ಲೇಖನ
– ಮನು ಪತ್ತಾರ
ಕಲಕೇರಿ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಈ ರಾಷ್ಟ್ರವನ್ನು ಕಟ್ಟುವಲ್ಲಿ ಅಹರ್ನಿಶಿ ಯಾಗಿ ದುಡಿದ ಮಹನೀಯರಲ್ಲಿ ಬಾಬು ಜಗಜೀವನ್ ರಾಮ್ ರು ಕೂಡಾ ಒಬ್ಬರು, ” ಪ್ರಾಚೀನ ಭಾರತದ ಜನ ತಾಂತ್ರಿಕ ವ್ಯವಸ್ಥೆಯ ತೊಟ್ಟಿಲು” ಎಂದೇ ಕರೆಯಲಾಗುವ ಬಿಹಾರ ರಾಜ್ಯದ ಶಾಹಬಾದ್ ಜಿಲ್ಲೆಯ ಚಂದ್ವಾ ಎಂಬ ಪುಟ್ಟ ಗ್ರಾಮದಲ್ಲಿ ಚಮ್ಮಾರ ಕುಲದ ಶೋಭಿರಾಮ ಮತ್ತು ವಸಂತದೇವಿ ಯವರ ಐದನೇಯ ಮಗನಾಗಿ 1908 ಏಪ್ರಿಲ್ 5 ರಂದು ಜನಿಸಿದ ಜಗಜೀವನರಾಂ, ಭಾರತೀಯ ಶ್ರೇಣೀಕೃತ ಸಮಾಜದ ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಅಲಕ್ಷಿತ ಸಮುದಾಯಗಳನ್ನು ಹೊಸ ಮನ್ವಂತರದ ಕಡೆಗೆ ತೆಗೆದುಕೊಂಡು ಹೋದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಅಲಕ್ಷಿತ ಜನರಿಗೆ ಗಗನ ಕುಸುಮವಾದ ಶಿಕ್ಷಣವನ್ನು ಪಡೆಯಲೇ ಬೇಕೆಂದು ಪಣ ತೊಟ್ಟು ಹಠ ಯೋಗಿಯಂತೆ ದಾಪುಗಾಲು ಹಾಕಿದ ಜಗಜೀವನ್ ರಾಮ್, ತಂದೆ ಶೋಭಿರಾಮ ತಾಯಿ ವಸಂತದೇವಿ ಯವರ ಆದರ್ಶಗಳನ್ನು ಮೈಗೂಡಿಸಿಕೊಂಡವರು, ಶಿವನಾರಾಯಣ ಸಚೇತನ ಪಂತದ ಅನುಯಾಯಿಗಳಾದ ತಂದೆತಾಯಿಯವರು ರಾಮ್ ಅವರಿಗೆ ಬಾಲ್ಯಾವಸ್ಥೆಯಲ್ಲಿಯೇ ಧಾರ್ಮಿಕ, ಆಧ್ಯಾತ್ಮಿಕಯಲ್ಲಿ ಒಲವು ಮೂಡಿಸಿದರು ಮತ್ತು ಸ್ವಾಭಿಮಾನದಿಂದ ಬದುಕುವಂತೆ ಉಪದೇಶ ಮಾಡಿದರು. ಹೀಗಾಗಿ ಜಗಜೀವನರಾಂ ಜೀವನದುದ್ದಕ್ಕೂ ತಮಗಾದ ಅಪಮಾನ ಹಾಗೂ ಅನ್ಯಾಯಗಳನ್ನು ಸಂಯಮದಿಂದ ಸಹಿಸಿಕೊಂಡು ರಾಷ್ಟ್ರ ನಾಯಕರಾಗಿ ಬೆಳೆದು ಸ್ವಾತಂತ್ರ ಭಾರತಕ್ಕೆ ಹೊಸ ದಿಕ್ಕನ್ನು ತೋರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಸಮಾನತೆ, ಸಹೋದರತೆ ಮತ್ತು ಸ್ವಾತಂತ್ರ್ಯದ ಬೀಜಗಳನ್ನು ಚೆಲ್ಲಿದ ಬುದ್ಧ ನ ನಾಡಲ್ಲಿ ಜನಿಸಿದ ಜಗಜೀವನರಾಂ ತಮ್ಮ ಹುಟ್ಟೂರಾದ ಚಂದ್ವಾ ಗ್ರಾಮದಲ್ಲಿ ಶಿಕ್ಷಣಕ್ಕೆ ಓನಾಮ ಹಾಕಿ, ಪಕ್ಕದ ಅರಹಾ ಎಂಬ ಪಟ್ಟಣದಲ್ಲಿರುವ ಅಗರವಾಲ್ ಇಂಗ್ಲಿಷ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆದು, ಶಾಲೆಯವರು ನೀಡುವ ಶುಲ್ಕ ವಿನಾಯಿತಿನ್ನು ತಿರಸ್ಕರಿಸಿ ಈ ವಿನಾಯಿತಿ ನನಗಿಂತ ಬಡವರಿಗೆ ನೀಡುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಿ ಆದರ್ಶ ಮೆರೆದು ಆತ್ಮಾಭಿಮಾನ ಹಾಗೂ ಸ್ವಾಭಿಮಾನವನ್ನು ಎಳೆಯ ವಯಸ್ಸಿನಲ್ಲಿಯೇ ಬೆಳೆಸಿಕೊಂಡು ಬಲಿಷ್ಠವಾಗಿ ಬೆಳೆದು ಸಮಾಜದಲ್ಲಿನ ಅಸ್ಪೃಶ್ಯತೆ ಮತ್ತು ಅಸಮಾನತೆಯ ಕರಾಳ ಮುಖಗಳನ್ನು ಬಯಲಿಗೆಳೆದು ಸೈದ್ಧಾಂತಿಕ ಬದುಕಿಗೆ ಮುನ್ನುಡಿ ಬರೆದರು.
ಅಸ್ಪೃಶ್ಯ ವಿದ್ಯಾರ್ಥಿಗಳಿಗಾಗಿ ಶಾಲೆಯಲ್ಲಿ ಇಟ್ಟಿರುವ ಕುಡಿಯುವ ನೀರಿನ ಗಡಿಗೆಯನ್ನು ಒಡೆಯುವ ಮೂಲಕ ಅಸಮಾನತೆಯ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಿದ ಜಗಜೀವನರಾಂ ರ ಈ ಪ್ರತಿಭಟನೆಯೇ ಅವರ ಮುಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ ಚಿಂತನೆಗಳಿಗೆ ಭದ್ರವಾದ ತಳಪಾಯ ಹಾಕಿತು, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು, ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಂಪರ್ಕಕ್ಕೆ ಬಂದರು, ವಿಶ್ವವಿದ್ಯಾಲಯದಲ್ಲಿ ತಾಂಡವಾಡುತ್ತಿರುವ ಅಸ್ಪೃಶ್ಯತೆಯ ಆಚರಣೆ, ಕ್ಷೌರಿಕ ಕ್ಷೌರ ಮಾಡಲು ನಿರಾಕರಿಸಿದ ಸಂಗತಿಗಳು ಇವರನ್ನು ಘಾಸಿಗೊಳಿಸಿದವು ಈ ಎಲ್ಲಾ ನೋವು ಸಂಕಟಗಳ ಮಧ್ಯೆ ಬನಾರಸ ವಿಶ್ವ ವಿದ್ಯಾಲಯದ ವಿದ್ಯಾಸಾಗರ ಕಾಲೇಜು ಸೇರಿ ವಿಜ್ಞಾನದ ವಿಷಯದಲ್ಲಿ ಪದವಿ ಪಡೆದು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಒಟ್ಟಿಗೆ ಭಾರತೀಯರನ್ನು ಪರಕೀಯರಿಂದ ಮುಕ್ತ ಮಾಡಿ ದಲಿತ, ಹಿಂದುಳಿದ, ಆದಿವಾಸಿ ಹಾಗೂ ಅಲ್ಪಸಂಖ್ಯಾತರ ವಿಮೋಚನೆಗೆ ದಾರಿ ತೋರಿದರು.

ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಜೀವನ ಸಾಗಿದ ಜಗಜೀವನರಾಂ ಎಂಟನೇ ವಯಸ್ಸಿನಲ್ಲಿ ವಿವಾಹ ಬಂಧನಕ್ಕೊಳಗಿ ಸಂಸಾರದ ನೊಗವನ್ನು ಹೆಗಲಿಗೆರಿಸಿಕೊಂಡೆ ದಲಿತರ ದಾಸ್ಯ ವಿಮೋಚನೆ ಹಾಗೂ ರಾಷ್ಟ್ರದ ಸ್ವಾತಂತ್ರ್ಯ ಬೇರೆ ಬೇರೆಯಲ್ಲ ಎಂದು ಭಾವಿಸಿ, ಶೋಷಿತರ ಹಾಗೂ ದುರ್ಬಲ ವರ್ಗಗಳ ಏಕೀಕರಣಕ್ಕಾಗಿ ದುಡಿದರು, ದಲಿತರ ಪ್ರತ್ಯೇಕ ಚುನಾವಣೆ ಕ್ಷೇತ್ರದ ಬೇಡಿಕೆಗೆ ತಣ್ಣೀರೆರಚಿದ ಪೂನಾ ಒಪ್ಪಂದ ಭಾರತದ ಚರಿತ್ರೆಯಲ್ಲಿ ದಲಿತರ ಮ್ಯಾಗ್ನಕಾರ್ಟ್ ಆಗಲು ಸಾಧ್ಯವಾಗದೇ ಹೋಗಿದ್ದು ಈ ದೇಶದ ದುರಂತವೇ ಸರಿ, ದಲಿತರ ಈ ಪ್ರಭಾವ ಶಾಲಿ ರಾಜಕೀಯ ಅಸ್ತ್ರವನ್ನು ರದ್ದುಗೊಳಿಸುವಂತೆ ಹಠ ಮಾಡಿದ ಗಾಂಧಿ ಜೀ ಯ ಉಪವಾಸ ಸತ್ಯಾಗ್ರಹವನ್ನು ಕಟುವಾಗಿ ಟೀಕಿಸಿ ಮುಂಬೈಯಲ್ಲಿ ಅಸ್ಪೃಶ್ಯತಾ ನಿವಾರಣಾ ಲೀಗ್ ನ ಸ್ಥಾಪನೆಗೆ ಕಾರಣಿಕರ್ತರಾದರು, ದಲಿತರ ಮತಾಂತರಕ್ಕೆ ಹಿಂದೂ ಧರ್ಮವೇ ಮೂಲ ಅದರ ಆಚಾರ ವಿಚಾರಗಳ ಆಮೂಲಾಗ್ರ ಬದಲಾವಣೆ ಮಾಡಬೇಕೆಂದು ಹತ್ತಾರು ಸಭೆಗಳಲ್ಲಿ ಒತ್ತಾಯಿಸಿದರು ತಮ್ಮ ವಿಚಾರಗಳ ಮೂಲಕ ಮದನ ಮೋಹನ ಮಾಳವೀಯ, ಭಗತ್ ದಯಾಳ ದಾಸ್, ಮೋತಿಲಾಲ್ ನೆಹರು, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು ಅವರ ಸಾಮಿಪ್ಯಕ್ಕೆ ಬಂದು ಮುಂದೆ ಸೌಮ್ಯವಾದಯಾಗಿ ಪರಿವರ್ತನೆಗೊಂಡರು
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಪ್ರಾಂತೀಯ ಶಾಸನ ಸಭೆಗೆ ಬಿಹಾರ ರಾಜ್ಯದ ಚುನಾವಣಾಯಲ್ಲಿ ಪಾಲ್ಗೊಂಡು ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕಾಂಗ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿ ಹತ್ತಾರು ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿ ಅಪಾರ ಜನ ಮೆಚ್ಚುಗೆ ಗಳಿಸಿದರು ಮುಂದೆ ಬ್ರಿಟಿಷರ ಆಡಳಿತ ನೀತಿ ವಿರೋಧಿಸಿ ಶಾಸನ ಸಭೆಗೂ ರಾಜಿನಾಮೆ ನೀಡಿ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಧುಮುಕಿ ಹತ್ತಾರು ಸಮಾವೇಶಗಳನ್ನು ಆಯೋಜಿಸುವ ಮೂಲಕ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸ ಅನುಭವಿಸಿದರು. 1946 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಪಡೆದು ನೆಹರೂ ನೇತೃತ್ವದ ಮಧ್ಯಕಾಲೀನ ಸರ್ಕಾರ ರಚನೆಯಲ್ಲಿ ಕಾರ್ಮಿಕ ಮಂತ್ರಿಯಾದರು, ಕಾರ್ಮಿಕರಿಗೆ ಬೋನಸ್, ಕನಿಷ್ಠ ವೇತನ ನಿಗದಿ, ಕಾರ್ಮಿಕರ ಹಿತ ರಕ್ಷಿಸಲು ವಿಮಾ ನಿಧಿಯನ್ನು ಸ್ಥಾಪಿಸದ್ದು ಬಾಬೂಜಿ ಅವರ ಕಾರ್ಮಿಕ ಪ್ರೀತಿಯನ್ನು ತೋರಿಸುತ್ತದೆ. 1947 ರ ಜೂನ ತಿಂಗಳಲ್ಲಿ ಜಿನೇವಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಮಿಕರ ಸಮ್ಮೇಳನ ಮುಗಿಸಿ ವಿಮಾನದಲ್ಲಿ ವಾಪಸ್ ಆಗುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ವಿಮಾನ ಅಪಘಾತದಿಂದ ಪಾರಾಗಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಒದಗಿ ಬಂದ ಕಾಲಣವಾಗಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಧಿಕಾರ ಹಸ್ತಾಂತರದ ಭಾವ ಪರವಶಗೊಳಿಸುವ ಕ್ಷಣಗಳಿಂದ ವಂಚಿತರಾದರು

ಭಾರತೀಯರ ಸ್ವಾತಂತ್ರ್ಯ ನಂತರ 1952 ರಲ್ಲಿ ನಡೆದ ಚುನಾವಣೆಯಲ್ಲಿ ಸುಲಭವಾಗಿ ಜಯಿಸುವ ಮೂಲಕ ನೆಹರೂ ಅವರ ಮಂತ್ರಿ ಮಂಡಲದಲ್ಲಿ ಸಂಪರ್ಕ ಖಾತೆಯ ಸಚಿವರಾಗಿ ಏರ್ ಇಂಡಿಯಾ, ಭಾರತೀಯ ಏರ್ ಲೈನ್ಸ್ ಸಂಸ್ಥೆಗಳನ್ನು ಹುಟ್ಟು ಹಾಕಿ ಅಂಚೆ ತಂತಿ ಮತ್ತು ದೂರವಾಣಿ ಕೇಂದ್ರಗಳನ್ನು ಸ್ಥಾಪಿಸಿ, ವೈಮಾನಿಕ ಸೇವೆಗಳನ್ನು ರಾಷ್ಟ್ರೀಕರಣಗೊಳಿಸಿ ದೇಶದ ಮುನ್ನಡೆಗೆ ನೆರವಾದರು ಮುಂದೆ ರೈಲ್ವೆ ಹಾಗೂ ಸಾರಿಗೆ ಸಚಿವರಾಗಿ ಮೂರನೆಯ ದರ್ಜೆ ಬೋಗಿಗಳಿಗೆ ಆಧುನಿಕ ಸ್ಪರ್ಶ ನೀಡಿದರು, ರೈಲ್ವೆಯ ಉಪಹಾರ ಗೃಹಗಳಲ್ಲಿ ಕಡ್ಡಾಯವಾಗಿ ದಲಿತ ಅಡುಗೆ ನೌಕರರನ್ನು ನೇಮಿಸಿ ಕೊಂಡರು, ದೂರದ ಪ್ರಯಾಣ ಮಾಡುವವರಿಗೆ ಮೂರು ಹಾಸಿಗೆಗಳ ತ್ರಿ ಟಯರ್ ಬೋಗಿಗಳ ವ್ಯವಸ್ಥೆ ಮಾಡಿದರು, ಅಧಿಕ ವೇಗದ ಗೂಡ್ಸ್ ಗಾಡಿಗಳು, ಹವಾನಿಯಂತ್ರಿತ ಬೋಗಿಗಳು, ರಫ್ತು ವಸ್ತುಗಳನ್ನು ಸಾಗಿಸಲು ಹೆಚ್ಚಿನ ಅನುಕೂಲ ಕಲ್ಪಿಸಿ ರೈಲ್ವೆ ಡಿಜಿಟಲೀಕರಣ ಮತ್ತು ವಿದ್ಯುದೀಕರಣದ ಕಡೆಗೆ ವ್ಯಾಪಕ ಗಮನ ಹರಿಸಿದರು, ಕಾರ್ಮಿಕ ಸಚಿವರಾಗಿ ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಕನಿಷ್ಠ ಕೂಲಿ ಕಾಯಿದೆ ಜಾರಿಗೊಳಿಸಿ ಉದ್ಯೋಗದಲ್ಲಿ ಶ್ರಮಿಕರನ್ನು ಪಾಲುದಾರರಂತೆ ಕಾಣಬೇಕೆಂಬ ಸಿದ್ದಾಂತವನ್ನು ಪ್ರತಿಪಾದಿಸಿದರು, ಪ್ರಧಾನಿ ಇಂದಿರಾ ಗಾಂಧಿಯವರ ಸಂಪುಟದಲ್ಲಿ ಆಹಾರ, ಕೃಷಿ ಮತ್ತು ಸಹಕಾರ ಸಚಿವರಾಗಿ ದೇಶದ ಜನರಿಗೆ ಬರಗಾಲದ ಬೀಕರ ಸಂದರ್ಭದಲ್ಲಿ ಹಸಿರು ಕ್ರಾಂತಿಯನ್ನು ಸಾಧಿಸಿ ಹಸಿವು ಮುಕ್ತ ಭಾರತ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ, ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಜಾರಿಗೊಳಿಸಿ ಬೀಜೋಪಚಾರ, ಅಧಿಕ ಇಳುವರಿ ಕೊಡುವ ಬೀಜಗಳ ಬಳಕೆ, ಕೀಟನಾಶಕಗಳನ್ನು ಉಪಯೋಗಿಸುವುದು ಹಾಗೂ ಕೃಷಿಯನ್ನು ವೈಜ್ಞಾನಿಕಗೊಳಿಸಿ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುದರು ಹೀಗಾಗಿ ಇವರನ್ನು ದೇಶದ ಜನತೆ ಹಸಿರು ಕ್ರಾಂತಿಯ ಹರಿಕಾರನೆಂದು ಬಣ್ಣಿಸುವರು, ರಕ್ಷಣಾ ಸಚಿವರಾಗಿ ಭೂಹೀನರಿಗೆ ಭೂಮಿ ಹಂಚುವುದರೊಂದಿಗೆ ದೇಶದ ಭದ್ರತೆಗೆ ಹೆಚ್ಚು ಒತ್ತು ನೀಡಿ ದೇಶವನ್ನು ರಕ್ಷಿಸುವ ಬಹುತರ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ 1971 ರಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ತಮ್ಮ ದಕ್ಷತೆ ಮತ್ತು ಜಾಣ್ಮೆಯನ್ನು ತೋರ್ಪಡಿಸಿದರು, ಬಾಂಗ್ಲಾದೇಶ ಸ್ವತಂತ್ರತೆಗೆ ದಾರಿ ಮಾಡಿಕೊಟ್ಟ ಬಾಬು ಜೀ ಯುದ್ದದಲ್ಲಿ ಮೃತಪಟ್ಟ ಸೈನಿಕರ ಕುಟುಂಬಗಳಿಗೆ ವಿಧವಾ ವೇತನ, ಭಾಗಶಃ ಪೆನ್ಶನ್, ಪುಕ್ಕಟೆ ಜಮೀನು ಹೀಗೆ ಹತ್ತಾರು ಸೌಲಭ್ಯಗಳನ್ನು ನೀಡಿ ಮಾನವೀಯತೆಯನ್ನು ಮೆರೆದು ಯುದ್ಧ ಮುಗಿಯಿತೆಂದು ಯೋಧರನ್ನಾಗಲಿ, ಯೋಧರ ಕುಟುಂಬಗಳನ್ನಾಗಲಿ ಮರೆಯದೆ ಅವರುಗಳಿಗೆ ಸಕಲ ಸೌಲಭ್ಯಗಳನ್ನು ನೀಡಿ ಯೋಧರೊಂದಿಗೆ ದೇಶ ಇದೆ ಎಂಬುದನ್ನು ಸಾಬೀತು ಪಡಿಸಿದರು
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಭಾರತದ ಪ್ರಧಾನಿಯಾಗಲು ಮುರಾರ್ಜಿ ದೇಸಾಯಿ , ಚರಣ್ ಸಿಂಗ್ ಮತ್ತು ಜಗಜೀವನರಾಂ ಈ ಮೂವರಲ್ಲಿ ಅಧಿಕ ಸಂಖ್ಯೆಯ ಸಂಸದೀಯ ಬೆಂಬಲ ಬಾಬು ಜೀ ಗೆ ಇದ್ದರೂ ಕೂಡಾ ರಾಜಕೀಯ ಏಣಿ ಆಟದಲ್ಲಿ ಪ್ರಧಾನಿ ಪಟ್ಟವನ್ನು ಮುರಾರ್ಜಿ ದೇಸಾಯಿ ಅವರಿಗೆ ಕಟ್ಟಿದ ಘಟನೆ ಭಾರತದ ಇತಿಹಾಸದಲ್ಲಿ ಕರಗದೆ ಹಾಗೆ ಉಳಿದು ಬಿಟ್ಟಿದೆ ಆದರೆ ಪ್ರಧಾನಿ ಮಂತ್ರಿಯ ಸ್ಥಾನ ಕೈತಪ್ಪಿ ಹೋದರೂ ತಮ್ಮ ನಿಸ್ವಾರ್ಥ ಸೇವೆಯಿಂದಾಗಿ ಜನರ ಮನಸ್ಸಿನಿಂದ ಇವತ್ತಿಗೂ ಘನವಾದ ಸ್ಥಾನವನ್ನು ಅಲಂಕರಿಸಿದ ಜಗಜೀವನರಾಂ ಯಾರೂ ಎಂದಿಗೂ ಇಳಿಸಲಾಗದ ಸ್ಥಾನವನ್ನು ಪಡೆದಿದ್ದಾರೆ
ಸುಮಾರು ಐದು ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಹತ್ತಾರು ಏಳು ಬೀಳುಗಳನ್ನು ಅನುಭವಿಸಿ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಸಮಾಜದ ಜಾತಿ ವ್ಯವಸ್ಥೆಯನ್ನು ಖಂಡಿಸಿ, ಸಾಮಾಜಿಕ ಸಮಾನತೆಗೆ ಅಂತರ್ಜಾತೀಯ ಮದುವೆಗಳು ಮದ್ದು ಎಂದು ಹೇಳಿದರು, ಬಂಡವಾಳ ಶಾಹಿಗಳ ಕಡು ವಿರೋಧಿಯಾಗಿ ಭೂ ಸುಧಾರಣಾ ಕಾನೂನುಗಳು ಜಾರಿಗೆ ತರುವ ಮೂಲಕ ಕುಟುಂಬ ಸಂಪತ್ತನ್ನು ಹೆಚ್ಚಿಸಿ ದೇಶವನ್ನು ಸುಭದ್ರ ಗೊಳಿಸಿದರು, ತಮಗಾದ ಅಪಮಾನ ಹಾಗೂ ಅನ್ಯಾಯಗಳು ತನ್ನ ಜನಾಂಗಕ್ಕೆ ಆಗಬಾರದೆಂಬ ಮನೋಭಾವದಿಂದ ಹೋರಾಟ ನಡೆಸಿದ ಬಾಬು ಜಗಜೀವನ್ ರಾಮ್ ಅವರ ಬದುಕು ಮತ್ತು ಹೋರಾಟಗಳು ಇಂದಿಗೂ ಸ್ಫೂರ್ತಿಯಾಗಿದೆ.


