ್ರೆ ದಿನ ಅದನ್ನು ತೀರಿಸುತ್ತಾರೆ. 12 ಗ್ರಾಮಗಳು ನಡೆಸುವ ಈ ಜಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು
ಗಡಿ ಯಜಮಾನರಾದ ಹಿರೇಹಳ್ಳಿ ಪ್ರಕಾಶ್ ವಹಿಸಿಕೊಂಡು, ಪ್ರತಿವರ್ಷ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

