ಡಾ.ಬಾಬು ಜಗಜೀವನ ರಾಮ್ ಜಯಂತಿ ಆಚರಿಸದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಮುಖಂಡರ ಮನವಿ
ಉದಯ ರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ನಿರ್ಲಕ್ಷಿಸಿದ ಅಧಿಕಾರಿ ರವೀಂದ್ರ ಮುರಗಾಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಿವಾನಂದ ಸೌದಾಗರ್ ಹಾಗೂ ದಲಿತ ಸಮುದಾಯದ ಮುಖಂಡರು ತಹಸೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಿವಾನಂದ ಸೌದಾಗರ್, “ತಾಲೂಕು ಆಡಳಿತದ ವತಿಯಿಂದ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆದರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿಯಲ್ಲಿ ಒಬ್ಬ ರಾಷ್ಟ್ರೀಯ ನಾಯಕರ ಜಯಂತಿಯನ್ನು ಆಚರಿಸದೆ ಇರುವುದು ವಿಷಾದನೀಯ. ಈ ಬಗ್ಗೆ ಅಧಿಕಾರಿ ರವೀಂದ್ರ ಮುರಗಾಲಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಸಂಜೆ 4 ಗಂಟೆಯ ಸುಮಾರಿಗೆ ಸಿಬ್ಬಂದಿ ಬಂದು ಕಾಟಾಚಾರಕ್ಕೆ ಪೂಜೆ ಸಲ್ಲಿಸಿದ್ದಾರೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮಾರನೇ ದಿನ ಅಧಿಕಾರಿಯನ್ನು ಭೇಟಿ ಮಾಡಿ ಪ್ರಶ್ನಿಸಿದಾಗ, ‘ನನಗೂ ಇದಕ್ಕೂ ಸಂಬಂಧವಿಲ್ಲ, ನಾನು ರಜೆಯಲ್ಲಿ ಇದ್ದೆ,ನಾನು ಸಿಬ್ಬಂದಿಗೆ ಹೇಳಿದ್ದೆ. ಅವರ ಮೇಲೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆ’ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಕಚೇರಿ ಆವರಣದಲ್ಲಿ ಪ್ರತಿಭಟಿಸುತ್ತಿದ್ದ ನಮ್ಮನ್ನು ಮಾತನಾಡಿಸದೆ ಹೋದ ಅಧಿಕಾರಿಯ ನಡವಳಿಕೆ ಅತ್ಯಂತ ಬೇಸರ ತಂದಿದೆ. ಕೂಡಲೇ ಇಂತಹ ಬೇಜವಾಬ್ದಾರಿ ಅಧಿಕಾರಿಯ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಂಕರ ಶಿಂದೆ, ಸದಾಶಿವ ಸಿಕ್ರೆ, ಅಪ್ಪಾಸಾಬ ಸೌದಾಗರ್, ಶೇಖರ್ ಸೌದಾಗರ, ಕಿಶನ್ ಸೌದಾಗರ, ಅಶೋಕ್ ಕಾಂಬಳೆ, ಸಂಜು ರಾಯಬಾಗಕರ್, ಕುಮಾರ ಸಣ್ಣಕ್ಕಿ, ಸುನೀಲ್ ಹರಳೆ, ಜವಾಹರಲಾಲ್ ಸೌದಾಗರ, ಸೇರಿದಂತೆ ದಲಿತ ಸಮುದಾಯದ ಕಾರ್ಯಕರ್ತರು ಉಪಸ್ಥಿತರಿದ್ದರು.

