ನಾಲತವಾಡದಲ್ಲಿ ಸ್ಮಶಾನ ಅತಿಕ್ರಮಣ | ಸರ್ಕಾರಿ ಕಚೇರಿಗೆ ಬಾಡಿಗೆ | ತಹಸೀಲ್ದಾರಗೆ ದೂರು
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸ್ಮಶಾನ ಜಾಗೆಯನ್ನು ಕಾನೂನುಬಾಹಿರವಾಗಿ ನೊಂದಣಿ ಮಾಡಿ ಅಕ್ರಮ ಕಟ್ಟಡಗಳನ್ನು ಕಟ್ಟಿ, ಸಂಘ ಸಂಸ್ಥೆಗಳಿಗೆ ಮತ್ತು ಸರ್ಕಾರಿ ಕಟ್ಟಡಗಳಿಗೆ ಬಾಡಿಗೆ ನೀಡಲಾಗಿದೆ ಎಂದು ಆರೋಪಿಸಿ, ಕೂಡಲೇ ಈ ಜಾಗೆಯನ್ನು ಸರ್ವೇ ಮಾಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರ ಶಿವಾನಂದ ವಾಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಉದಯರಶ್ಮಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ತಾಲೂಕಿನ ನಾಲತವಾಡ ಪಟ್ಟಣದ ಸ.ನಂ-೬೧೫ ಈ ಆಸ್ತಿಯು ಸ್ಮಶಾನ. ಇಲ್ಲಿ ಅನೇಕರು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಸಿರುತ್ತಾರೆ, ಹಾಗೂ ಕೆಲವು ಜಾಗ ಸಂಘ ಸಂಸ್ಥೆಗೆ ನೀಡಿದ್ದರು ಇನ್ನು ಕೆಲವರಲ್ಲಿ ಸರಕಾರದ ಕಟ್ಟಡಗಳಿವೆ. ಕೆಲವು ಜನ ಸ್ಮಶಾನ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿ ಅದನ್ನು ಸರ್ಕಾರಿ ಕಛೇರಿಗೆ ಬಾಡಿಗೆ ನೀಡಿರುತ್ತಾರೆ. ಸ್ಮಶಾನ ಜಾಗವನ್ನು ಯಾವದೇ ಕಾರಣಕ್ಕೂ ಮಾರಾಟ ಮಾಡಬಾರದು ಎಂದು ಕಂದಾಯ ಇಲಾಖೆಯ ನಿಯಮ ಇದ್ದರು ಕೂಡ ಸರಕಾರಿ ಜಾಗವನ್ನು ಹಿಂದಿನ ಗ್ರಾ.ಪಂಯಲ್ಲಿ ಹಣದ ಆಸೆಗೆ ೯ನಂ ರೆಜಿಸ್ಟರ್ ನಲ್ಲಿ ಕಾನೂನು ಬಾಹಿರ ನೊಂದಣಿ ಮಾಡಿಸಿದ್ದಾರೆ. ಮತ್ತು ಕೆಲವರು ಸರಕಾರಿ ಜಾಗವನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿದ್ದಲ್ಲದೇ ಈ ಜಾಗದ ಮೇಲೆ ಅನೇಕ ಜನರು ಸಾಲವನ್ನು ಸಹ ಪಡೆದಿದ್ದಾರೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣ ಸುಮಾರು ೧೮ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ ಹಲವು ಸಮೂದಾಯದವರಿಗೆ ಸ್ಮಶಾನ ಭೂಮಿನೇ ಇಲ್ಲ. ಇತ್ತೀಚಿಗೆ ದಲಿತರೊಬ್ಬರು ಶವ ಸಂಸ್ಕಾರ ಮಾಡಲು ಜಾಗವಿಲ್ಲದ ಕಾರಣ ತಮ್ಮ ಮನೆಯ ಮುಂದೆ ಶವ ಸಂಸ್ಕಾರ ಮಾಡಿರುವ ಘಟನೆ ಕೂಡ ನಡೆದಿದೆ. ಮಸಣಕ್ಕಾಗಿ ಸರ್ಕಾರಿ ಜಾಗ ಇದ್ದರು ಕೂಡ ಅವರಿಗೆ ಆ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶವಿಲ್ಲ ಯಾಕೆಂದರೆ ಸ್ಮಶಾನ ಜಾಗವನ್ನು ಈಗಾಗಲೆ ಅತಿಕ್ರಮಣ ಮಾಡಿಕೊಂಡಿದ್ದಾರೆ.
ಅತಿಕ್ರಮಣ ಮಾಡಿರುವ ಸ್ಮಶಾನ ಜಾಗದಲ್ಲಿ ತೆರವು ಕಾರ್ಯಾಚರಣೆ ಮಾಡಬೇಕೆಂದು ಕಳೆದ ಎರಡು ವರ್ಷದಿಂದ ಹೋರಾಟ ಮಾಡುತಿದ್ದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಯಾವದೇ ಕ್ರಮ ವಹಿಸಿಲ್ಲ ಕೇವಲ ನಿಯಮಕ್ಕೆ ಮಾತ್ರ ಎಂಬಂತೆ ಹಿಂದಿನ ಮುಖ್ಯಾಧಿಕಾರಿ ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಾರೆ.
ಸ್ಮಶಾನ ಅತಿಕ್ರಮಣ ಮಾಡಿರುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಬಂದಿವೆ, ತಹಶೀಲ್ದಾರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ತಹಶೀಲ್ದಾರ ಸಾಹೇಬರು ನಾವು ಪಟ್ಟಣ ಪಂಚಾಯತಗೆ ಹಸ್ತಾಂತರ ಮಾಡಿದ್ದೇವೆ. ಅತಿಕ್ರಮಣ ತೆರವು ಮಾಡುವ ಜವಾಬ್ದಾರಿ ಅವರದ್ದು ಎಂದು ಹೇಳಿದ್ದಾರೆ. ಈ ಹಿಂದೆ ಇದ್ದ ಮುಖ್ಯಾಧಿಕಾರಿ ೨೦೨೨ ರಲ್ಲಿಯೇ ಎರಡು ನೋಟಿಸ್ ಜಾರಿ ಮಾಡಿದ್ದಾರೆ, ಇಷ್ಟಾದರೂ ಕೂಡ ಯಾವುದೇ ಸ್ಪಷ್ಟ ಆದೇಶ ಅಥವಾ ತೆರವು ಕಾರ್ಯಾಚರಣೆ ಆರಂಭವಾಗದ ಹಿನ್ನಲೆ ತಹಸೀಲ್ದಾರ ಕೀರ್ತಿ ಚಾಲಕ ಮತ್ತು ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಅವರನ್ನು ಎದುರುದಾರರನ್ನಾಗಿಸಿ ಪ್ರಕರಣ ದಾಖಲಿಸಿರುವದಾಗಿ ತಿಳಿಸಿದರು.

