ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಲೌಕಿಕ, ಅಲೌಕಿಕ, ಸತ್ಯ, ನಿಷ್ಠೆಯಿಂದ ನಡೆಯಲು ಸಂದೇಶ ನೀಡಿದ್ದಾರೆ. ಅದರಲ್ಲಿ ಕಾಯಕ, ದಾಸೋಹ ಪೂಜೆಯಾಗಬೇಕು ಎಂದು ಉಪನ್ಯಾಸಕಿ ಶಾರದಾ ಕೊಪ್ಪ ಐಹೊಳ್ಳಿ ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಸಭಾ ಭವನದಲ್ಲಿ ಏರ್ಪಡಿಸಿದ ೭೫ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ‘ವಚನ ಬಂಡಾಯ ಶಾಂತರಸ ಅವರ ಬದುಕು ಮತ್ತು ಸಾಧನೆ’ ಕುರಿತು ಮಾತನಾಡಿದರು.
ಅನುಭವ ಮಂಟಪದ ಅಂಗ ಸಂಸ್ಥೆ ಅದರ ಕಾರ್ಯ ಬಸವಾದಿ ಶರಣರು ರಚಿಸಿದ ವಚನಗಳನ್ನು ವ್ಯವಸ್ಥಿತವಾಗಿ ಜೋಡಿಸಿರುವ ಕಾರ್ಯ ಶಾಂತರಸರದು ಅದರಂತೆ ಶರಣರ ವಚನಗಳನ್ನು ಬರೆದು ಬರೆಸುವ ನಡೆದಂತೆ ನುಡಿಯುವ ಚಿಂತನ-ಮಂಥನ ನಡೆದು ಬಸವಣ್ಣನವರ ಮುದ್ರೆಯೊಂದಿಗೆ ಭಂಡಾರಕ್ಕೆ ಕಳುಹಿಸುವ ಕಾಯಕ ಮಾಡುತ್ತ ವಚನ ಕಟ್ಟುಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದರು. ಶಾಂತರಸರು ಶರಣರು ಗ್ರಂಥಾಲಯ ಭಂಡಾರದ ಮುಖ್ಯಸ್ಥರು. ಜನರಿಂದ ಜನರಿಗಾಗಿ ವಚನ ಭಂಡಾರ ಶಾಂತರಸರು ‘ಅಲೇಖನಾದ ಶೂನ್ಯ ಕಲ್ಲಿದೇವ’ ಎಂಬ ಅಂಕಿತನಾಮ ಇಟ್ಟುಕೊಂಡು ಸರ್ವೋದಯದ ಏಳ್ಗೆಗಾಗಿ ೬೫ ಬೆಡಗಿನ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳು ಇಂದಿಗೂ ಬದುಕಿಗೆ ಬೆಳಕು ನೀಡುವ ಸಾಧನವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಹಾಸಭೆಯ ಕಾರ್ಯದರ್ಶಿ ದೊಡ್ಡಣ್ಣ ಬಜಂತ್ರಿ ಮಾತನಾಡಿ, ಶಾಂತರಸರ ವಚನಗಳಲ್ಲಿ ಸಾಮಾಜಿಕ ಅನಿಷ್ಠ ಪದ್ದತಿ ವೈಚಾರಿಕ ನೆಲೆ, ಸಮಾಜ ಪರಿವರ್ತನೆಗೆ ಶ್ರೇಷ್ಟ ಮಂತ್ರಗಳಿದ್ದ ಹಾಗೆ ಎಂದರು.
ಮಹಾಸಭೆ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡುತ್ತ, ವಚನ ಭಂಡಾರಿ ಶಾಂತರಸರು ರಾಜ ಮನೆತನಕ್ಕೆ ಸೇರಿದವರು ಬಸವಾದಿ ಶರಣರ ಬದುಕಿನ ನುಡಿಗಳು, ನಡೆ, ನುಡಿ, ಚಿಂತನ, ಮಂಥನ ಮಾಡಿ ತಾಡೊಲೆಗಳನ್ನು ತಯಾರಿಸಿ ಸಂರಕ್ಷಿಸಿ ದೊಡ್ಡ ಕಾರ್ಯ ಶಾಂತರಸರು ಮಾಡಿದ್ದಾರೆ. ಹೀಗಾಗಿ ಅವರಿಗೆ ವಚನ ಭಂಡಾರಿ ಎಂದು ಬಸವಣ್ಣನವರು ಕರೆಯುತ್ತಿದ್ದರು ಎಂದರು.
ಡಾ. ಸೋಮಶೇಖರ ವಾಲಿ, ಅಪ್ಪಾಸಾಹೇಬ ಕೋರಿ ವಚನಗೀತೆ ಪ್ರಸ್ತುತ ಪಡಿಸಿದರು.
ಡಾ. ಸಂಗಮೇಶ ಮೇತ್ರಿ ಸ್ವಾಗತಿಸಿದರು. ವಿಠ್ಠಲ ತೇಲಿ ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮ.ಗು.ಯಾದವಾಡ, ಬಸವರಾಜ ಒಂಟಗೊಡೆ, ನೂತನ ಬ್ಯಾಕೋಡ, ಸುಭಾಸ ಬೆಟಗೇರಿ, ಡಾ. ವಿ.ಡಿ. ಐಹೊಳ್ಳಿ, ಕಾಶೀನಾಥ ಅಣೆಪ್ಪನವರ, ವಿಶ್ರಾಂತ ಎ.ಎಸ್.ಐ. ಪಟ್ಟಣಶೆಟ್ಟಿ, ಈರಣ್ಣ ತೊಂಡಿಕಟ್ಟಿ ಹಾಗೂ ಶರಣರು, ಶರಣೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

