ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿದ್ಯಾರ್ಥಿ ನಿಲಯದಲ್ಲಿ ಶುಚಿತ್ವದ ಆಹಾರ, ಶುದ್ಧ ನೀರು, ಸ್ವಚ್ಛ ಗಾಳಿಯ ಸಹಿತ ಸಮಗ್ರ ಉತ್ತಮ ವಾತಾವರಣಕ್ಕೆ ಸಿಬ್ಬಂದಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಹಾರ ಸೇವಿಸಿ ಐವರು ವಿದ್ಯಾರ್ಥಿನೀಯರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮವಾರ ಭೇಟಿ ನೀಡಿ ವಿದ್ಯಾರ್ಥಿನೀಯರ ಆರೋಗ್ಯ ವಿಚಾರಿಸಿ, ನಿಲಯ ಪರಿಶೀಲಿಸಿ ಮಾತನಾಡಿದರು. ಮನೆ, ಮನೆಯವರನ್ನು ಬಿಟ್ಟು ವಿದ್ಯಾಭ್ಯಾಸಕ್ಕಾಗಿ ನಿಲಯಗಳಲ್ಲಿ ಅಭ್ಯಸಿಸುವ ಮಕ್ಕಳ ಜವಾಬ್ದಾರಿ ನಿಲಯ ಪಾಲಕರು ಹಾಗೂ ಸಿಬ್ಬಂದಿಯದಾಗಿದೆ. ವಿದ್ಯಾರ್ಥಿಗಳ ಆಹಾರ, ನೀರು, ಸ್ವಚ್ಛತೆಯ ಕುರಿತು ಸಿಬ್ಬಂದಿಯ ನಿರ್ಲಕ್ಷö್ಯ ಎಂದಿಗೂ ಸಹಿಸಲಾಗದು ಎಂದು ಹೇಳುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮತ್ತು ಇಂಥ ಘಟನೆಗಳು ಮತ್ತೇ ಮರುಕಳಿಸದಂತೆ ಎಚ್ಚರಿಕೆ ನೀಡಿ, ಎಲ್ಲ ವಿದ್ಯಾರ್ಥಿನೀಯರ ಬಗ್ಗೆ ಕಾಳಜಿ ವಹಿಸಲು ಸೂಚಿಸಿದರು.
ತಹಶೀಲ್ದಾರ ಪ್ರಕಾಶ ಸಿಂದಗಿ, ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ನಿಲಯ ಪಾಲಕಿ ದಫೇದಾರ, ಮಹಾಂತೇಶ ವಂದಾಲ, ಅಜೀತ ರಾಠೋಡ, ಎ.ಡಿ.ಮುಲ್ಲಾ ಇದ್ದರು.

