ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
ಆಮಂತ್ರಣವಿದ್ದ ಕಾರ್ಯಕ್ರಮದಲ್ಲಿ ಹೋಗಿ ಕುಳಿತಿರುವಾಗ, ನಡೆಯಲಾರದೆ ಊರುಗೋಲಿನ ಸಹಾಯದಿಂದ ನಡೆದು ಒಳಬಂದ ಮಹಿಳೆಯ ಕಡೆಗೆ ನನ್ನ ಕಣ್ಣು ಹರಿಯದೆ ಇರಲಿಲ್ಲ. ದೊಡ್ಡದೊಂದು ಮೈಸೂರು ಸಿಲ್ಕ್ ಸೀರೆ, ಅದಕ್ಕೊಪ್ಪುವ ಕುಪ್ಪಸ, ಕಾಸ್ಟ್ಲಿ ಪುಟಾಣಿ ಬ್ಯಾಗೂ, ದೊಡ್ಡದೊಂದು ಚಿನ್ನದ ಬಳೇ.. ಎಲ್ಲವೂ ಇದೆ. ಆದರೆ ಆಕೆಯ ದಡೂತಿ ದೇಹದ ಭಾರವನ್ನು ಆಕೆಯ ಕಾಲು ಭರಿಸಲಾಗುತ್ತಿಲ್ಲ. ‘ವಾಕಿಂಗ್ ಸ್ಟಿಕ್’ ಆಕೆಯ ಕಾಲಿನ ಸಂಗಾತಿಯಾಗಿ ನಡೆಸುತ್ತಿದೆ. ‘ಇಷ್ಟು ಚಿಕ್ಕ ಕಾರ್ಯಕ್ರಮಕ್ಕೆ ಇಷ್ಟೊಂದು ಆಡಂಬರ ಬೇಕಿತ್ತಾ? ಅನ್ನಿಸಿತು ನನಗೆ. ತಕ್ಷಣವೆ ‘ಹಣವಂತರು. ಪಾಪ! ಇರುವ ಹಣದ ಸದ್ವಿನಿಯೋಗ ಮಾಡಿಕೊಳ್ಳಲೇಬೇಕಲ್ಲಾ.. ಜೊತೆಗೆ ಪ್ರತಿಷ್ಠೆಯ ಪ್ರಶ್ನೆ ಬೇರೆ’ ಎಂದುಕೊಂಡವಳೇ ಸುಮ್ಮನಾದೆ. ವಿಷಯ ಅಷ್ಟೇ ಅಲ್ಲ. ಅದು ನಾ ಮೊದಲೇ ಯಾವಾಗಲೋ ನೋಡಿದ್ದ ಮುಖ.
ಹೌದು ಇದು ಅದೇ ಮುಖ.
ನಾ ಚಿಕ್ಕವಳಿದ್ದಾಗ ನೋಡಿದ್ದ ಮುಖ.
ಬೀಗರ ಔತಣಕ್ಕೆ ಇನ್ವಿಟೇಶನ್ ಕೊಟ್ಟು ಕರೆದಿದ್ದರು. ಟೀಚರ್ ಆಗಿದ್ದ ಅಂಟಿಗೆ ರಜಾ ಇಲ್ಲದ ಕಾರಣ, ರಜೆಗೆಂದು ಅವರ ಮನೆಗೆ ಬಂದಿದ್ದ ನನ್ನನ್ನು ಅವರ ಮಗನ ಜೊತೆಯಲ್ಲಿ ಕಳಿಸಿದರು.
ನಾವಿಬ್ಬರು ಅಲ್ಲಿ ಹೋಗಿ ಆಟೋ ಇಳಿದಾಗ, “ಏ ಇವಳು ಸಾವಿತ್ರಿ ಮಗಳಲ್ವಾ?” ಎಂದು ಒಬ್ಬರ ಧ್ವನಿ, “ನಾವು ಸಾವಿತ್ರೀನ ಕರೆದೇ ಇಲ್ಲ ಆದ್ರೂ ಬಂದಿದೆ” ಎಂದು ಇನ್ನೊಂದು ಧ್ವನಿ ಮಹಿಳೆಯರ ಗುಂಪಿನಿಂದ ಕೇಳಿಬಂತು. ನಾನು ಅವಾಗಿನ್ನೂ ಸ್ಕೂಲು ಹುಡುಗಿ. ನನ್ನ ತಮ್ಮನಿಗೆ ಏನೂ ಅರ್ಥವಾಗಲಿಲ್ಲ. ಆದರೆ ನನಗಾಯಿತು. ನಾನು ಏನನ್ನೂ ತಿನ್ನಲಿಲ್ಲ. ತಮ್ಮನ ಊಟವಾದ ನಂತರ ಮೌನವಾಗಿ ಹಿಂತಿರುಗಿದ್ದೆ.
ಇಂದು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿರುವ ಈಕೆಗೆ ಅದು ನೆನಪಿಲ್ಲ. ಆದರೆ ನನಗಿದೆ. ಇಂದು ಉತ್ಕಟ ಪ್ರೀತಿಯಿಂದ ನನ್ನನ್ನು ಆಧರಿಸುತ್ತಿರುವ ಆಕೆಯ ಕಣ್ಣಲ್ಲಿ ನಾ ಅವರೊಡನೆ ಮತ್ತಷ್ಟು ಹೊತ್ತು ಇರಬೇಕೆಂಬ ವಿನಂತಿಯಿತ್ತು. ನನ್ನ ಮುಖದಲ್ಲಿ ನಗುವಿತ್ತು.
‘ಅಂದು ನನಗೆ ಬಲವಿರಲಿಲ್ಲ ಅವರು ಹಂಗಿಸಿದರು, ಇಂದು ಅವರಿಗೆ ಬಲವಿಲ್ಲ ನಾ ಪ್ರೀತಿಸಬೇಕು’ ಎಂದುಕೊಂಡೆ.
ಕಾಲಚಕ್ರದಲ್ಲಿ ಯಾರ ಬದುಕು ಯಾವಾಗ ಹೇಗೆ ಬೇಕಾದರು ಬದಲಾಗಬಹುದು. ಒಂದೊಂದು ಕ್ಷಣವೂ ಸಹ ನಮ್ಮ ಕೈಯಲ್ಲಿರುವುದಿಲ್ಲ. ಮುಂದಿನ ಘಳಿಗೆ ಏನಾಗಬಹುದೆಂಬುದನ್ನು ಎಷ್ಟೇ ದೊಡ್ಡ ಮನುಷ್ಯರಾದರು ಯಾರೂ ಊಹಿಸಲಾರರು. ಕಣ್ಣಿಗೆ ಕಾಣದ ಅಗೋಚರ ಶಕ್ತಿಯೊಂದು ಇಡೀ ಜಗತ್ತನ್ನು ನಿಯಂತ್ರಿಸಿ ತಾನೇ ಆಳುತ್ತಿರುವಾಗ ಮನುಷ್ಯ ‘ಯಕಶ್ಚಿತ್’ ಎಂದಾಯಿತಲ್ಲವೇ? ಅಂದಮೇಲೆ ನಾವೇ ಹೆಚ್ಚೆಂದು ಹೇಗೆ ಹೇಳಲಾದೀತು.
ಬಹುಜನರ ಬಾಯಿಯಲ್ಲಿ ‘ನಾನು ನಾನು’ಗಳೇ ನಲಿದಾಡುತ್ತವೆ. ‘ನಾನು’ ಮಾಡಿದ ಕೆಲಸ ಮಾತ್ರ ‘ನಾನೇ’ ಇರಲಿ. ಆದರೆ ತಂಡ ಮಾಡಿದ ಕೆಲಸವಾದರೆ ಅದು ‘ನಾವು’ ಆಗಬಹುದಲ್ಲವೆ? ಅವಾಗ ಆ ಮಾತಿಗೆ ಅದೆಷ್ಟು ತೂಕ ಹೆಚ್ಚಾಗಬಹುದು. ಇಂದು ಆಳುತ್ತಿರುವ ‘ನಾನು’ ನಾಳೆ ಆಳಿಸಿಕೊಳ್ಳುವ ಸ್ಥಿತಿ ಕೂಡಾ ತಲುಪಬಹುದು ಅಥವಾ ಯಾರನ್ನೋ ಆಳುತ್ತಿರುವ ‘ನಾನು’ ಮತ್ಯಾರಿಂದಲೋ ಆಳಿಸುಕೊಳ್ಳುತ್ತಿರುವವಳೆ/ನೆ ಆಗಿದ್ದೇನೆ ಎಂಬುದು ಗಮನಕ್ಕೆ ಇರಬೇಕಾದದ್ದು ಅತ್ಯಾವಶ್ಯಕ.
ಕಾಲನ ಕೈಯಲ್ಲಿ ಎಲ್ಲರೂ ಗೊಂಬೆಗಳೆ.


