ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮಕ್ಕಳು ತಂದೆ – ತಾಯಿಗಳು ಕೊಟ್ಟ ಸಂಸ್ಕಾರದಂತೆ ಬೆಳೆಯುತ್ತಾರೆ. ಆದ್ದರಿಂದ ಮಕ್ಕಳಿಗೆ ದುಡ್ಡಿನ ಮಹತ್ವ ಮತ್ತು ಅನ್ನದ ಬೆಲೆಯನ್ನು ತಿಳಿಸಿಕೊಡಬೇಕು ಎಂದು ಓಲೆಮಠದ ಆನಂದ ದೇವರು ಶ್ರೀಗಳು ಹೇಳಿದರು.
ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತು ಜಮಖಂಡಿ ನಗರದ ಓಲೆಮಠದ ಆಶ್ರಯದಲ್ಲಿ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಜನಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ದುಶ್ಚಟಗಳನ್ನು ಬಿಡಿಸಿ ಮನೆಗೆ ಬೆಳಕು ಕೊಡುವ ಸತ್ಕಾರ್ಯವನ್ನು ಓಲೆಮಠದ ಪೂಜ್ಯರು ಮಾಡಿದ್ದಾರೆ. ಹಾಗಾಗಿ ದುಶ್ಚಟಗಳನ್ನು ಬಿಡುವುದಾಗಿ ಪ್ರಮಾಣ ಮಾಡಿದ ಯುವಕರು ಮರಳಿ ದುಶ್ಚಟಕ್ಕೆ ಅಂಟಿ ಕೊಳ್ಳಬಾರದು ಎಂದು ಸಲಹೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ ಮಾತನಾಡಿ, ಗ್ರಾಮಗಳಲ್ಲಿ ಇನ್ನೂ ಒಂದಿಷ್ಟು ಸಂಸ್ಕೃತಿ, ಸಂಸ್ಕಾರ ಉಳಿದಿರುವುದು ಮಹಿಳೆಯರಿಂದ ಮಾತ್ರ ಎಂದರು.
ಝುಂಜರವಾಡದ ಬಸವರಾಜ ಶರಣರು ಪ್ರವಚನ ನೀಡಿದರು.
ತಾಲ್ಲೂಕಿನ ವಿವಿಧ ಪ್ರಕಾರಗಳ ಕಲಾವಿದರನ್ನು ಓಲೆಮಠದ ಪರವಾಗಿ ಸನ್ಮಾನಿಸಲಾಯಿತು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ, ನಗರಸಭೆ ಮಾಜಿ ಅಧ್ಯಕ್ಷ ಪರಮಾನಂದ ಗವರೋಜಿ, ಬಿ.ಜಿ. ಪಾಟೀಲ, ನಿಖಿಲ ಮಹಾಬಳಶೆಟ್ಟಿ, ವೈ.ಎಸ್. ನ್ಯಾಮಗೌಡ, ಶಿವಗೌಡ ಪಾಟೀಲ, ಧರೆಪ್ಪ ಆಲಗೂರ, ರುದ್ರಯ್ಯಸ್ವಾಮಿ, ಸಂಜೀವ ಹುದ್ದಾರ, ಸಂಗಮೇಶ ಗೆಣ್ಣೂರ, ಸತೀಶ ಗೆಣ್ಣೂರ, ಡಾ.ಟಿ.ಪಿ. ಗಿರಡ್ಡಿ, ಸದಾನಂದ ಬಾಗೇವಾಡಿ ಇತರರು ಇದ್ದರು.
ಆನಂದ ಬ್ಯಾಳಿ, ಹನಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನೇಮಿನಾಥ ನ್ಯಾಮಗೌಡ ನಿರೂಪಿಸಿದರು.

