ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಿದ ನೇತ್ರತಜ್ಞ ಡಾ.ಪ್ರಭುಗೌಡ ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಸಿಕೊಳ್ಳುವ ಪತ್ರಕರ್ತರು ಆಧುನಿಕ ಸಮಾಜದ ಕೈಗನ್ನಡಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆಂದು ನೇತ್ರ ತಜ್ಞ ಡಾ.ಪ್ರಭುಗೌಡ ಪಾಟೀಲ ಬಣ್ಣಿಸಿದರು.
ನಗರದ ತಮ್ಮ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಭಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನೂತನ ಪದಾಧಿಕಾರಿಗಳಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಮಕ್ಕಳ ಕಣ್ಣಿಗಾಗುವ ಹಾಗೂ ಹೊಲ-ಗದ್ದೆಗಳಲ್ಲಿ ಬೆಳೆಗೆ ಕೀಟನಾಶಕ ಸಿಂಪಡಿಸುವುದರಿಂದ ರೈತರ ಕಣ್ಣಿಗಾಗುವ ಹಾನಿ ತಪ್ಪಿಸಲು ಜಿಲ್ಲೆಯ ಪತ್ರಕರ್ತರು ಸಾಕಷ್ಟು ಜಾಗೃತಿ ಮೂಡಿಸುತ್ತ ಬಂದಿರುವುದರಿಂದ ಈಗ ಅಂತಹ ಪ್ರಕರಣಗಳ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಡಾ.ಪ್ರಭುಗೌಡ ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ನಾವೆಲ್ಲ ಪದಾದಿಕಾರಿಗಳು ಸೇರಿ ಸಂಘವನ್ನು ಬೇರೆ ದಿಕ್ಕಿನತ್ತ ಮುನ್ನಡೆಸುವ ಯೋಚನೆ – ಯೋಜನೆಯನ್ನು ಹೊಂದಿದ್ದು ಈ ದಿಸೆಯಲ್ಲಿ ಹಿರಿಯ ಪತ್ರಕರ್ತರ, ಗಣ್ಯರ ಸಲಹೆ ಪಡೆದು ಮುಂದುವರಿಯುತ್ತೇವೆ ಎಂಬ ಆಶಯ ವ್ಯಕ್ತಪಡಿಸಿದರು.
ಡಾ.ಪ್ರಭುಗೌಡ ಪಾಟೀಲ ಅವರು ಮೊದಲಿನಿಂದಲೂ ಸಂಘದ ಹಿತೈಷಿಗಳಾಗಿದ್ದವರು. ನಮ್ಮ ರಾಜ್ಯ ಸಮ್ಮೇಳನಕ್ಕೂ ತನು-ಮನ-ಧನದಿಂದ ಪ್ರೋತ್ಸಾಹಿಸಿದವರು. ಈಗ ನಮ್ಮ ಸಂಘದ ಜಿಲ್ಲೆಯ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ನೇತ್ರ ಚಿಕಿತ್ಸೆಯ ಭಾಗ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ಕಸಾಪ ದೇವರಹಿಪ್ಪರಗಿ ಮಾಜಿ ತಾಲೂಕಾಧ್ಯಕ್ಷ ಕಬೂಲ ಕೊಕಟನೂರ ಅವರು, ಡಾ.ಪ್ರಭುಗೌಡ ಪಾಟೀಲ ಅವರ ಸಮಾಜಮುಖಿ ಕೆಲಸಗಳ ಕುರಿತು ವಿವರಿಸಿದರಲ್ಲದೇ ರಾಜಕೀಯ ರಂಗದಲ್ಲೂ ಅವರಿಗೆ ಉನ್ನತ ಸ್ಥಾನಮಾನಗಳು ಲಭಿಸಲೆಂದು ಹಾರೈಸಿದರು.
ಆಸ್ರತ್ರೆಯ ಸಿಬ್ಬಂದಿ ದತ್ತಾತ್ರೇಯ ಸ್ವಾಗತಿಸಿ, ನಿರೂಪಿಸಿದರು. ಡಾ.ವಿಶ್ವನಾಥ ವಂದಿಸಿದರು.

ಉಚಿತ ಚಿಕಿತ್ಸೆಯಿಂದ ಅಂಧರಿಗೆ ಬೆಳಕಿನ ಭಾಗ್ಯ :ಇಂದುಶೇಖರ
ವಿಜಯಪುರ ಜಿಲ್ಲೆ ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದ ಹಳ್ಳಿ-ಹಳ್ಳಿಗಳಲ್ಲಿ
ಅಸಂಖ್ಯಾತ ಅಂಧರಿಗೆ, ಕಣ್ಣಿನ ತೊಂದರೆ ಇರುವವರಿಗೆ ತಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಮೂಲಕ ಆ ಕುಟುಂಬಗಳ ಬಾಳಿಗೆ ನೇತ್ರ ತಜ್ಞ ಡಾ.ಪ್ರಭುಗೌಡ ಪಾಟೀಲ ಬೆಳಕಿನ ಭಾಗ್ಯ ನೀಡಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹೇಳಿದರು.
ವಿಜಯಪುರದ ನವಭಾಗದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಡಾ.ಪ್ರಭುಗೌಡ ಪಾಟೀಲ ಅವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಕರ್ತರ ಸಂಘದ ನಾವೆಲ್ಲ ನೂತನ ಪದಾಧಿಕಾರಿಗಳು ಸಂಘವನ್ನು ಅಭಿವೃದ್ಧಿಯ ಬೆಳಕಿನ ಪಥದತ್ತ ಕೊಂಡೊಯ್ಯಲೆಂಬ ಸದಾಶಯದಿಂದ ನಮಗೆ ಈ ಸನ್ಮಾನದ ಗೌರವ ನೀಡಿದ್ದು, ಇದರಿಂದ ತಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ಇಂದುಶೇಖರ ಅಭಿಪ್ರಾಯಪಟ್ಟರು.

ಸಮಾಜದ ಕಣ್ತೆರೆಸುವ ಪತ್ರಕರ್ತರ ಕಣ್ಣುಗಳ ರಕ್ಷಣೆಗೆ ಫ್ಯಾಮಿಲಿ ಕಾರ್ಡ್
ವಿಜಯಪುರ ಜಿಲ್ಲೆಯ ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗದವರಿಗೆ ಅನುಗ್ರಹ ಕಣ್ಣಿನ ಆಸ್ಪತ್ರೆಯ ವತಿಯಿಂದ ಉಚಿತವಾಗಿ ನೇತ್ರ ಚಿಕಿತ್ಸೆ ಹಾಗೂ ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆಯ ಸೌಲಭ್ಯ ಕಲ್ಪಿಸಿಕೊಡುವಂತೆ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಅವರ ಮನವಿಯನ್ನು ಪುರಸ್ಕರಿಸಿದ ಡಾ.ಪ್ರಭುಗೌಡ ಪಾಟೀಲ ಅವರು, ತಮ್ಮ ಲೇಖನಿಯ ಮೂಲಕ ಸಮಾಜದ ಕಣ್ತೆರೆಸುವ ಕಾರ್ಯದಲ್ಲಿ ತೊಡಗಿರುವ ಪತ್ರಕರ್ತರ ಕಣ್ಣುಗಳ ರಕ್ಷಣೆಗಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ಸದಸ್ಯರಿಗೆ ಶೀಘ್ರದಲ್ಲಿಯೇ ’ಫ್ಯಾಮಿಲಿ ಕಾರ್ಡ್’ ಮಾಡಿಕೊಡುವುದಾಗಿ ತಿಳಿಸಿದ ಅವರು, ಆ ಕಾರ್ಡ್ ಮೂಲಕ ತಮ್ಮ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು ಎಂದು ಭರವಸೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ
ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಸಮೀರ ಇನಾಮದಾರ, ಬಸವರಾಜ ಉಳ್ಳಾಗಡ್ಡಿ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ವಿನೋದ ಸಾರವಾಡ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಗುರುರಾಜ ಗದ್ದನಕೇರಿ, ಸುರೇಶ ಸಿದ್ದಪ್ಪ ತೆರದಾಳ, ಚಿದಂಬರ ಬಿ. ಕುಲಕರ್ಣಿ, ಸಂಜಯ ಟಿ. ಕೋಳಿ, ಶ್ರೀನಿವಾಸ ಡಿ. ಸೂರಗೊಂಡ, ಗೋಪಾಲ ಜಿ. ಕನಿಮಣಿ, ಶಿವಾನಂದ ಡಿ. ಶಿವಶರಣ, ಯಲಗೊಂಡ ಬೇನೂರ, ಸಂಜಯ ಕೋಳಿ, ಕಲ್ಲಪ್ಪ ಶಿವಶರಣ, ಪ್ರಭು ಕುಮಟಗಿ ಅವರನ್ನು ಡಾ.ಪ್ರಭುಗೌಡ ಪಾಟೀಲ ಸನ್ಮಾನಿಸಿ, ಗೌರವಿಸಿದರು.

