ಉದಯರಶ್ಮಿ ದಿನಪತ್ರಿಕೆ
ಚಡಚಣ: ಬರಡೋಲ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪ್ರಾಂಶುಪಾಲ ಶ್ರೀಶೈಲ ಚನ್ನಗೊಂಡ ಹಾಗೂ ಡಾ. ರಾಮಕೃಷ್ಣ ಕುಲಕರ್ಣಿ ಅವರು ಜಂಟಿಯಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಡಾ.ರಾಮಕೃಷ್ಣ ಕುಲಕರ್ಣಿ ಅವರು ಇಂದಿನ ದಿನಮಾನಗಳಲ್ಲಿ ಅನೇಕ ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಗಾಗಿ ದಾಸರಾಗಿರುವ ಉದಾಹರಣೆಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳ ಪ್ರೌಢಾವಸ್ಥೆಯೇ ಆರೋಗ್ಯದ ಭದ್ರ ಅಡಿಪಾಯ ಹಾಕುವ ಸಮಯ. ಈ ವಯಸ್ಸಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಂಶುಪಾಲ ಶ್ರೀಶೈಲ ಚನ್ನಗೊಂಡ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಜ್ಞಾನದೀಪ ಶಿಕ್ಷಕರ ಕೊಡುಗೆ, ಡೆಸ್ಕ್–ಬೆಂಚ್ ನೀಡಿಕೆ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ಯೋಜನೆಗಳನ್ನು ಶಾಲೆಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಸೇವೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.ಆರೋಗ್ಯವೇ ಭಾಗ್ಯ, ಹಣ ಎಷ್ಟಿದ್ದರೇನು ಫಲ ಆರೋಗ್ಯ ಸರಿ ಇಲ್ಲದಿದ್ದರೆ ಮನುಷ್ಯನ ಜೀವನಕ್ಕೆ ಕವಡೆಕಾಸಿನ ಬೆಲೆಯಿಲ್ಲ ಸಂಭಂಧಿಕರು ಕೂಡಾ ದೂರಾಗುತ್ತಾರೆ. ಹೆತ್ತ ಮಕ್ಕಳೆ ಚಿಕಿತ್ಸೆಗೆ ಹಣ ಕೊಡುತ್ತಾರೆ ವಿನಹಃ ಆರೈಕೆ ಮಾಡುವದಿಲ್ಲ ಆದ್ದರಿಂದ ದುಶ್ಚಟಗಳಿಂದ ದೂರ ಇರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರ ಇರುತ್ತೇವೆ ಎಂದು ಸಾಮೂಹಿಕವಾಗಿ ಪ್ರಮಾಣ(ಸಂಕಲ್ಪ)ಮಾಡಿಸಲಾಯಿತು.
ವಲಯದ ಮೇಲ್ವಿಚಾರಕ ಮಹಾಂತೇಶ ಅವರು ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ರಮೇಶ ಮಲ್ಲಾಡಿ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಗುರುರಾಜ ದಂದರಗಿ, ಗಿರೀಶ್ ಉಮಾರಾಣಿ, ಕನ್ಯಾಕುಮಾರಿ ಹಿಪ್ಪರಗಿ, ವ್ಹಿಎಲ್‌ಇ ರಾಧಾ ಕುಲಕರ್ಣಿ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

