ಲೇಖನ
– ಡಾ ಶಶಿಕಾಂತ ಪಟ್ಟಣ
ಪೂನಾ – ರಾಮದುರ್ಗ
ಮೊ: 9552002338
ಉದಯರಶ್ಮಿ ದಿನಪತ್ರಿಕೆ
ಕರ್ನಾಟಕ ಸರಕಾರ ಎಲ್ಲಾ ಶರಣರ ಜಯಂತಿಗಳನ್ನು ಆಚರಿಸುವ ಒಳ್ಳೆಯ ಯೋಜನೆಯನ್ನು ರೂಪಿಸಿದೆ. ಆದರೆ ಕಳೆದ ೧೩ ವರ್ಷಗಳಿಂದ ನಿರಂತರವಾಗಿ ಅದೆಷ್ಟೋ ಮನವಿಗಳನ್ನು ಲೇಖನಗಳನ್ನು ಬರೆದು ಸರಕಾರಕ್ಕೆ ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ಮನವಿ ಸಲ್ಲಿಸಿದರೂ ಸಹಿತ ಕುರುಡು ಕೆಪ್ಪರ ಸರಕಾರ ಇದಕ್ಕೆ ಸ್ಪಂದಿಸುತ್ತಿಲ್ಲ. ಇದು ಲಿಂಗಾಯತ ನೇಕಾರ ಸಮುದಾಯದವರಿಗೆ ಮಾಡುವ ಬಹು ದೊಡ್ಡ ದ್ರೋಹವಾಗಿದೆ.

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ
ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ. ಪ್ರತಿ ವರ್ಷವೂ ಕರ್ನಾಟಕ ಸರಕಾರವು ಆದ್ಯ ವಚನಕಾರ ದೇವರ ದಾಸಿಮಯ್ಯನ ಜಯಂತಿಗೆ ಲಕ್ಷ ಲಕ್ಷ ಹಣ ಕೊಟ್ಟು ರಾಜ್ಯಾದಂತ ದೇವರ ದಾಸಿಮಯ್ಯನವರ ಜಯಂತಿಯನ್ನು ಆಚರಿಸುವ ಕಾರ್ಯಕ್ಕೆ ಇಳಿದಿರುವುದು ಹಾಸ್ಯಾಸ್ಪದವಾಗಿದೆ.
ದೇವರ ದಾಸಿಮಯ್ಯ ೧೧ ನೆಯ ಶತಮಾನದ ಶಿವ ಭಕ್ತ , ಇಮ್ಮಡಿ ಜಯಸಿಂಹನ ಮಡದಿ ಸುಗ್ಗಲೆ ಇವಳಿಗೆ ಶಿವಬೋಧ ದೀಕ್ಷೆ ನೀಡಿ ಅವಳನ್ನು ಶೈವ ಧರ್ಮದ ಅನುಯಾಯಿಯನ್ನಾಗಿ ಮಾಡಿದರು. ದೇವರ ದಾಸಿಮಯ್ಯ ಅಪ್ಪಟ ಸನ್ಯಾಸಿಯಾಗಿದ್ದು ಮತ್ತು ಯಾವುದೇ ವಚನ ರಚನೆ ಮಾಡಿಲ್ಲ. ಆತನು ವೃತ್ತಿಯಿಂದ ಕೃಷಿಕನಾಗಿದ್ದನೆಂದು ತಿಳಿದು ಬರುತ್ತದೆ. ಆತನು ವಚನಕಾರನಲ್ಲ.
ಜೇಡರ ದಾಸಿಮಯ್ಯ ಮತ್ತು ದುಗ್ಗಳೆ ೧೨ ಶತಮಾನದ ಬಸವಾದಿ ಪ್ರಮಥರ ಸಮಕಾಲೀನರು. ಇಬ್ಬರೂ ವಚನಕಾರರು. ಇವರಿಬ್ಬರ ಬಗ್ಗೆ ಬಸವಣ್ಣ ಆದಿಯಾಗಿ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಜೇಡರ ದಾಸಿಮಯ್ಯ ಮತ್ತು ಮಡದಿ ದುಗ್ಗಳೆ ಇವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅದೇ ರೀತಿ ಜೇಡರ ದಾಸಿಮಯ್ಯ ಮತ್ತು ದುಗ್ಗಳೆ ೧೨ ಶತಮಾನದ ಬಸವಾದಿ ಪ್ರಮಥರ ಬಗ್ಗೆ ತಮ್ಮ ಅನೇಕ ವಚನಗಳಲ್ಲಿ ಉಲ್ಲೇಖ ಮಾಡಿದ್ದಾರೆ. ವ್ರತ್ತಿಯಲ್ಲಿ ನೇಯ್ಗೆ ಕೆಲಸ ಮಾಡುವ ನೇಕಾರರು.
ಇಂತಹ ಗೊಂದಲಗಳ ಬಗ್ಗೆ ಡಾ ಎಂ ಎಂ ಕಲ್ಬುರ್ಗಿ ಅವರು ೪೦ ವರ್ಷಗಳ ಹಿಂದೆಯೇ ಈ ವಿಷಯವನ್ನು ಸಂಶೋಧನೆಯ ಮೂಲಕ ಬಹಿರಂಗಗೊಳಿಸಿದ್ದಾರೆ. ಡಾ ಎಚ. ದೇವಿರಪ್ಪ, ಡಾ. ಎಚ್ ಚಂದ್ರಶೇಖರ , ಡಾ ಎಂ ಚಿದಾನಂದ ಮೂರ್ತಿ, ಡಾ. ಶಶಿಕಾಂತ ಪಟ್ಟಣ ಮುಂತಾದ ಅನೇಕ ಸಂಶೋದಕರು ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ಜೇಡರ ದಾಸಿಮಯ್ಯನ ವಚನ ಅಂಕಿತ -ರಾಮನಾಥ ಮತ್ತು ದುಗ್ಗಳೆ ಇವರ ವಚನಾಂಕಿತ ದಾಸಯ್ಯ ಪ್ರಿಯ ರಾಮನಾಥ.
ವಸ್ತು ಸ್ಥಿತಿ ಹೀಗಿದ್ದರೂ ವಚನಕಾರನಲ್ಲದ ದೇವರ ದಾಸಿಮಯ್ಯನವರಿಗೆ ಆದ್ಯ ವಚನಕಾರ ಪಟ್ಟ ಕಟ್ಟಿ ಅವರು ರಚಿಸದ ವಚನಗಳಿಗೆ ಮಾಲಕರನ್ನಾಗಿ ಮಾಡಿ
ಕರ್ನಾಟಕ ಸರಕಾರ ಘೋರ ಅಪರಾಧ ಮಾಡುತ್ತಿದೆ. ಅಷ್ಟೆ ಅಲ್ಲ ಜೇಡರ ದಾಸಿಮಯ್ಯನವರ ಮಡದಿ ದುಗ್ಗಳೆಯನ್ನು ದೇವರ ದಾಸಿಮಯ್ಯನವರ ಮಡದಿ ಅಂತಾ ಹೇಳಿ ಜೇಡರ ದಾಸಿಮಯ್ಯನವರ ಮತ್ತು ಮಡದಿ ದುಗ್ಗಳೆಯ ಚರಿತ್ರೆಗೆ ಮಸಿ ಬಳೆಯುವ ಕೆಲಸ ಮಾಡಿದ್ದಾರೆ.
ಡಾ ಎಂ ಚಿದಾನಂದ ಮೂರ್ತಿ ಡಾ ವಿದ್ಯಾಶಂಕರ ಮತ್ತು ನಾನು -ಈ ದಿಶೆಯಲ್ಲಿ ಪ್ರತಿಭಟಿಸಿದ್ದು ಸೂಕ್ತ ಮತ್ತು ಸ್ತುತ್ಯಾರ್ಹ ಆದರೆ ಇದು ಪ್ರಚಾರ ಗಿಟ್ಟಿಸುವ ತಂತ್ರವಾಗಬಾರದು. ಮತ್ತು ವಿರೋಧಕ್ಕಾಗಿ ವಿರೋಧಿಸುವ ಹುಚ್ಚುತನವಿರಬಾರದು.
ಇಂದು ಬಹುತೇಕ ಸಂಶೋಧಕರು ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಆದರೆ ೨೦೧೫ ರ ಗೌರಿ ಲಂಕೇಶ ಪತ್ರಿಕೆಯಲ್ಲಿ ಪ್ರತಿಷ್ಟಿತ ಬಸವ ಪುರಸ್ಕಾರ ಪುರಸ್ಕ್ರತ ರಂಜಾನ ದರ್ಗಾ ಇವರು ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಒಂದೆ, ಡಾ.ಎಂ ಚಿದಾನಂದ ಮೂರ್ತಿಯವರ ತರ್ಕದಲ್ಲಿ ಹುರುಳಿಲ್ಲ, ಜೇಡರ ದಾಸಿಮಯ್ಯನವರಿಗೆ ಜನರು ಗೌರವದಿಂದ ದೇವರ ದಾಸಿಮಯ್ಯವೆಂದು ಕರೆದರು ಅಂತಾ ಬರೆದಿರುವುದು ಮತ್ತೆ ಗೊಂದಲ ವಿವಾದಕ್ಕೆ ಈಡುಮಾಡಿದೆ.
ಜೇಡರ ದಾಸಿಮಯ್ಯನವರ ಮತ್ತು ಮಡದಿ ದುಗ್ಗಳೆಯವರ ದಾರ್ಶನಿಕ ಮತ್ತು ಪವಿತ್ರ ಜೀವನದ ಜೊತೆ ಚೆಲ್ಲಾಟವಾಡುವ ಕೆಲಸ ಮೊದಲು ನಿಲ್ಲಲಿ. ಸರಕಾರವೂ ಕೂಡಾ ಇಂತಹ ಸಮಯದಲ್ಲಿ ಸಮಾಜವನ್ನು ಒಡೆಯುವ ಕೆಲ ಶಕ್ತಿಗಳಿಗೆ ಕಡಿವಾಣ ಹಾಕಿ , ತಜ್ಞ ಸಮಿತಿ ರಚಿಸಿ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರ ಜೀವನ ಚರಿತ್ರೆಯ ಕಾಲ ನಿರ್ಣಯ ನಿರ್ಧರಿಸಬೇಕು. ಇಂತಹ ವಿವಾದಗಳು ಕೊನೆಗೊಳ್ಳಲಿ. ನಮ್ಮ ವ್ಯಕ್ತಿ ಪ್ರತಿಷ್ಟೆಗೆ ಶರಣರ ಜೀವನವನ್ನು ಬೀದಿಗೆ ತರುವದು ತರವಲ್ಲ. ಕರ್ನಾಟಕ ಘನ ಸರಕಾರವು ಈ ಕೂಡಲೇ ಎಚ್ಚತ್ತು ಮುಂದಿನ ಸಲ ಬರುವ ಸರಕಾರೀ ಘೊಷಿತ ಆದ್ಯ ವಚನಕಾರರ ದೇವರ ದಾಸಿಮಯ್ಯನವರ ಬದಲಾಗಿ ಆದ್ಯ ವಚನಕಾರ ಜೇಡರ ದಾಸಿಮಯ್ಯನಾಗಬೇಕು.
ಶರಣರ ಜಯಂತಿ ಆಚರಿಸುವುದು ಸೂಕ್ತ ಆದರೆ ಇಂತಹ ವಿವಾದ ಹುಟ್ಟಿಸಿ ಮತ್ತೆ ಜಾತಿಯ ಸಂಘಟನೆಯನ್ನು ಬಲ ಪಡಿಸಿ ಮತಗಳಿಗಾಗಿ ಒಂದು ವರ್ಗವನ್ನು ಓಲೈಸುವ
ಕೆಲಸಕ್ಕೆ ಕರ್ನಾಟಕ ಸರಕಾರ ಮುಂದಾಗಿರುವುದು ದುರಂತದ ಸಂಗತಿ. ಈ ಕೂಡಲೇ ಇಂತಹ ವಿವಾದವು ಇತ್ಯರ್ಥಗೊಳ್ಳಲಿ. ಗೊಂದಲದಲ್ಲಿ ಒಬ್ಬ ಶರಣರ ಕೃತಿಯನ್ನು ಇನ್ನೊಬ್ಬ ಸಾಧಕನಿಗೆ ಹೋಲಿಸಿ ಅರ್ಥವಿಲ್ಲದ ಆಚರಣೆ ಮಾಡುವದು ಆತಂಕದ ವಿಷಯ.
ನನಗೆ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರ ಬಗ್ಗೆಯೂ ಗೌರವ ಆದರವಿದೆ. ಆದರೆ ಅವರು ಬೇರೆ ಬೇರೆ.


