ಉದಯರಶ್ಮಿ ದಿನಪತ್ರಿಕೆ
ಇಂಡಿ: ಭಾರತೀಯ ಭೂಸೇನೆಯಲ್ಲಿ ಹದಿನೇಳು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಸಾಲೋಟಗಿ ಗ್ರಾಮದ ವೀರ ಯೋಧ ಅನೀಲ ಪರಶೇನವರ ಅವರನ್ನು ಇಂಡಿ ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನಂತರ ಇಂಡಿ ರೈಲು ನಿಲ್ದಾಣ, ಇಂಡಿ ನಗರ ಮತ್ತು ಸಾಲೋಟಗಿ ಗ್ರಾಮದಲ್ಲಿ ಅದ್ದೂರಿಯ ಮೆರವಣೆಗೆ ನಡೆಯಿತು.
ತೆರೆದ ಜೀಪದಲ್ಲಿ ಸೈನಿಕ ಪರಶೇನವರ ಇವರಿಗೆ ಅಂದಾಜು ೨೦೦ ಕ್ಕೂ ಹೆಚ್ಚು ಬೈಕುಗಳು ಸೇರಿ ಭಾರತ ಮಾತೆಯ ಧ್ವಜದೊಂದಿಗೆ ಭಾರತ ಮಾತಾ ಕಿ ಜೈ ಘೋಷಣೆಯೊಂದಿಗೆ ಭವ್ಯ ಮೆರವಣೆಗೆ ನಡೆಯಿತು.
ಇಂಡಿಯಲ್ಲಿ ಶಿವಾಜಿ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಸಾಲೋಟಗಿ ಗ್ರಾಮದ ವರೆಗೆ ಮೆರವಣೆಗೆ ನಡೆಯಿತು.
ಸಾಲೋಟಗಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀ ಸಂಗಮೇಶ್ವರ ಶ್ರೀಗಳು ಜಗತ್ತಿನಲ್ಲಿ ಯಾವದು ಶ್ರೇಷ್ಠ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಹಾಲಿನಲ್ಲಿ ತಾಯಿಯ ಎದೆಹಾಲು, ಚುಕ್ಕೆಯಲ್ಲಿ ಬೆಳ್ಳಿ ಚುಕ್ಕೆ, ಹೂವು ಹತ್ತಿ ಹೂ, ಮಕ್ಕಳಲ್ಲಿ ಭೂ ತಾಯಿಯ ಚೊಚ್ಚಲ ಮಗ ರೈತ, ಮತ್ತು ಸೈನಿಕ ಮಗ ಶ್ರೇಷ್ಠ ಎಂದರು.
ಉಪನ್ಯಾಸ ನೀಡಿದ ಸಾಹಿತಿ ಗೀತಯೋಗಿ ಭಾರತೀಯ ಸೇನೆಗೆ ಸಾಲೋಟಗಿಯು ಕೊಟ್ಟ ಕೊಡುಗೆಯನ್ನು ವಿಸ್ತಾರವಾಗಿ ಮಂಡಿಸುತ್ತ ೨೦೧೬ ರಲ್ಲಿ ಜಮ್ಮು ಕಾಶ್ಮೀರದ ಅಖನೂರ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೈನ್ಯವು ಅನೀತಿಯಿಂದ ಆಕ್ರಮಣ ಮಾಡಿದಾಗ ಅನೀಲ ಪೆರಶೇನವರ ಇರುವ ಭಾರತೀಯ ಸೇನಾ ತುಕಡಿಯು ವೈರಿಗಳನ್ನು ಸೋಲಿಸಿ ಹಿಮ್ಮೆಟ್ಟಿದ ಸಂಘರ್ಷವು ಸೈನಿಕ ಅನೀಲ ಪರಶೇನವರ ಇವರ ಕಾರ್ಯ ತೋರಿಸುತ್ತದೆ ಎಂದರು.
ಶಿವಯೋಗಿ ಮಾಢ್ಯಾಳ, ವಿನೋದ ಗಾಣಿಗೇರ, ಬಸವರಾಜ ಗೊರನಾಳ, ಶುಭಾ ದೊಡ್ಡಿ, ದ್ರಾಕ್ಷಾಯಿಣಿ ಆಳೂರ ಮಾತನಾಡಿದರು.
ಗೋಳಸಾರದ ಅಭುನವ ಪುಂಡಲಿಂಗ ಶಿವಯೋಗಿಗಳು, ಶ್ರೀ ಶಂಕರಾನಂದ ಸ್ವಾಮೀಜಿ, ಜಿಲ್ಲಾ ಸೈನಿಕ ಸಂಘದ ಅಧ್ಯಕ್ಷ ರಾಮಪ್ಪ , ಗಡ್ಡಿಲಿಂಗ ಯಳಸಂಗಿ, ಬಸವರಾಜ ಬಂಟೂರ, ಸಂಗಪ್ಪ ರಾಮಪೂರ, ಸಿದ್ದಪ್ಪ ಕಾಳಿ, ಶರಣಯ್ಯ ಮಠಪತಿ, ಭೀಮರಾಯ ಕುಂಬಾರ, ಶಿವಯೋಗಪ್ಪ ತಡಲಗಿ, ಸೋಮನಾಥ ಹರವಾಳ, ವೇದಿಕೆಯ ಮೇಲಿದ್ದರು.
ಅನೀಲ ಪೆರಶೇನವರ ದಂಪತಿಗಳನ್ನು ಸನ್ಮಾನಿಸಲಾಯಿತು.

