ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಶೋಷಿತ ವರ್ಗಗಳ ಆಶಾದೀಪವಾಗಿದ್ದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ ಅವರ ಕೊಡುಗೆ ಅಪಾರ ಮತ್ತು ಅನುಪಮ ಎಂದು ತಹಶೀಲ್ದಾರ ಸಂತೋಷ ಮ್ಯಾಗೇರಿ ಹೇಳಿದರು.
ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ರಾಂ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬು ಜಗಜೀವನ್ ರಾಂ ಅವರು ಕೇಂದ್ರ ಸರ್ಕಾರದಲ್ಲಿ ನಾಲ್ಕು ದಶಕಗಳ ಕಾಲ ಮಂತ್ರಿಯಾಗಿ ಸೇವೆ ಸಲ್ಲಿಸಿ ವಿಶಿಷ್ಟ ದಾಖಲೆ ನಿರ್ಮಿಸಿದ ಮಹಾನ್ ರಾಜಕೀಯ ಮುತ್ಸದ್ದಿ ಎಂದು ಹೇಳಿದರು.
ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ತಳ ಸಮುದಾಯಗಳ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಅವರು, ಕಾರ್ಮಿಕ, ಆಹಾರ, ರೈಲ್ವೆ, ರಕ್ಷಣಾ, ಕೃಷಿ, ಸಾರಿಗೆ ಮತ್ತು ಸಂಪರ್ಕ ಸೇರಿದಂತೆ ವಿವಿಧ ಪ್ರಮುಖ ಖಾತೆಗಳಲ್ಲಿ ಸಚಿವರಾಗಿ ಹಾಗೂ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಸಿರು ಕ್ರಾಂತಿಯ ಹರಿಕಾರರಾಗಿ ದೇಶವನ್ನು ಆಧುನಿಕತೆಯ ದಾರಿಗೆ ತಂದ ಮಹನೀಯರೆಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಮದ್ದೀನ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ, ಕೃಷ್ಣ ಗೂಡೂರು, ಎನ್.ಕೆ. ನದಾಫ್, ಸೈಫಾನ್ ಕೊರ್ತಿ, ರಾಮನಗೌಡ ಪಾಟೀಲ, ಶ್ರೀಶೈಲ ಹಂಡಿ, ಆರ್.ಐ. ಹುಡೇದ, ಮುಖಂಡರಾದ ಧಶರತ ಈಟಿ, ಬಾಬು ಭಜಂತ್ರಿ, ನಿಂಗು ಗಣಿ, ಶಿಡ್ಲಪ್ಪ ತಳಗೇರಿ, ಶಿಡ್ಲಪ್ಪ ಮಾದರ, ಚಂದ್ರಶೇಖರ ಈಟಿ, ಅಮ್ಮಿನಪ್ಪ ತೆಗ್ಗಿ, ಸೋಮು ಬ್ಯಾಲಾಳ, ಬಸವರಾಜ ಚಲವಾದಿ, ಶಿವಪುತ್ರ ಮೇತ್ರಿ, ಮಂಜುನಾಥ ಬಾಗಾನಗರ, ಗುರು ಚಲವಾದಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮನು ಪತ್ತಾರ ಕಲಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಈಟಿ ವಂದನಾರ್ಪಣೆ ಸಲ್ಲಿಸಿದರು.

