ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕೃಷಿ ಪರಿಸರದಲ್ಲಿ ಸೇರಿಸಲಾಗುತ್ತಿರುವ ಹಾನಿಕಾರಕ ರಾಸಾಯನಿಕಗಳನ್ನು ತಪ್ಪಿಸುವ ಮೂಲಕ ಆರೋಗ್ಯಕರ ಬೆಳೆಗಳನ್ನು ಬೆಳೆಯಲು ಮತ್ತು ದೀರ್ಘಕಾಲೀನ ಸುಸ್ಥಿರತೆಯನ್ನು ಉತ್ತೇಜಿಸಲು ಲಭ್ಯವಿರುವ ಪರಿಸರಾತ್ಮಕ ಪದ್ಧತಿಗಳೊಂದಿಗೆ ನಡೆಸುವ ಅನುಸಂಧಾನವೇ ಸಾವಯವ ಕೃಷಿ ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.
ಪಟ್ಟಣದ ತಹಸೀಲ್ದಾರ ಕಛೇರಿ ಹಿಂಭಾಗದಲ್ಲಿರುವ ಆದಿತ್ಯ ಫ್ಲಾಜಾ ಸಭಾಂಗಣದಲ್ಲಿ ಅಮೃತ ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯಡಿ ಸ್ಥಾಪಿಸಲಾದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ, ಬಸರಕೋಡದ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ ಹಾಗೂ ಸಾಂಗಲಿಯ ಪ್ರೋ ಅಗ್ರೋ ಬಯೋಟೆಕ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾವಯವ ಕೃಷಿ ಕಾರ್ಯಾನುಭವ ಹಾಗೂ ಒಳಸುಳಿಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಮಣ್ಣಿನ ಆರೋಗ್ಯ ವೃದ್ಧಿಸುವ ಜೊತೆ ಜೈವಿಕ ನಿಯಂತ್ರಕಗಳ ಮೂಲಕ ಸುಸ್ಥಿರ ಕೃಷಿಗೆ ಮುನ್ನುಡಿ ಬರೆಯಲು ಮತ್ತೆ ನಾವೆಲ್ಲ ಪಾರಂಪರಿಕ ಕೃಷಿಯಡೆಗೆ ಸಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರೋ ಅಗ್ರೋ ಬಯೋಟೆಕ್ ಕಂಪನಿಯ ವ್ಯವಸ್ಥಾಪಕ ನಿದೇರ್ಶಕ ಶಂಕರ ಜಾಧವ ಮಾತನಾಡಿ, ಮಣ್ಣಿನ ಆರೋಗ್ಯ ಸುಧಾರಿಸಿ ಹೆಚ್ಚಿನ ಇಳುವರಿ ಪಡೆಯಲು ಭೂಮಿಗೆ ಸೇರಿಸಬೇಕಾದ ಸಸ್ಯ ಮತ್ತು ಪ್ರಾಣಿ ತಾಜ್ಯದ ಸಾವಯವ ಒಳಸುಳಿಗಳ ಜೊತೆ ಸಮಗ್ರ ಬೆಳೆ ಅಭಿವೃದ್ಧಿ ಮತ್ತು ಸಂರಕ್ಷಕಗಳನ್ನು ಸಾವಯವ ರೂಪದಲ್ಲಿ ಒದಗಿಸುವ ಬದ್ದತೆ ನಮ್ಮದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಉಪಾಧ್ಯಕ್ಷ ಆರ್.ಬಿ ಸಜ್ಜನ ಮಾತನಾಡಿ ಮಣ್ಣಿನ ಆರೋಗ್ಯ, ಜೀವ ವೈವಿಧ್ಯತೆ ಮತ್ತು ಪರಿಒಸರ ಸಮತೋಲನವನ್ನು ಕಾಪಾಡುವ ಸವಾಲನ್ನು ಸಮರ್ಥವಾಗಿ ಎದುರಿಸಿ ಸುಸ್ಥಿರ ಕೃಷಿ ಪರಂಪರೆಯನ್ನು ಸೃಜಿಸುವ ನಿಟ್ಟಿನಲ್ಲಿ ರೈತರನ್ನು ಪ್ರೇರೇಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಮಾತನಾಡಿ ಬದಲಾಗುತ್ತಿರುವ ಜೀವನ ಶೈಲಿ, ಆದ್ಯತೆಗಳು ಹಾಗೂ ಹವ್ಯಾಸಗಳಿಂದ ರೈತಾಪಿ ವರ್ಗ ಕೃಷಿಯಿಂದ ದೂರಾಗುತ್ತಿರುವುದನ್ನು ತಡೆದು ಕೃಷಿಯನ್ನು ಮತ್ತೆ ಶ್ರೇಷ್ಠ ಸ್ಥಾನದಲ್ಲಿ ನಿಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿರ್ದೇಶಕರಾದ ನಿರ್ದೇಶಕರಾದ ಸೋಮನಗೌಡ ಬಿರಾದಾರ, ಶ್ರೀಶೈಲ ಮೇಟಿ, ಪರಸಪ್ಪ ಮೇಟಿ, ಬಸವರಾಜ ಕುಂಟೋಜಿ, ಭೀಮಣ್ಣ ಮಳಗೌಡರ, ಪ್ರಗತಿಪರ ರೈತರಾದ ಗುರುಸಂಗಪ್ಪ ಹಂಡರಗಲ್, ಬಸನಗೌಡ ಪಾಟೀಲ ಉಪಸ್ಥಿತರಿದ್ದರು.
ಮೊದಲಿಗೆ ಗುಂಡಪ್ಪ ಬಿರಾದಾರ ಸ್ವಾಗತಿಸಿದರು, ವಿಜಯಲಕ್ಷ್ಮಿ ಹೊಸಮನಿ ನಿರೂಪಿಸಿದರು. ಕೊನೆಯಲ್ಲಿ ಸಿದ್ದಪ್ಪ ಹೊಳಿ ವಂದಿಸಿದರು.

