ದೇವರನಿಂಬರಗಿಯ ಸ್ವಯಂಭೂ ಶ್ರೀ ಬಲಭೀಮ ದೇವರ ಜಾತ್ರೆ ವೈಭವ | ಭಕ್ತಿ, ಪರಂಪರೆ ಮತ್ತು ಭಾವೈಕ್ಯದ ಪ್ರತೀಕ | ಚೈತ್ರ ಮಾಸದಲ್ಲಿ ಭಕ್ತರ ಮಹಾಪೂರ
ಉದಯರಶ್ಮಿ ದಿನಪತ್ರಿಕೆ
ವರದಿ: ರಾಜಶೇಖರ ಡೋಣಜಮಠ
ಚಡಚಣ: ತಾಲೂಕಿನ ದೇವರನಿಂಬರಗಿ ಗ್ರಾಮದ ಸ್ವಯಂಭೂ ಶ್ರೀ ಬಲಭೀಮ ದೇವರ ಜಾತ್ರೆ ಚೈತ್ರ ಮಾಸದ ಪಾಡ್ಯದಿಂದ ದವನದ ಹುಣ್ಣಿಮೆ(ಚೈತ್ರ ಪೌರ್ಣಿಮೆ)ಯವರೆಗೆ ಅತಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ, ಭಕ್ತರ ಮಹಾಪೂರವೇ ಹರಿದು ಬರುತ್ತದೆ, ಜಾತ್ರೆ ಅವಧಿಯಲ್ಲಿ ರಾಮನವಮಿ, ಹನುಮ ಜಯಂತಿ, ಏಕಾದಶಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವಾಗಿ ಏಕಾದಶಿ ದಿನದಂದು“ಮೊಸರು ಗಡಿಗೆ” ಒಡೆಯುವ ಸಂಪ್ರದಾಯವು ಊರ ಗೌಡರ ಮನೆತನದಿಂದ ಹಿಂದಿನಿಂದಲೂ ಪಾರಂಪರ್ಯವಾಗಿ ನಡೆದುಕೊಂಡು ಬಂದಿರುವ ಪ್ರಮುಖ ಆಚರಣೆ ಆಗಿದೆ.
ಈ ದೇವಸ್ಥಾನದಲ್ಲಿ ಪೂಜೆ ಪದ್ಧತಿಗೂ ವಿಶೇಷ ಮಹತ್ವವಿದೆ. ಹೂಗಾರ ಮನೆತನದವರು ಪ್ರತಿದಿನ ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿ 10 ಗಂಟೆಗೆ ವೇಳೆ ಬ್ರಾಹ್ಮಣ ಅರ್ಚಕರು ಪೂಜೆಯನ್ನು ನೆರವೇರಿಸುತ್ತಾರೆ. ಪ್ರತಿದಿನ ರಾತ್ರಿ 10 ಗಂಟೆಗೆ “ಶೇದಾರತಿ” ವಿಧಿಯೊಂದಿಗೆ ಪೂಜೆ ಸಮಾಪ್ತಿಯಾಗುತ್ತದೆ.
ಸ್ವಯಂಭೂ ಶ್ರೀ ಬಲಭೀಮ (ಶ್ರೀ ಹನುಮಾನ್) ದೇವರ ದೇವಸ್ಥಾನವೆಂದು ಪ್ರಸಿದ್ಧಿಯಾಗಿರುವ ಈ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಸ್ಥಳವೆಂದು ಭಕ್ತರು ನಂಬುತ್ತಾರೆ.ಚಡಚಣ ಪಟ್ಟಣದಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿರುವುದರಿಂದ ಪ್ರತೀ ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಆಗಮಿಸುತ್ತಾರೆ.
ಈ ದೇವಸ್ಥಾನವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದು. ಮುಸ್ಲಿಂ ಸಮುದಾಯದವರು ಕೂಡ ಭಕ್ತಿಭಾವದಿಂದ ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ದೇವರ ದರ್ಶನಕ್ಕೆ ಬರುವಾಗ ಮಾಂಸಾಹಾರ ತ್ಯಜಿಸುವ ಸಂಪ್ರದಾಯವನ್ನು ಇಂದಿಗೂ ಪಾಲಿಸುತ್ತಿದ್ದಾರೆ.
ಇತಿಹಾಸ : ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿರುವ ಶ್ರೀ ಬಲಭೀಮ ದೇವರ ದೇವಸ್ಥಾನವು ಶತಮಾನಗಳ ಇತಿಹಾಸ ಹೊಂದಿದ ಪವಿತ್ರ ಕ್ಷೇತ್ರವಾಗಿದ್ದು, ದೇವಸ್ಥಾನದ ಮೂಲದಂತ ಕಥೆ, ಪೌರಾಣಿಕ ಪ್ರಕಾರ, ಕುರುಬ ಗೌಡಿಕೆ ಮನೆತನದವರು ಸಾಕಿದ ಗೋವು ಒಂದು ಹುತ್ತಕ್ಕೆ ಹಾಲುಣಿಸುತ್ತಿದ್ದುದರಿಂದ ಈ ಸ್ಥಳದ ಪಾವಿತ್ರ‍್ಯ ಬೆಳಕಿಗೆ ಬಂದಿದೆ. ಗೋವುಗಳು ಪ್ರತಿದಿನ ಅಡವಿಯಲ್ಲಿ ಇರುವ ಬೇವಿನ ಮರದ ಕೆಳಗಿನ ಹುತ್ತಕ್ಕೆ ಹಾಲುಣಿಸುತ್ತಿದ್ದವು. ಈ ಅಚ್ಚರಿಯ ಘಟನೆ ಗಮನಿಸಿದ ಗೌಡನಿಗೆ ಬಲಭೀಮ ದೇವರು ಕನಸಿನಲ್ಲಿ ಕಾಣಿಸಿಕೊಂಡು ದೇವಾಲಯ ನಿರ್ಮಾಣಕ್ಕೆ ಸೂಚನೆ ನೀಡಿದನೆಂದು ಹೇಳಲಾಗುತ್ತದೆ. “ನಾನು ಇಲ್ಲಿ ಉದ್ಭವವಾಗಲು ಸಮಯ ಬೇಕು, ನನಗೆ ತೊಂದರೆ ಕೊಡಬೇಡಿ” ಎಂದು ಸೂಚನೆ ನೀಡಿದನು ಎಂದು ಹೇಳಲಾಗುತ್ತದೆ ದೇವರ ಆಜ್ಞೆಯಂತೆ ಗುಡಿಯನ್ನು ಕಟ್ಟಿಸಿ ಬಾಗಿಲು ಮುಚ್ಚಿದರೂ, ನಿಗದಿತ ಅವಧಿಗೆ ಮುನ್ನ ಅಂದರೆ ದೇವರು ಹೇಳಿದ್ದು 9 ತಿಂಗಳು 9 ದಿನಗಳವರೆಗೆ ಬಾಗಿಲು ಮುಚ್ಚಲು ಆದರೆ ಕನಸಿನ ಆತುರ ಹೆಚ್ಚಾಗಿ ಪರಿಶೀಲಿಸಲು ಮುಂದಾಗಿ ಕೇವಲ 7 ತಿಂಗಳಾಗುವಷ್ಟರಲ್ಲಿ ಬಾಗಿಲು ತೆರೆಯಲ್ಪಟ್ಟ ಕಾರಣ ಶ್ರೀ ಬಲಭೀಮ ದೇವರ ಮೂರ್ತಿ ಅರ್ಧ ರೂಪದಲ್ಲಿ ಸ್ವಯಂಭೂ ರೂಪದಲ್ಲಿ ಅಲ್ಲಿ ಕಾಣಿಸಿಕೊಂಡು ನೆಲೆನಿಂತಿದ್ದಾನೆ ಎಂಬ ನಂಬಿಕೆ ಇದೆ.
ನಂತರ ಸ್ಥಳೀಯ ಜನಪದ ಕಥೆಗಳ ಪ್ರಕಾರ, ಕ್ರಿ.ಶ. 1480ರ ಅವಧಿಯಲ್ಲಿ ದೇ.ನಿಂಬರಗಿ ಗ್ರಾಮದ ಸಮೀಪದ ಸೂಪನೊಳ ಗ್ರಾಮದಲ್ಲಿ ಗೌಡರ ಮನೆತನದ ಧನಾಯಿ ಹಾಗೂ ಮಾಳಾಯಿ ಎಂಬ ಅತ್ತೆ–ಸೊಸೆ ಇಬ್ಬರು ಈಗಿನ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಎನ್ನಲಾಗುತ್ತದೆ.
ಇತಿಹಾಸದ ದಾಖಲೆಯ ಪ್ರಕಾರ, ತೆಲಸಂಗ ಪಟವರ್ಧನರು ಹಾಗೂ ಅಕ್ಕಲಕೋಟದ ಅರಸರು 1970ರ ಸುಮಾರಿಗೆ ದೇವಸ್ಥಾನದ ಆವರಣ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಹೈದರಾಬಾದ್ ನಿಜಾಮ ಕೂಡ ಪ್ರತಿವರ್ಷ ಜಾತ್ರಾ ಮಹೋತ್ಸವಕ್ಕೆ 64 ಪೌಂಡ್ ನೆರವು ನೀಡುತ್ತಿದ್ದನೆಂದು ಗೆಜೆಟಿಯರ್ ದಾಖಲೆಗಳಲ್ಲಿ ಉಲ್ಲೇಖವಾಗಿದೆ ಎಂದು ತಿಳಿದುಬಂದಿದೆ.
ಇನ್ನೂ, ಸಮೀಪದ ತದ್ದೇವಾಡಿ ಗ್ರಾಮವು ಪ್ರಾಚೀನ ಕಾಲದಲ್ಲಿ ಕಲ್ಯಾಣ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಪ್ರಮುಖ ಕೇಂದ್ರವಾಗಿತ್ತು.ಮತ್ತು ಸಮೀಪದ ಮಹಾರಾಷ್ಟçದ ಮಂಗಳವೇಡಾ ಪಟ್ಟಣವು ಕೂಡಾ ಪ್ರಮುಖ ಕೇಂದ್ರವಾಗಿತ್ತು,ಸುಮಾರು ಸಾವಿರ ವರ್ಷಗಳ ಹಿಂದೆಯೇ ಶ್ರೀ ಬಲಭೀಮ ದೇವಸ್ಥಾನವು ಪ್ರಸಿದ್ಧಿಯಾಗಿದ್ದುದಾಗಿ ಹಿರಿಯರು ಹೇಳುತ್ತಾರೆ.
ಪವಾಡ ಸದೃಶ ಘಟನೆಗಳು : ಇನ್ನೊಂದು ಪ್ರಸಿದ್ಧ ಕಥೆಯ ಪ್ರಕಾರ, ಅಕ್ಕಲಕೋಟೆಯ ಭೋಸಲೆ ಮಹಾರಾಜರಿಗೆ ಹಲವು ವರ್ಷಗಳ ಕಾಲ ಸಂತಾನವಾಗದಿದ್ದಾಗ, ಮಂಗಳವೇಡದ ಪಂತರು (ಪಂಡಿತರು) ಶ್ರೀ ಬಲಭೀಮ ದೇವರಿಗೆ ಹರಕೆ ಹೊತ್ತರೆ ಸಂತಾನಪ್ರಾಪ್ತಿ ಆಗುತ್ತದೆ ಎಂದು ಸಲಹೆ ನೀಡಿದರು. ಅದರಂತೆ ದೇ.ನಿಂಬರಗಿ ದೇವಸ್ಥಾನದಲ್ಲಿ ಹರಕೆ ಹೊತ್ತ ನಂತರ ಅವರಿಗೆ ಸಂತಾನ ಲಭಿಸಿದೆ ಎಂದು ಜನಪ್ರಚಾರವಿದೆ.
ಮುಕ್ಕೋಟಿ ದೇವರ(ಹನುಮ,ರಾಮ,ಕಾಶಿ ವಿಶ್ವನಾಥ ಹೀಗೆ ಅನೇಕ ಅವತಾರಿ ದೇವತೆಗಳ) ಸಮಾಗಮ ಹೊಂದಿದ ಶ್ರೀ ಬಲಭೀಮ(ಹನುಮಾನ) ಎಂಬ ಪ್ರಸಿದ್ಧಿ ಪಡೆದ ದೇವಸ್ಥಾನ. ಈ ದೇವಸ್ಥಾನದಲ್ಲಿ ಅನೇಕ ಪವಾಡಸದೃಶ ಘಟನೆಗಳು ನಡೆದಿವೆ ಎಂಬ ಭಕ್ತರ ನಂಬಿಕೆ ಇದೆ ಬ್ರಾಹ್ಮಣ ಸಮಾಜದ ಜಗನ್ನಾಥ ಜೋಶಿ ಕುಟುಂಬದ ಪೂರ್ವಜರು ಕಾಶಿ ಯಾತ್ರೆಗೆ ತೆರಳಲು ಬಯಸಿದಾಗ, ಬಲಭೀಮ ದೇವರು ಕಾಶಿ ವಿಶ್ವನಾಥನ ದರ್ಶನವನ್ನು ಇಲ್ಲಿಯೇ ನೀಡಿದ್ದರಿಂದ ಇಂದಿಗೂ ಆ ಕುಟುಂಬದವರು ಕಾಶಿ ಕ್ಷೇತ್ರಕ್ಕೆ ತೆರಳುವುದಿಲ್ಲ ಎಂಬ ಪ್ರತೀತಿ ಇದೆ. ಈ ದೇವಸ್ಥಾನದಲ್ಲಿ ಇಷ್ಟಾರ್ಥಗಳು ಬೇಡಿಕೊಂಡವರಿಗೆ, ಸಂತಾನ ಭಾಗ್ಯ ಸೇರಿದಂತೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಭಕ್ತರ ನಂಬಿಕೆ ಇದೆ.
ತಡವಲಗಾ ಗ್ರಾಮದ ಡಬ್ಲು.ಕುಲಕರ್ಣಿ ಅವರ ಮನೆತನದ ಹಿರಿಯರು ಶ್ರೀ ಬಲಭೀಮನಿಗೆ ಹರಕೆ ಬೇಡಿಕೊಂಡಂತೆ ಅವರ ಮನೆತನದಲ್ಲಿ ಇಂದಿಗೂ 52 ಜನ ಎಮ್.ಡಿ.ಡಾಕ್ಟರ್ ಇರುವದು ದೇವರ ಪವಾಡವಲ್ಲದೆ ಇನ್ನೆನು? ಸುಮಾರು 1980 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ದೇವಾಲಯದ ಆವರಣ ಸೇರಿದಂತೆ ಗುಡಿಗೆ ಬಣ್ಣ ಹಾಗೂ ಅಲಂಕಾರಗಳನ್ನು ಹಾಗೂ ದ್ವಾದಶಿಯ ಅನ್ನ ಪ್ರಸಾದ ಕೂಡಾ ಮಾಡುತ್ತ ಬಂದಿದ್ದಾರೆ.
ಜಾತ್ರೆ ಅವಧಿಯಲ್ಲಿ ಪ್ರತಿದಿನ ಕೀರ್ತನೆ, ಪುರಾಣ, ಭಜನೆ, ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ದವನದ(ಚೈತ್ರ ಪೌರ್ಣಿಮೆ)ಹುಣ್ಣಿಮೆಯಂದು ಜಾತ್ರೆಗೆ ತೆರೆಬೀಳುತ್ತದೆ. ಭಕ್ತರಿಗಾಗಿ ವಸತಿ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆಯೂ ಮಾಡಲಾಗಿದೆ.
ಒಟ್ಟಿನಲ್ಲಿ, ದೇವರನಿಂಬರಗಿಯ ಶ್ರೀ ಬಲಭೀಮ ದೇವರ ಜಾತ್ರೆ ಭಕ್ತಿ, ಪರಂಪರೆ ಮತ್ತು ಸಾಮರಸ್ಯದ ಸಂಕೇತವಾಗಿ ಪ್ರತಿವರ್ಷವೂ ಭಕ್ತರ ಮನಸೆಳೆಯುತ್ತಿದೆ,ಈ ಕ್ಷೇತ್ರವು ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಮಹತ್ವ ಹೊಂದಿದ ಪವಿತ್ರ ಕ್ಷೇತ್ರವಾಗಿ ಭಕ್ತರ ಆಸ್ಥಾನವಾಗಿದ್ದು, ಇಂದಿಗೂ ಅನೇಕರು ಭಕ್ತಿಯಿಂದ ಭೇಟಿ ನೀಡುತ್ತಿದ್ದಾರೆ.


