ಉದಯರಶ್ಮಿ ದಿನಪತ್ರಿಕೆ
ಅಥಣಿ: ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಗೌರವಯುತವಾಗಿ ಆಚರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಅಧಿಕಾರಿ ರವೀಂದ್ರ ಮುರಗಾಲಿ ಅವರ ಧೋರಣೆಯನ್ನು ಖಂಡಿಸಿ, ಸೋಮವಾರ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಶಿವಾನಂದ ಸೌದಾಗರ ತಿಳಿಸಿದ್ದಾರೆ.
ಮಾಧ್ಯಮದವರ ಮುಂದೆ ಮಾತನಾಡಿದ ಶಿವಾನಂದ ಸೌದಾಗರ, ಅಧಿಕಾರಿಗಳ ಬೇಜವಾಬ್ದಾರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. “ಜಯಂತಿಯ ದಿನದಂದು ಕಚೇರಿಯಲ್ಲಿ ಯಾವುದೇ ಪೂಜೆ ಪುನಸ್ಕಾರ ಮಾಡಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ. ದಲಿತ ಮುಖಂಡರು ಒತ್ತಾಯಿಸಿದ ನಂತರ ಮಧ್ಯಾಹ್ನ 2 ಗಂಟೆಗೆ ಪೂಜೆ ಮಾಡಲು ಸಂತೋಷ್ ಚೌವ್ಹಾಣ್ ಎಂಬ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು. ಆದರೆ, ಆ ಸಿಬ್ಬಂದಿ ಮದ್ಯದ ಅಮಲಿನಲ್ಲಿ ಕಚೇರಿಗೆ ಬಂದು ಪೂಜೆ ಮಾಡಲು ಮುಂದಾಗಿದ್ದಾನೆ. ಇದನ್ನು ಸಾರ್ವಜನಿಕರು ಪ್ರಶ್ನಿಸಿದಾಗ ಕಚೇರಿಯನ್ನು ತೆರೆದಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ತದನಂತರ ಸಂಜೆ 3:50ರ ಸುಮಾರಿಗೆ ಇಲಾಖೆಯ ಸಿಪಾಯಿ ಬಂದು ಕಾಟಾಚಾರಕ್ಕೆ ಪೂಜೆ ಮುಗಿಸಿದ್ದಾರೆ” ಎಂದು ಅವರು ಆರೋಪಿಸಿದರು.
ಮರುದಿನ ಮಧ್ಯಾಹ್ನ 3 ಗಂಟೆಗೆ ಕಚೇರಿಗೆ ಆಗಮಿಸಿದ ಅಧಿಕಾರಿ ರವೀಂದ್ರ ಮುರಗಾಲಿ ಅವರನ್ನು ಶಿವಾನಂದ ಸೌದಾಗರ ಹಾಗೂ ಇತರ ನಾಯಕರು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಉತ್ತರಿಸಿದ ಅಧಿಕಾರಿಯು, “ನಾನು ರಜೆಯಲ್ಲಿದ್ದ ಕಾರಣ ಬರಲು ಸಾಧ್ಯವಾಗಲಿಲ್ಲ. ಮದ್ಯ ಸೇವಿಸಿ ಬಂದ ಸಿಬ್ಬಂದಿ ಸಂತೋಷ್ ಚೌವ್ಹಾಣ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ನಾಯಕರ ಜಯಂತಿಯನ್ನು ಅವಮಾನಿಸಿದ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನಾಳೆ ಬೆಳಿಗ್ಗೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಲಿದೆ. “ಈ ಘಟನೆಯು ದಲಿತ ಸಮುದಾಯಕ್ಕೆ ಹಾಗೂ ಮಹಾನ್ ನಾಯಕರಿಗೆ ಮಾಡಿದ ಅಪಮಾನ. ಆದ್ದರಿಂದ ನಾಳೆ ದಲಿತ ಸಮಾಜದ ಮುಖಂಡರು, ಪ್ರಮುಖರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ಧ್ವನಿ ಎತ್ತಬೇಕು” ಎಂದು ಸೌದಾಗರ ಕರೆ ನೀಡಿದ್ದಾರೆ.

