ಗುಮ್ಮಟ ನಗರಿಯಲ್ಲಿ ಅವಿಸ್ಮರಣೀಯ ಸಮ್ಮಿಲನ | 40 ವರ್ಷದ ಬಳಿಕ ಗುರು-ಶಿಷ್ಯರ ಅಪೂರ್ವ ಸಂಗಮ
ಉದಯರಶ್ಮಿ ದಿನಪತ್ರಿಕೆ
ವರದಿ: ಗುಲಾಬಚಂದ ಜಾಧವ
ವಿಜಯಪುರ: ಸುದೀರ್ಘ ನಾಲ್ಕು ದಶಕಗಳ ಪಯಣದ ನಂತರ ಕಲಿಸಿದ ಗುರು, ಕಲಿತ ಶಿಷ್ಯರ ಅಪೂರ್ವ ಪುನರುಜ್ಜೀವನ ಚೈತ್ರದ ಭಾವ ಬೆಸುಗೆಯ ಮಿಲನಗೊಂಡ ಅವಿಸ್ಮರಣೀಯ ಸವಿಘಳಿಗೆ ವಿಜಯಪುರ ನಗರದಲ್ಲಿ ಅನವರಣಿಸಿತು.
ನಗರದ ಬಿಎಲ್ ಡಿಇ ಸಂಸ್ಥೆಯ ಎ.ಎಸ್.ಪಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಲಿತ 1984-85 ನೇ ಸಾಲಿನ ಬಿಕಾಂ ವಿಭಾಗದ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಸ್ನೇಹ ಸಮ್ಮೇಳನ ಹಾಗೂ ಹೋಟೆಲ್ ಗ್ಯಾಲಕ್ಸಿ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಗಣ್ಯಮಾನ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಳೆಯ ಭಾವಾಂತರಂಗದ ಸವಿ ಮೊನಚುಗಳನ್ನು ಖುಷಿಯಿಂದ ತೆರೆದಿಟ್ಟರು. ಶಿಷ್ಯಸಹಪಾಠಿಗಳು ಅಂದಿನ ವ್ಯಾಸಂಗ ಅವಧಿಯಲ್ಲಿನ ಹಳೆ ಭಾವಗಳಿಗೆ ಜೀವ ತುಂಬಿ ಮನಸ್ಸು ಹಸಿಗೊಳಿಸಿಕೊಂಡರು. ತುಂಟಾಟತನದ ಹರಟೆ-ರಗಳೆ, ನೋವು-ನಲಿವಿನ ಖುಷಿಯೋಲ್ಲಾಸದ ಕ್ಷಣಗಳ ಭಾವಬುತ್ತಿ ತೆರೆದಿಟ್ಟರು.
ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಳೇ ವಿದ್ಯಾರ್ಥಿಗಳು ಒಂದೇ ಕಡೆ ಸೇರಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ “ಗುರು-ಶಿಷ್ಯರ” ಪವಿತ್ರಭಾವ ತರ್ಪಣ ಸಾಕ್ಷೀಕರಿಸಿತು. ಗುರು-ಶಿಷ್ಯರ ಬಾಂಧವ್ಯ ಪವಿತ್ರ ಗಹನವಾಗಿತ್ತು. ಇಲ್ಲಿ ಪರಸ್ಪರ ಪ್ರೀತಿ-ಗೌರವ, ಶ್ರದ್ಧೆ-ನಂಬಿಕೆ, ಆಚಲ ನಿಷ್ಟೆ, ಮಮತೆ-ವಾತ್ಸಲ್ಯಗಳ ಘಮ ಪರಿಮಳಿಸಿತ್ತು. ಶಿಷ್ಯರ ಗುರುವಂದನೆ ಪ್ರೀತಿ ಸಾಮರಸ್ಯದ ಲೋಕ ಸೃಜಿಸಿತ್ತು.
ಸುಮಾರು 40 ವರ್ಷಗಳ ಬಳಿಕ ವಿದ್ಯಾರ್ಥಿಗಳು ತಾವು ಓದಿದ ಕಾಲೇಜಿನಲ್ಲಿ ಸೇರಿ ವಿದ್ಯೆ ಕಲಿಸಿದ ಅಧ್ಯಾಪಕರಿಗೆ ಭಕ್ತಿಯಿಂದ ನಮಿಸಿ ಗುರುವಂದನೆಯ ಕಾಣಿಕೆಯೊಂದಿಗೆ ಗೌರವಾರ್ಪಣೆ ಸಲ್ಲಿಸಿ ಧನ್ಯತೆ ಮೆರೆದರು. ಗುರು-ಶಿಷ್ಯರ ಈ ಅಪೂರ್ವ ಸಮಾಗಮ ಅಪರೂಪಮಯವಾಗಿ ಕಣ್ಮನ ಮನಭಾವ ಸೆಳೆಯಿತು. ಭಾವನಾತ್ಮಕವಾಗಿ ಹೃದಯ ಹಂದರದ ಮಿಡಿತವನ್ನು ತಣಿಸಿತು. ಹಳೇ ನೆನಪುಗಳ ತೃಷೆದಾಹ ಮನಮನಗಳಲ್ಲಿ ಸಂಚಲಿಸಿತು. ಶಿಷ್ಯರು ಬೆಳೆದ ಪರಿಯನ್ನು ಕಂಡು ಅಧ್ಯಾಪಕರು ಖುಷಿ ಉನ್ಮಾದದಲ್ಲಿ ಬೆರಗುಗೊಂಡರು. ಬಹುತೇಕ ಇಲ್ಲಿ ಸಮ್ಮಿಲನಗೊಂಡ ಗುರುಗಳೆಲ್ಲ ನೂರರ ಸಂಧ್ಯಾಕಾಲದ ಆಸುಪಾಸಿನಲ್ಲಿದ್ದರೆ ಶಿಷ್ಯರೆಲ್ಲ ಭಾಗಶಃ ಐವತ್ತೈದು, ಆರವತ್ತರ ವಸಂತಕಾಲದ ಜೀವನ ಯಾತ್ರೆ ನಡೆಸುತ್ತಿರುವವವರು ಎಂಬುದು ವಿಶೇಷ. ಇಂಥ ಜೀವ ಚೇತನ “ಗುರು-ಶಿಷ್ಯರ ಸಂಗಮ” ಕಂಡಿದ್ದು ನಿಜಕ್ಕೂ ಅಭೂತಮಯ ಕ್ಷಣವಾಗಿತ್ತು ! ನೋಡುಗರ ಕಂಗಳು ತೇವಾಂಶದಲ್ಲಿ ಪರಿವಿಲ್ಲದೇ ಜಿನುಗಿ ಮಿನುಗುತ್ತಿದ್ದವು. ಭಾವನಾತ್ಮಕ ಪರಂಪರೆಯ ಪರಿಧಿಯಲ್ಲಿ ಗುರುಸ್ಥಾನದ ಮಹತ್ವವನ್ನು ಶಿಷ್ಯರು ಪ್ರಚಲಿಸಿದರು.
ಶಿಷ್ಯ ಬಳಗದ ಗುರುವಂದನೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ವಾಯ್.ಬಿ.ಪಟ್ಟಣಶೆಟ್ಟಿ, ವಿಶ್ರಾಂತ ಪ್ರಾಧ್ಯಾಪಕ ಜಿ.ಆರ್. ಕುಲಕರ್ಣಿ, ನಿವೃತ್ತ ದೈಹಿಕ ಶಿಕ್ಷಕ ಎಸ್.ಎಸ್. ಕೋರಿ, 40 ವರ್ಷಗಳ ನಂತರವೂ ಶಿಷ್ಯರ ಹಳೆ ಪಡೆ ಅತ್ಯಂತ ಪ್ರೀತಿ, ವಿಶ್ವಾಸದಿಂದ ನಮಗೆ ಈ ಇಳಿವಯಸ್ಸಿನಲ್ಲೂ ಆಹ್ವಾನಿಸಿ, ಗೌರವಾಧಾರದಿಂದ ಗುರುವಂದನೆ ಸಲ್ಲಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಸಾವಿರಾರು ವಿದ್ಯಾರ್ಥಿಗಳು ನಮ್ಮ ಕೈಯಲ್ಲಿ ಕಲಿತು ವಿವಿಧ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವದು ಸಂತಸವಾಗಿದೆ. ಈ ವಿದ್ಯಾರ್ಥಿಗಳ ಸುಸಂಸ್ಕೃತ ನಡೆನುಡಿ ಭಾವಾಭಿಮಾನ ನಮಗೆ ಸಂತೃಪ್ತಿ ತಂದಿದೆ ಎಂದರು.
ಗುರುಗಳ ನಿಷ್ಕಲ್ಮಶ ಭಾವವೇ ನಮಗೆ ಸ್ಪೂತಿ೯ : ಅಧ್ಯಕ್ಷತೆ ವಹಿಸಿದ್ದ ಮಾಜಿ ಬಿಡಿಎ ಅಧ್ಯಕ್ಷ, ಖ್ಯಾತ ಹೋಟೆಲ್ ಉದ್ಯಮಿ ಚಂದ್ರಕಾಂತ ಬಿ.ಶೆಟ್ಚಿ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಮ್ಮ ಜೀವನದ ಭವ್ಯತೆ ಬೆಳಕು ಕಾಣಲು ಸಾಧ್ಯ. ಅಧ್ಯಾಪಕರು ಜೀವನ ಪರಿವರ್ತನೆಗೆ ದಾರಿ ತೋರಿದ್ದಾರೆ. ಗುರುಗಳ ನಿಷ್ಕಲ್ಮಶ ಪ್ರೀತಿ ನಮ್ಮೆಲ್ಲರಿಗೂ ಸ್ಪೂತಿ೯ಯಾಗಿದೆ ಎಂದರು
ಎಚ್.ಎಸ್.ಸುರೇಂದ್ರ, ಉಲ್ಲಾಸ ಅರಕೇರಿ, ಸಂಜಯ ಲೋಕಾಪುರ, ಎಸ್. ಜಿ.ಕಕ್ಕಳಮೇಲಿ, ಎಂ.ಜಿ.ದೇಶಪಾಂಡೆ, ಡಿ.ಆಯ್.ಬೆನಕನಹಳ್ಳಿ, ಎಸ್.ಟಿ.ದೇಶಕುಲಕಣಿ೯, ರೋಹಿಣಿ ಜೋಶಿ, ಸುರೇಖಾ ಜೋಶಿ, ವಿದ್ಯಾ ಕುಲಕರ್ಣಿ, ಹಳ್ಳಿ ಇತರರು ಮಾತನಾಡಿ, ಗುರುಗಳ ಜ್ಞಾನ ದೀವಿಗೆಯಿಂದ ನಮ್ಮೆಲ್ಲರ ಬದುಕು ಹಸನವಾಗಿದೆ. ಉತ್ತಮ ಅಧ್ಯಾಪಕರನ್ನು ಪಡೆದ ಭಾಗ್ಯ ನಮ್ಮದು. ಗುರುಗಳ ಅನುಗ್ರಹ, ಆಶೀರ್ವಾದ, ಉಪದೇಶದಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದೆವೆ. ನಮ್ಮ ಈ ಗುರುಗಳು ಸದಾ ಹೃದಯದಲ್ಲಿ ಆಜರಾಮರು. ಅವರುಗಳ ಸೇವಾಭಾವ ಸ್ಮರಣೀಯ ಎಂದು ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸಿದರು.
ವಿಶೇಷ ಆಹ್ವಾನಿತರಾಗಿ ವಿಶ್ರಾಂತ ಪ್ರಾಂಶುಪಾಲ ಜಿ.ಆರ್.ಕುಲಕರ್ಣಿ ಇದ್ದರು.
ನಿವೃತ್ತ ಪ್ರಾಂಶುಪಾಲ ವಾಯ್.ಬಿ.ಪಟ್ಟಣಶೆಟ್ಟಿ, ನಿವೃತ್ತ ಅಧ್ಯಾಪಕರಾದ ಎಸ್.ಎಸ್ ಕೋರಿ, ಎಂ.ಎಸ್.ಝಳಕಿ, ಸಿ.ಜಿ. ಸಜ್ದನರ, ಎಸ್.ಬಿ.ಹಳ್ಳೂರ, ಶಿವಲೀಲಾ ಕಲ್ಮಠ, ಎಸ್.ಜಿ.ತಾಳಿಕೋಟಿ ಅವರುಗಳನ್ನು ಶಿಷ್ಯರು ಸನ್ಮಾನಿಸಿ ಗೌರವಿಸಿದರು.
ಹಳೆ ವಿದ್ಯಾರ್ಥಿಗಳಾದ ಚಂದ್ರಕಾಂತ ಶೆಟ್ಟಿ, ನರೇಂದ್ರ ಬಳಂಬಗಿ, ಡಿ.ಆಯ್.ಬೆನಕನಹಳ್ಳಿ, ಜಿ.ಎಲ್.ಕುಲಕರ್ಣಿ, ಶಿವು ನಿಂಬರಗಿ, ಸಿ.ಬಿ.ಕಳಕಿ, ಶಶಿ ಪೂಜಾರಿ, ಶ್ರೀಪಾದದೇಶ ಕುಲಕರ್ಣಿ, ಅಶೋಕ ಸೋಲಾಪುರ, ಬಸವರಾಜ ಪಟ್ಚೇದ, ಉಮೇಶ ದೇಶಪಾಂಡೆ, ಎಚ್.ಎಸ್.ಸುರೇಂದ್ರ, ರೋಹಿಣಿ, ಜೋಶಿ, ವಿಜಯಾ ನಂದರಗಿ, ಸುರೇಖಾ ಜೋಶಿ, ವೀಣಾ ಮುದ್ದೇಬಿಹಾಳ ಮೊದಲಾದ ಪ್ರಮುಖರ ಮುಂದಾಳತ್ವದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಅಚ್ಚತನದ ಮಾದರಿಯಲ್ಲಿ ಜರುಗಿತು.
ನೂರಾರು ಹಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಆಲಮಟ್ಟಿ ಹಳಕಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನಿರೂಪಿಸಿದರು. ಸಿ.ಬಿ.ಇಕ್ಕಲಕಿ ಸ್ವಾಗತಿಸಿದರು. ಅಶೋಕ ಸೋಲಾಪುರ ವಂದಿಸಿದರು.
ಗುರು-ಶಿಷ್ಯರ ಸಂಬಂಧದ ಭವ್ಯತೆ
ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿಂದು ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ನಡುವೆ ಆತ್ಮೀಯತೆಯ ಗೌರವ ಭಾವ ಇಂದಿನ ವರ್ತಮಾನದಲ್ಲಿ ಕಾಣುವುದು ವಿರಳ. ಆದರೆ ಇಲ್ಲಿ ಗುರು-ಶಿಷ್ಯರ ಸಂಬಂಧ ಭವ್ಯತೆಯಿಂದ ಚಿಗುರಿದ್ದು ಸ್ಮರಣೀಯವಾಗಿತ್ತು. ” ಗುರುಭಕ್ತಿ ತರ್ಪಣದಿಂದ ಗುರುವಂದನೆ ಕಾರ್ಯಕ್ರಮ” ನಗರದಲ್ಲಿ ಅತ್ಯಂತ ಗೌರವಯುತವಾಗಿ, ವಿನಯತೆಯ ಸೌಹಾರ್ದ ನೆಲೆಯಲ್ಲಿ ಸೆಲೆಯಾಗಿ ಜರುಗಿರುವುದು ವಿಶೇಷವಾಗಿದೆ.

