ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡದಿದ್ದಲ್ಲಿ ಮಾದಿಗ ಸಮುದಾಯದಿಂದ ಉಗ್ರ ಹೋರಾಟದ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಒಳ ಮೀಸಲಾತಿ ಜಾರಿ ಮಾಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ತಾಲೂಕಿನ ಮಾದಿಗ ಸಮುದಾಯದ ಮುಖಂಡರು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮ ಬಹಿಷ್ಕರಿಸಿ ಹೊರಬಂದರು.
ಒಳಮೀಸಲಾತಿ ಜಾರಿ ಮಾಡದ ಹೊರತು ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯದ ಮುಖಂಡರು ಪಾಲ್ಗೊಳ್ಳುವುದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಮೊದಲ ಎಚ್ಚರಿಕೆ. ಉಪಚುನಾವಣೆ ಮುಗಿದ ಬಳಿಕವೂ ಕುಂಟು ನೆಪವೊಡ್ಡಿ ಒಳಮೀಸಲಾತಿ ಜಾರಿ ಮಾಡದೇ ಹೋದರೆ ರಾಜ್ಯದಂತ ಉಗ್ರಹೋರಾಟ ಮಾಡಲಾಗುವುದು ಎಂದು ಮಾದಿಗ ಸಮುದಾಯದ ಮುಖಂಡರು ಕಠೋರವಾಗಿಯೇ ಎಚ್ಚರಿಕೆ ನೀಡಿದರು.
ಪಟ್ಟಣದ ಆಡಳಿತ ಸೌಧದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಅನಿಲ್ ಚಿಕ್ಕಮಾದು ಜೊತೆಗೂಡಿ ಡಾ.ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿದ ನಂತರ ಮಾದಿಗ ಸಮುದಾಯದ ಮುಖಂಡರು, ಒಳಮೀಸಲಾತಿ ಹೋರಾಟಕ್ಕೆ ಒಳ್ಳೆಯದಾಗಲಿ, ಜಾರಿ ಮಾಡದ ಸರ್ಕಾರಕ್ಕೆ ಧಿಕ್ಕಾರ ಇರಲಿ ಎಂದು ಘೋಷಣೆ ಕೂಗುತ್ತಾ ಕಾರ್ಯಕ್ರಮದಿಂದ ಹೊರಗಡೆ ಬಂದರು. ಮಾದಿಗ ಮುಖಂಡರು ಹೊರಬರುತ್ತಿದಂತೆ ಶಾಸಕ ಅನಿಲ್ ಚಿಕ್ಕಮಾದು ಕೂಡ ಕಾರ್ಯಕ್ರಮದ ವೇದಿಕೆ ಮೇಲೆ ಕೂರದೆ ಹೊರಗಡೆ ಬಂದರು.
ನಂತರ ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆಯ ಅಧ್ಯಕ್ಷ ಸಿ. ತಿಮ್ಮಯ್ಯ ನೇತೃತ್ವದಲ್ಲಿ ಹೊರಗಡೆ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತಾಲೂಕಿನ ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆಯ ಅಧ್ಯಕ್ಷ ಸಿ. ತಿಮ್ಮಯ್ಯ ಮಾತನಾಡಿ, ನಮ್ಮ ಸಮುದಾಯದ ಬಹು ದಿನಗಳ ಬೇಡಿಕೆಯಾದ ಒಳ ಮೀಸಲಾತಿಯನ್ನು ಜಾರಿ ಮಾಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕೆಲ ಸಮುದಾಯದ ಹಿತಕ್ಕಾಗಿ ೩೫ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ನಮ್ಮ ಸಮುದಾಯಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವರ ಬೆದರಿಕೆಗೆ ಮಣಿಯದೆ ಒಳಮೀಸಲಾತಿಯನ್ನು ಯಥಾವತ್ ಜಾರಿ ಮಾಡಬೇಕು ಎಂದು ಒತ್ತಾಯ ಮಾಡಿದರು.
ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ. ನಾಗರಾಜು ಮಾತನಾಡಿ, ರಾಜ್ಯ ಸರ್ಕಾರ ಕುಂಟು ನೆಪ ಹೇಳೋದನ್ನ ಬಿಟ್ಟು ಒಳಮೀಸಲಾತಿ ಜಾರಿ ಮಾಡಬೇಕು. 15% ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಿ 56432 ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಪರಶಿವಮೂರ್ತಿ, ಉಡ ನಾಗರಾಜು, ಶಿವಯ್ಯ, ಮಹದೇವಯ್ಯ, ಚೆಲುವರಾಜು, ಡಿ. ನಾಗರಾಜು, ಸೋಮು ಪಟೇಲ್, ಶಿವರಾಜ್, ಕೆ.ಟಿ. ಹರೀಶ್, ಕಾಳಪ್ಪಾಜಿ ಸಿ, ಬೆಟ್ಟಸ್ವಾಮಿ, ಶಿವರಾಜ್, ಗಿರಿ ಪ್ರಸಾದ್, ದೇವನಾಥ್, ಮಹದೇವು, ರವೀಶ್, ಶಿವಲಿಂಗಯ್ಯ, ನಾಗೇಂದ್ರ, ಕಾಳಯ್ಯ, ಚೇತನ್ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.

