ಜಯ್ ನುಡಿ
- ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ
ದಿನ ನಿತ್ಯ ನಡೆಯುವ ಸನ್ನಿವೇಶಗಳಿಗೆ ಅನುಗುಣವಾಗಿ ನಾವು ಸಂತಸ ದುಃಖ ಅನುಭವಿಸುವುದು ಸಾಮಾನ್ಯ. ನನ್ನ ಭಾವನೆಗಳು ನನ್ನ ಹಿಡಿತದಲ್ಲಿಲ್ಲ. ಸದಾ ಹೊರಗಿನ ಪರಿಸ್ಥಿತಿಗಳಿಗೆ ಉದ್ರೇಕಿತನಾಗಿ ನಡೆದುಕೊಳ್ಳುತ್ತೇನೆ. ಸ್ನೇಹಿತರನ್ನು ಹಿತೈಷಿಗಳನ್ನು ವಿನಾಕಾರಣವಾಗಿ ದುರುಪಯೋಗಪಡಿಸಿಕೊಂಡು ವೈರಿಗಳಾಗಿ ಪರಿವರ್ತನೆಗೊಳಿಸುತ್ತೇನೆ. ಎನ್ನುವ ವ್ಯಕ್ತಿಗಳ ಸಂಖ್ಯೆಯೇ ಜಾಸ್ತಿ. ಸಾಮಾನ್ಯರಿಗೂ ಅಸಾಮಾನ್ಯರಿಗೂ ಇರುವ ಮುಖ್ಯ ವ್ಯತ್ಯಾಸವೇ ಭಾವನೆಗಳ ನಿರ್ವಹಣೆ. ಮಾನವ ಮತ್ತು ಇತರ ಪ್ರಾಣಿಗಳ ನಡುವಿರುವ ಅತಿ ದೊಡ್ಡ ವ್ಯತ್ಯಾಸಗಳಲ್ಲಿ ಭಾವನೆಗಳ ಉಪಸ್ಥಿತಿಯೇ ಮಹತ್ವದ್ದಾಗಿದೆ. ಭಾವಜೀವಿಯಾದ ಮಾನವನಿಗೆ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅಷ್ಟೇನು ಸುಲಭದ ಕೆಲಸವಲ್ಲ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದಿರುವ ಸತ್ಯ. ಹಾಗೆಂದ ಮಾತ್ರಕ್ಕೆ ಭಾವನೆಗಳನ್ನು ಹಿಡಿತದಲ್ಲಿಡುವುದು ಅಸಾಧ್ಯವಾದ ಕಾರ್ಯ ಎಂದೇನಿಲ್ಲ. ಭಾವನೆಗಳ ನಿರ್ವಹಣೆಯಿಂದ ಸದಾ ಸುಖವಾಗಿ ಲವಲವಿಕೆಯಿಂದ ಇರಬಹದು ಎಂಬುದನ್ನು ಈಗಾಗಲೇ ಅನೇಕ ಮಹನೀಯರು ಸಾಬೀತು ಪಡಿಸಿದ್ದಾರೆ. ಇಂದಿನ ಒತ್ತಡ ತುಂಬಿದ ಬದುಕಿನಲ್ಲಿ ನಿಸ್ಸಾರವಾದ ಭಾವನೆಗಳ ಚೇತನಗೊಳಿಸುವ ಜೀವನ ಧಾರೆಗಳು ಯಾವುವು ಎಂದು ಎಷ್ಟೋ ಸಲ ಹುಡುಕುತ್ತಿರುತ್ತೇವೆ. ಅದಕ್ಕೆ ಕೆಲ ಸರಳ ಸಲಹೆಗಳು ಇಲ್ಲಿವೆ.
ಮನಸ್ಸನ್ನು ತಿಳಿಗೊಳಿಸಿ
ಈಗಿನ ದುನಿಯಾದಲ್ಲಿ ನಾವೆಲ್ಲ ಹೆಚ್ಚಿನ ಸಂದರ್ಭಗಳಲ್ಲಿ ಬಾಹ್ಯ ಘಟನೆಗಳಿಗೆ ಭಾವನಾತ್ಮಕವಾಗಿ ಬಲಿಪಶುವಾಗುವುದು ಹೆಚ್ಚಾಗುತ್ತಿದೆ. ನಮ್ಮ ಬದುಕು ಹಳಿ ತಪ್ಪುತ್ತಿದೆ ಎಂದೆನಿಸುತ್ತಿರುತ್ತದೆ. ಏನು ಮಾಡಬೇಕೆಂದು ಗೊತ್ತಾಗದೇ ತೊಳಲಾಡುತ್ತೇವೆ. ಅಸಹಾಯಕರಂತೆ ವರ್ತಿಸುತ್ತೇವೆ. ಆದರೆ ಭಾವನೆಗಳನ್ನು ಸರಿಪಡಿಸಲು ಅನೇಕ ಮಾರ್ಗಗಳುಂಟು ಎಂಬುದನ್ನು ಮರೆತು ಬಿಡುತ್ತೇವೆ. ಸಸಿಯೊಂದು ಹೆಮ್ಮರವಾಗಿ ಬೆಳೆಯಬೇಕಾದರೆ ಅದಕ್ಕೆ ನೀರು ಗಾಳಿ ಗೊಬ್ಬರ ಎಲ್ಲವೂ ಬೇಕು ಹಾಗೆ ಭಾವನೆಗಳಿಗೆ ಬಲಿಪಶುವಾಗಬಾರದು ಎಂದರೆ ಕೇವಲ ದುಡ್ಡು ಮನೆ ಬೇಕಾದ ಸೌಕರ್ಯವಿದ್ದರೆ ಸಾಲದು. ಅದರೊಂದಿಗೆ ನಿರ್ಮಲ ಮನಸ್ಸು ಬೇಕು.ಕೋಪ ತಾಪ ಅತಿಯಾದ ಮೋಹ ಲೋಭ ಅಹಂಕಾರ ಮತ್ಸರಗಳನ್ನು ದಿನೇ ದಿನೇ ಕಡಿಮೆ ಮಾಡುತ್ತ ಮನಸ್ಸನ್ನು ತಿಳಿಗೊಳಿಸಬೇಕು. ‘ಮನಸ್ಸು ಆಲೋಚನೆ ಮಾಡುತ್ತಿದೆ ಎಂದರೆ ಅದು ತನ್ನೊಡನೆ ತಾನು ಮಾತನಾಡುತ್ತಿದೆ.’ ಎಂದಿದ್ದಾನೆ ಗ್ರೀಕ್ ತತ್ವಜ್ಞಾನಿ ಮತ್ತು ಗಣಿತಜ್ಞ ಪ್ಲೇಟೋ. ಮಾನಸಿಕ ಒತ್ತಡಗಳಿಂದ ದೂರವಿರಬೇಕು. ‘ಭಾವನೆಗಳೇ ಮನುಷ್ಯನನ್ನು ಉಚ್ಛ ಇಲ್ಲವೇ ನೀಚ ಮಟ್ಟಕ್ಕೆ ಒಯ್ಯುತ್ತವೆ.’ ಎಂದು ರಸೆಲ್ ಹೇಳಿದ ಮಾತು ತುಂಬಾ ಅರ್ಥಪೂರ್ಣವಾಗಿದೆ. ಒಡನಾಟದಲ್ಲಿರುವ ವ್ಯಕ್ತಿಗಳಲ್ಲಿ ಸಕಾರಾತ್ಮಕ ಗುಣಗಳತ್ತ ನೋಟ ನೆಡಬೇಕು. ಆಗ ಜಗ ಸುಂದರವಾಗಿ ಕಾಣುವುದು. ಗೊಂದಲ ಭಯ ಆತುರ ಕೀಳರಿಮೆಗಳೂ ದೂರವಾಗುವವು.
ಭಾವನಾತ್ಮಕ ಜಾಣ್ಮೆ ಹೆಚ್ಚಿಸಿಕೊಳ್ಳಿ
ಅಮೇರಿಕದ ಕ್ರೀಡಾಪಟು ಜಾನ್ ಸ್ಟೆರ್ಲಿಂಗ್ ಹೇಳಿರುವಂತೆ ‘ಭಾವನೆ ಅಥವಾ ವಿಚಾರ ಕಾರ್ಯ ರೂಪಕ್ಕೆ ಬರದಿದ್ದರೆ ಮನುಷ್ಯನನ್ನು ಹುಚ್ಚನನ್ನಾಗಿಸುತ್ತವೆ.’ ಈಗಿನ ವ್ಯವಹಾರಿಕ ಜಗತ್ತಿನಲ್ಲಿ ಬುದ್ಧಿವಂತಿಕೆಗೆ ಹಾಗೂ ಕೃತಕ ಜಾಣ್ಮೆಗೆ ಹೆಚ್ಚು ಮಹತ್ವ ನೀಡುತ್ತಿದ್ದೇವೆ. ಆದರೆ ಭಾವನೆಗಳ ಹಿಡಿತದ ವಿಷಯದಲ್ಲಿ ಬುದ್ಧಿವಂತಿಕೆಗಿಂತ ಗುಣದ ಪಾತ್ರ ಮುಖ್ಯವಾಗುತ್ತದೆ. ಸದ್ಗುಣಗಳು ಅಧಿಕವಾಗಿದ್ದಲ್ಲಿ ನಮ್ಮ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಅಧಿಕವಾಗಿಯೇ ಇರುತ್ತದೆ. ಈ ಸಾಮರ್ಥ್ಯವನ್ನೇ ಭಾವನಾತ್ಮಕ ಜಾಣ್ಮೆ ಎಂದು ಕರೆಯುವರು. ಕುಟುಂಬ ಕಛೇರಿ ಸಮಾಜದಲ್ಲಿ ನಡೆಯುವ ಒಳಿತು ಕೆಡುಕುಗಳನ್ನು ಸರಿಯಾಗಿ ತಿಳಿದುಕೊಂಡು ಇತರರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.’ನನಗೆ ಎಲ್ಲವೂ ಗೊತ್ತು ನಾನು ಹೇಳಿದ್ದೇ ಸರಿ.’ ಎಂಬ ದರ್ಪ ಧೋರಣೆ ಸಲ್ಲದು. ಎಮರ್ಸನ್ ನುಡಿದಂತೆ ‘ಮಾನವನ ಭಾವಶುದ್ಧಿಗಿಂತ ಪವಿತ್ರವಾದುದು ಇನ್ನೊಂದಿಲ್ಲ.’ ಕಣ್ಣು ಕಂಡರೆ ತಾನೆ ವಸ್ತುವಿನ ರೂಪ ಆಕಾರ ತಿಳಿಯುವುದು ಹಾಗೆಯೇ ಭಾವನಾತ್ಮಕ ಜಾಣ್ಮೆ ಇದ್ದರೆ ಮನಸ್ಸಿನ ಭಾವಚಿತ್ರವನ್ನು ಸೆರೆ ಹಿಡಿಯಲು ಸಾಧ್ಯವಾಗುವುದು. ಭಾವನೆಗಳು ತಮ್ಮ ಪ್ರತಿಯೊಂದು ಕೆಲಸಕ್ಕೂ ಮನಸ್ಸನ್ನೇ ಅವಲಂಬಿಸಿರುತ್ತವೆ. ಬಲಿಪಶು ಪ್ರವೃತ್ತಿಯನ್ನು ಮುರಿದು ಹಾಕಿ ಭಾವಗಳ ಹಿಡಿತಕ್ಕೆ ತೆಗೆದುಕೊಂಡರೆ ಸಂಬಂಧಗಳು ಸಂಕೀರ್ಣವಾಗದೇ ಸುಂದರವಾಗುತ್ತವೆ.
ಹೃದಯ ವೈಶಾಲ್ಯತೆ ಗಳಿಸಿ
ಸುಂದರ ಬದುಕಿಗೆ ಅಡಿಪಾಯವಾಗಿರುವ ಭಾವನೆಗಳು ಉಜ್ವಲ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಎಂಬುದರಲ್ಲಿ ಎರಡು ಮಾತಿಲ್ಲ. ಅನೇಕ ಸಲ ನಮ್ಮ ದುರ್ಬಲ ಮನಸ್ಸು ನಮ್ಮ ಬಗ್ಗೆಯೇ ಬಹಳಷ್ಟು ತಪ್ಪು ಕಲ್ಪನೆಗಳನ್ನು ಹುಟ್ಟಿಸುತ್ತದೆ. ಒಂದು ದುರ್ಬಲ ಮನಸ್ಸು ಸೂಕ್ಷ್ಮದರ್ಶಕದಂತೆ ಅದು ಸಣ್ಣ ವಿಷಯಗಳನ್ನು ದೊಡ್ಡದಾಗಿಸುತ್ತದೆ. ಆದರೆ ದೊಡ್ಡದನ್ನು ಪಡೆಯಲಾರದು. ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಮನಸ್ಸು ಪ್ರಬಲವಾಗಿದ್ದರೆ ಮಾರ್ಗ ತಾನಾಗಿಯೇ ಕಾಣಿಸಿಕೊಳ್ಳುತ್ತದೆ. ಯುರೋಪ ದೇಶದ ಮಹಾ ವಿದ್ವಾಂಸರೊಬ್ಬರು ಚಾಣಕ್ಯನ ಕೀರ್ತಿಯ ಬಗ್ಗೆ ಕೇಳಿದ್ದರು. ಚಾಣಕ್ಯನನ್ನು ಕಾಣಲು ಬಹಳ ಕುತೂಹಲಿಗಳಾಗಿದ್ದರು. ಭಾರತಕ್ಕೆ ಬಂದಿಳಿದ ಯುರೋಪಿ ವಿದ್ವಾಂಸರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ಚಾಣಕ್ಯನನ್ನೇ’ಇಲ್ಲಿ ಚಾಣಕ್ಯನಿದ್ದಾನೆಯೇ ಎಂದು ಕೇಳಿದರು. ಹೌದು, ಚಾಣಕ್ಯ ಇಲ್ಲಿಯೇ ಗುಡಿಸಲಲ್ಲಿ ಇದ್ದಾನೆ ಹೋಗಿ ಎಂದ. ವಿದ್ವಾಂಸನು ಗುಡಿಸಲ ಹತ್ತಿರ ಹೋಗಿ ನೋಡಿದ. ಅಲ್ಲಿ ಒಂದಿಷ್ಟು ಬಟ್ಟೆ ಪುಸ್ತಕ ಮಣ್ಣಿನ ಪಾತ್ರೆ ಬಿಟ್ಟರೆ ಏನೂ ಇರಲಿಲ್ಲ. ಸಾಮ್ರಾಜ್ಯವನ್ನು ಕಟ್ಟಿದ ಮಹಾ ಚಾಣಾಕ್ಷ ಹೀಗೆ ಇರಲು ಸಾಧ್ಯವಿಲ್ಲ. ಆತ ತಪ್ಪಾಗಿ ಹೇಳಿದ್ದಾನೆ ಅಂದುಕೊಂಡ. ಸ್ವಲ್ಪ ಸಮಯದಲ್ಲಿ ಸ್ನಾನ ಮಾಡಿ ಗುಡಿಸಲಿಗೆ ಮರಳಿದ. ಚಾಣಕ್ಯನ ತೇಜಃಪುಂಜವಾದ ವ್ಯಕ್ತಿತ್ವವನ್ನು ಕಂಡ ವಿದ್ವಾಂಸ ಚಕಿತಗೊಂಡು,’ತಾವೇ ಚಾಣಕ್ಯ ಇರಬೇಕೆಂದು ಅನಿಸುತ್ತದೆ. ಎಂದು ಕೇಳಿದ.ಅದಕ್ಕೆ ಚಾಣಕ್ಯ ಹೌದು ನಾನೇ ಎಂದ. ದೊಡ್ಡ ರಾಜ್ಯವನ್ನು ಕಟ್ಟಿದ ವ್ಯಕ್ತಿ ಹೀಗಿರಲು ಸಾಧ್ಯವೇ? ಎಂದ ವಿದ್ವಾಂಸ. ಅದಕ್ಕೆ ಚಾಣಕ್ಯ,’ಮನುಷ್ಯ ದೊಡ್ಡವನಾಗುವುದು ಭೌತಿಕ ಸಿರಿವಂತಿಕೆಯಿಂದಲ್ಲ.ಹೃದಯವಂತಿಕೆಯಿಂದ ವಿಶಾಲವಾದ ಮನಸ್ಸಿನಿಂದ ಎಂದ. ಐಷಾರಾಮಿ ಸೌಕರ್ಯ ಸೌಲಭ್ಯಗಳ ಬೆನ್ನು ಹತ್ತಿದ ನಾವು ಚಾಣಕ್ಯನಂತೆ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಹೃದಯ ವೈಶಾಲ್ಯತೆ ಜತೆ ಹೆಚ್ಚು ಭಾವ ಸ್ಪಷ್ಟತೆ ಗಳಿಸಿದಷ್ಟು ವ್ಯತಿರಿಕ್ತ ಪರಿಸ್ಥಿತಿಯನ್ನೂ ಹೆಚ್ಚು ಹೆಚ್ಚು ದಿಟ್ಟತನದಿಂದ ಉತ್ಸಾಹದಿಂದ ಎದುರಿಸಲು ಸಾಧ್ಯ.
ಅಂತಃಸ್ಪೂರ್ತಿ ಬಡಿದೆಬ್ಬಿಸಿ
ಬದುಕಿನ ಮೌಲ್ಯಗಳು ಕುಸಿಯುತ್ತಿವೆ ಎಂಬ ಕೂಗು ಜೋರಾಗಿ ಕೇಳುತ್ತಿರುವ ಈ ಸಂದರ್ಭದಲ್ಲಿ ಜೀವನಾಸಕ್ತಿಯೂ ಸೊರಗುತ್ತಿದೆ. ಹೀಗಾಗಿ ಅಂತಃಸ್ಪೂರ್ತಿಗೆ ಭಾವ ಸ್ಪೂರ್ತಿಗೆ ತುಕ್ಕು ಹಿಡಿದಂತಾಗಿದೆ. ಒಮ್ಮೊಮ್ಮೆ ಭಾವಸ್ಪೂರ್ತಿಯು ಕೇವಲ ಕೆಲವೇ ಕೆಲ ನಿಮಿಷಗಳಲ್ಲಿ ದಕ್ಕಿಬಿಡುತ್ತದೆ. ಅದು ಅಂತಃಸ್ಪೂರ್ತಿಯನ್ನು ಅರಳಿಸುತ್ತದೆ. ಅದು ಜೀವನ ಕಲೆಗಳ, ಬದುಕಿನ ತತ್ವಗಳ ಕುರಿತು ಪ್ರೀತಿ ಬೆಳೆಸಿಕೊಳ್ಳುವುದನ್ನು ಅವಲಂಬಿಸಿದೆ. ಅಂತಃಸ್ಪೂರ್ತಿ ನಿಜಕ್ಕೂ ಅಸಾಧಾರಣ ಸ್ಪೂರ್ತಿ. ಸಾಧಾರಣ ಎನಿಸುವ ವ್ಯಕ್ತಿಯನ್ನೂ ಅಸಾಧಾರಣವೆನಿಸುವ ಮಹತ್ಕಾರ್ಯಗಳಿಗೆ ಪ್ರೇರೇಪಿಸುವಂಥದು. ಬದುಕಿನ ದಾರಿಯಲ್ಲಿ ನಕ್ಷತ್ರಕನಂತೆ ಗಂಟು ಬಿದ್ದಿರುವ ಸೋಲುಗಳ ಕತ್ತು ಹಿಸುಕುತ್ತದೆ. ಅನಿರೀಕ್ಷಿತವಾಗಿ ಸಂಭವಿಸಿದ ದುರ್ಘಟನೆಗಳಿಗೆ ಕೊರಗಿಸುವ ಭಯದ ಭಾವವನ್ನು ಹತ್ತಿಕ್ಕುತ್ತದೆ. ಆದದ್ದಾಯಿತು. ನಾನಿನ್ನು ಹೆದರಲಾರೆ. ನನ್ನಲ್ಲಿರುವ ಸಾಮರ್ಥ್ಯದಿಂದ ಎಂಥದೇ ದುರ್ಭಾವವನ್ನು ತಡೆಯಬಲ್ಲೆ. ಎಂಬ ನಿಲುವನ್ನು ಬೆಳೆಸುತ್ತದೆ. ನಿಶ್ಚಯಿಸಿದ ಗುರಿಯನ್ನು ಸಾಧಿಸಬಲ್ಲ ನವಚೈತನ್ಯವನ್ನು ತುಂಬಬಲ್ಲ ಅಂತಃಸ್ಪೂರ್ತಿಯನ್ನು ಬಡೆದಿಬ್ಬಿಸಿದಾಗ ಮಾತ್ರ ಭಾವಗಳಿಗೆ ಚೇತನ ತುಂಬಲು ಸಾಧ್ಯ.
*ಕೊನೆ ಹನಿ*
ಮನಸ್ಸಿನಲ್ಲಿರುವುದನ್ನು ಎಲ್ಲಿ ಬೇಕಾದಲ್ಲಿ, ಹೇಗೆ ಬೇಕೆಂದರೆ ಹಾಗೆ, ಸಂಬಂಧವಿರದವರ ಮುಂದೆ, ಸಂಬಂಧಿಸಿದವರ ಹಿಂದೆ ಹೇಳಿಕೊಳ್ಳುವುದು ಸೂಕ್ತವಲ್ಲ. ವಿವೇಕದಿಂದ ಮಾತ್ರ ಇತರರ ಭಾವಗಳ ಗೆಲ್ಲಬಹುದು. ವಿವೇಕವೆಂದರೆ ನಮ್ಮ ಮನಸ್ಸಿನಲ್ಲಿರುವುದನ್ನು ಯಾವಾಗ ಹೇಳಬೇಕೆಂದು ತಿಳಿಯುವಿಕೆ. ಮತ್ತು ನಮ್ಮ ಮಾತಿನ ಬಗ್ಗೆ ಗಮನವಿರಿಸಿಕೊಳ್ಳುವಿಕೆ ಆಗಿದೆ. ಗೆಲ್ಲುವಿಕೆ ಮೊದಲಾಗುವುದು ಪ್ರಾರಂಭಿಸುವುದರಿಂದ ಹಾಗಾದರೆ ತಡವೇಕೆ ಇಂದಿನಿಂದಲೇ ಜೀವ ಕಳೆದುಕೊಂಡಿರುವ ಭಾವಗಳಿಗೆ ಹಾರಾಡುತ್ತಿರುವ ದುರ್ಭಾವಗಳಿಗೆ ಅಕ್ಕರೆಯಿಂದ ಪಾಠ ಕಲಿಸಿ ಬಾಳು ಬೆಳಗಿಸಿಕೊಳ್ಳೋಣ ಬನ್ನಿ.