ತಕ್ಷಣ ಕ್ರಮ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿ ಮೂಲಕ ಸಚಿವರಿಗೆ ಶಿವಾನಂದ ಬೋದಲಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಸಮೀಪ ವಿಜಯಪುರ–ಜಮಖಂಡಿ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಎಡ ಹಾಗೂ ಬಲ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಟ್ಟಂಗಿ ಭಟಿಗಳಿಂದ ಸಾರ್ವಜನಿಕರ ಆರೋಗ್ಯ, ಕೃಷಿ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಶಿವಾನಂದ ಬೋದಲಿ ಆರೋಪಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಗರದ ತಾಲೂಕು ಆಡಳಿತ ಭವನದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಕರ ಅವರ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಇಟ್ಟಂಗಿ ಭಟಿಗಳಿಂದ ಹೊರಬರುವ ದೂಳು, ಹೊಗೆ ಹಾಗೂ ದುರ್ವಾಸನೆಯಿಂದ ವಯೋವೃದ್ಧರು ಮತ್ತು ಚಿಕ್ಕಮಕ್ಕಳು ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜೊತೆಗೆ ಭಾರಿ ಪ್ರಮಾಣದ ವಾಹನ ಸಂಚಾರದಿಂದ ಶಾಲಾ ಮಕ್ಕಳಿಗೆ ರಸ್ತೆ ದಾಟಲು ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.
ಇನ್ನು ಸುತ್ತಮುತ್ತಲಿನ ಕೃಷಿ ಜಮೀನುಗಳ ಮೇಲೆ ದೂಳು ಜಮೆಯಾಗುವುದರಿಂದ ಬೆಳೆಗಳು ಹಾನಿಗೊಳಗಾಗಿ ಇಳುವರಿ ಕಡಿಮೆಯಾಗುತ್ತಿದೆ. ಭಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಪರಿಸರ ಅಸ್ವಚ್ಛತೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದಾಗಿ ದೂರಿದರು.
ಈ ವೇಳೆ ಕಿರಣ ಗುಗ್ಗರಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಜಮೀನುಗಳಿಂದ ಅಕ್ರಮವಾಗಿ ಮಣ್ಣು ಅಗೆದು ಇಟ್ಟಂಗಿ ಭಟಿಗಳಿಗೆ ಬಳಸಲಾಗುತ್ತಿದೆ ಎಂದು ಗಂಭೀರ ಆರೋಪವನ್ನು ಮುಂದಿಟ್ಟರು. ಜೊತೆಗೆ ಭಟಿಗಳ ಮಾಲೀಕರು ದಿನರಾತ್ರಿ ಭಾರಿ ವಾಹನಗಳು ಸಂಚರಿಸುವುದರಿಂದ ಸಾರ್ವಜನಿಕರ ನಿದ್ರೆಗೆ ಭಂಗವಾಗುತ್ತಿದೆ ಎಂದರು.
ಇತ್ತೀಚೆಗೆ ಈ ವಿಷಯವಾಗಿ ಪ್ರಶ್ನಿಸಿದಾಗ, “ಸಂಬಂಧಪಟ್ಟವರಿಗೆ ಹಣ ನೀಡಿದ್ದೇವೆ” ಎಂದು ಭಟಿಗಳ ಮಾಲೀಕರು ಉತ್ತರಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮುತ್ತಪ್ಪ ಮರನೂರ್, ಮಹಾದೇವ ಗುಗ್ಗರಿ, ಶಿವಾನಂದ ಕೊಣ್ಣೂರ,
ಮುತಾಲಿಕ್ ಬೋದಲಿ, ಶಿವಾನಂದ ಯಣಗಾಯಿ, ವಿದ್ಯಾಲಿಂಗ ಹೊಸಮನಿ
, ಮಹದೇವ ಯಣಗಾಯಿ, ಸುದೀಪ್ ಹೊಸಮನಿ, ಪ್ರಜ್ವಲ್ ಬೊದಲಿ,
ಸಂತೋಷ್ ಹಾದಿಮನಿ ಇನ್ನೂ ಅನೇಕರು ಇದ್ದರು.

