ಶ್ರೀ ಚಿಕ್ಕದೇವಮ್ಮ ಬೆಟ್ಟದ ಪಾರುಪತ್ತೇದಾರ್ ಮಹದೇವಸ್ವಾಮಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸರಗೂರು: ಹಿಂದೂ ಸನಾತನ ಪರಂಪರೆಯು ಜಗತ್ತಿನ ಅತಿ ಹಳೆಯ ಮತ್ತು ದಾರ್ಶನಿಕ ಸಂಸ್ಕೃತಿಯಾಗಿದ್ದು, ಇದನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಎಂದು ಶ್ರೀ ಚಿಕ್ಕದೇವಮ್ಮ ಬೆಟ್ಟದ ಪಾರುಪತ್ತೇದಾರ್ ಶಾಂತಿಪುರ ಮಹದೇವಸ್ವಾಮಿ ಹೇಳಿದರು.
ಪಟ್ಟಣದ ಜೈನಭವನದಲ್ಲಿ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕು ಶಿವಾರ್ಚಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶೈವಾಗಮ ರೀತ್ಯಾ ಅರ್ಚಕರ ಪೂಜಾ ತರಬೇತಿ ಹಾಗೂ ಪಂಚಾಂಗ ಪರಿಚಯ, ದೀಕ್ಷಾ ಉಪನಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ವಾನ್ ಮಲ್ಲಣ್ಣನವರ ನೇತೃತ್ವದಲ್ಲಿ ಸರ್ಕಾರಿ ಸಂಸ್ಕೃತ ಪಾಠ ಶಾಲೆಯ ನಿವೃತ್ತ ಪ್ರಾಧ್ಯಾಪಕರಿಂದ ಶಿಬಿರಾರ್ಥಿಗಳಿಗೆ ಪೂಜಾ ವಿಧಿವಿಧಾನಗಳು, ಮಂತ್ರೋಚ್ಛಾರಣೆ, ಶ್ಲೋಕಗಳು, ಮತ್ತು ದೇವಸ್ಥಾನದ ಆಚರಣೆಗಳ ಬಗ್ಗೆ ತಿಳಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಶಿಬಿರಾರ್ಥಿಗಳು
ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು, ಇಡೀ ದೇಶಕ್ಕೆ ಮಾದರಿಯಾಗುವಂತಹ ಪರಿಪೂರ್ಣ ಜ್ಞಾನ ಹೊಂದಿರಬೇಕು ಎಂಬುದಷ್ಟೇ ದೀಕ್ಷಾ ಉಪನಯನ ಉದ್ದೇಶವಾಗಿದೆ. ಎಪ್ರಿಲ್ 22ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತೆ ಎಂದು ಪಾರುಪತ್ತೇದಾರ್ ಶಾಂತಿಪುರ ಮಹದೇವಸ್ವಾಮಿ ಹೇಳಿದರು.
ವಿದ್ವಾನ್ ಮಲ್ಲಣ್ಣ ಅವರು ಮಾತನಾಡಿ ಸುಮಾರು 100 ಶಿಬಿರಾರ್ಥಿಗಳಿಗೆ ದೀಕ್ಷಾ ಉಪನಯನ ಮಾಡಲಾಗಿದೆ. ಸನಾತನ ಧರ್ಮದ ಮುಖ್ಯ ಉದ್ದೇಶವೆಂದರೆ ಮನುಷ್ಯನನ್ನು ಅವನ ಆಧ್ಯಾತ್ಮಿಕ ಸ್ವಭಾವದೊಂದಿಗೆ ಸಂಪರ್ಕಿಸುವುದು ಮತ್ತು ಅವನ ನೈಜ ಸ್ವಭಾವದೊಂದಿಗೆ ಸಂಪೂರ್ಣತೆಯನ್ನು ಬೆಳೆಸುವುದು. ಎಲ್ಲರಲ್ಲೂ ಸಮಾನತೆಯ ಭಾವ ಮೂಡಿದಾಗ ಮಾತ್ರ ವಿಶ್ವ ಶಾಂತಿಯುತವಾಗಿರಲು ಸಾಧ್ಯ ಎಂದು ಹೇಳಿದರು.

