ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಆಹಾರ ಸೇವಿಸಿ ಐವರು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾದ ಘಟನೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಶಿವನಕಳ್ಳಿ ಪ್ರದೇಶದಲ್ಲಿನ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಭಾನುವಾರ ರಾತ್ರಿ ಊಟ ಸೇವಿಸಿದ ವಿದ್ಯಾರ್ಥಿನಿಯರಲ್ಲಿ ೯ ವಿದ್ಯಾರ್ಥಿನೀಯರಿಗೆ ಹೊಟ್ಟೆನೋವು, ವಾಂತಿ ಆರಂಭಗೊಂಡು ಇವರಲ್ಲಿ ಐವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಈ ಘಟನೆ ವಸತಿ ನಿಲಯದ ಸಿಬ್ಬಂದಿಯ ಬೇಜವಾಬ್ದಾರಿ ನಡೆಯನ್ನು ಸೂಚಿಸುತ್ತದೆ. ಆದ್ದರಿಂದ ಘಟನೆಗೆ ಕಾರಣರಾದ ಸಿಬ್ಬಂದಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ಬಸವರಾಜ ಇಂಗಳಗಿ, ಸಾಯಬಣ್ಣ ದಳಪತಿ, ಪ್ರಶಾಂತ ದೊಡಮನಿ, ಯಮನೂರಿ ಹರಿಜನ, ಪ್ರಲ್ಹಾದ ಶಿಂಧೆ, ಅರವಿಂದ ದೊಡಮನಿ, ಮಾಂತೇಶ ಚಲವಾದಿ, ಅನೀಲ ಕನಮಡಿ, ಕಾಳು ಕಡಕೋಳ ಇದ್ದರು.

