ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ಗುರುವೀರಸಿದ್ಧ ಶಿವಯೋಗಿಗಳ 76 ನೇ ಜಾತ್ರಾಮಹೋತ್ಸವ ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿಯವರ ಚತುರ್ಥ ಪುಣ್ಯಾರಾಧನೆಯಂಗವಾಗಿ ಸೋಮವಾರ ಪ್ರಥಮ ಬಾರಿಗೆ ಗ್ರಾಮದ ಸೈನಿಕ ಬಳಗದ ಸಹಯೋಗದಲ್ಲಿ ಐದು ಕಿಲೋ ಮೀಟರ್ ಮೆಗಾ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ಜರುಗಿತು.
ಓಟದ ಸ್ಪರ್ಧೆಗೆ ನಂದಿಮಠದ ವೀರಸಿದ್ಧ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದ ಅವರು ಶ್ರೀಮಠದ ಜಾತ್ರಾ ಮಹೋತ್ಸವದಂಗವಾಗಿ ಸೈನಿಕ ಬಾಂಧವರು ಪ್ರಥಮ ಬಾರಿಗೆ ಯುವಕರ ನಡೆ ಕ್ರೀಡೆಯೆಡೆಗೆ ಧ್ಯೇಯದೊಂದಿಗೆ ಇಂತಹ ಓಟದ ಸ್ಪರ್ಧೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದು ಯುವಜನಾಂಗವು ಅಧ್ಯಯನದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡುವಂತಾಗಲೆಂದು ಆಶಯ ವ್ಯಕ್ತಪಡಿಸಿದರು.
ಮಾಜಿ ಸೈನಿಕ ಭೀಮನಗೌಡ ಪಾಟೀಲ ಮಾತನಾಡಿ, ಯುವಜನಾಂಗಕ್ಕೆ ದೇಶ ಪ್ರೇಮ, ಸೇವೆ ಸಲ್ಲಿಸಲು ಪ್ರೇರಣೆ ನೀಡುವ ಸದುದ್ದೇಶದಿಂದ ಇಂತಹ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಿರುವದು ಒಳ್ಳೆಯದು. ಯುವಜನಾಂಗವು ಸೈನಿಕರಾಗಲು ಉತ್ತಮ ದೈಹಿಕ ಸಾಮರ್ಥ್ಯ ಹೊಂದುವ ಜೊತೆಗೆ ಉತ್ತಮ ನಡುವಳಿಕೆ ಹೊಂದಬೇಕು. ಸೈನ್ಯಕ್ಕೆ ಸೇರಲು ಬೇಕಾದ ಅರ್ಹತೆ ಕುರಿತು ಹೇಳಿದರು.
ಈ ಸಂದರ್ಭದಲ್ಲಿ ಯಡ್ರಾಮಿಶ್ರೀಗಳು, ಸೈನಿಕ ಬಾಂಧವರಾದ ಸಂಗಪ್ಪ ಹೂಗಾರ, ಮಡಿವಾಳಪ್ಪ ಕಟ್ಟೀಮನಿ, ನಿಂಗನಗೌಡ ಮುರಾಳ, ಗಂಗಾಧರ ಪತ್ತಾರ, ಬಾಬುಗೌಡ ಸೇರಿದಂತೆ ಹಲವರಿದ್ದರು.

