ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗುಡ್ಡಾಪೂರ ದಾನಮ್ಮಾದೇವಿ ದರ್ಶನಕ್ಕಾಗಿ ತೆರಳುವ ಪಾದಯಾತ್ರಿ ಭಕ್ತ ಸಮೂಹದ ಸೇವೆಗಾಗಿ ಪಟ್ಟಣದ ಸಿದ್ದಯ್ಯ ಮಲ್ಲಿಕಾರ್ಜುನಮಠ ಅವರು ಸತತ ೨೫ ವರ್ಷಗಳಿಂದ ಹಾಗೂ ಪ್ರಭುದೇವ ಹಿರೇಮಠ(ಹಂದಿಗನೂರ) ಕಳೆದ ೭ ವರ್ಷಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದಾರೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಕರ್ನಾಟಕ ತೈಲ ವಿತರಣಾ ಕೇಂದ್ರದ ಪಕ್ಕದಲ್ಲಿ ಸಿದ್ದಯ್ಯ ತಮ್ಮ ಅವಿರತ ಭಕ್ತಿಯ ಸೇವೆಗಾಗಿ ನಿರಂತರ ದಾಸೋಹ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ದಾನಮ್ಮದೇವಿಯ ಆಶೀರ್ವಾದವೇ ಪ್ರೇರಣೆ ಎಂದು ಹೇಳುತ್ತಾ, ಜಾತ್ರೆ ಆರಂಭದ ಮುಂಚೆ ಒಂದುವಾರ ಪಾದಯಾತ್ರೆ ನಡೆಸುವ ಭಕ್ತ ಸಮೂಹಕ್ಕೆ ನೀರು, ವಿವಿಧಉಪಹಾರ, ಹಣ್ಣು, ಚಹಾ, ಬಿಸಿನೀರು, ಗುಳಿಗೆ, ಔಷಧಿಗಳ ಸೇವೆ ಒದಗಿಸಿ ಭಕ್ತಿಯ ಸಹಕಾರ ನೀಡುತ್ತಿದ್ದಾರೆ. ಇವರ ಸೇವೆಗೆ ಪೆಟ್ರೋಲ್ ಪಂಪ್ ಮಾಲೀಕರಾದ ಎ.ಕೆ.ನಾಡಗೌಡ ಪ್ರತಿವರ್ಷ ಜಾಗೆ ವ್ಯವಸ್ಥೆ ಕಲ್ಪಿಸಿದರೆ, ಔಷಧಿ ಅಂಗಡಿ ಮಾಲೀಕ ನಿಂಗು ಹಡಗಲಿ ಭಕ್ತರ ತಾತ್ಕಾಲಿಕ ಅನಾರೋಗ್ಯಕ್ಕೆ ಚಿಕಿತ್ಸಾ ರೂಪದಲ್ಲಿ ಗುಳಿಗೆ, ಔಷಧಿಗಳನ್ನು ಒದಗಿಸುತ್ತಿದ್ದಾರೆ. ಇನ್ನು ಮಿತ್ರರಾದ ಈರಣ್ಣ ಮಠ, ಬಲು ಮೆಟಗಾರ, ಶಿವು ಕೊಣ್ಣೂರ ಸಹಕಾರ ನೀಡಿದ್ದಾರೆ ಎಂದು ತಮ್ಮ ದಾಸೋಹದ ಮಾಹಿತಿ ನೀಡಿದರು.
ವಿಜಯಪುರ ರಸ್ತೆಯ ತಮ್ಮ ತೋಟದ ಆವರಣದಲ್ಲಿ ಪ್ರಭುದೇವ ಹಿರೇಮಠ ಅವರು ಸಹ ಪೆಂಡಾಲ್ ಅಳವಡಿಸಿ, ಕಳೆದ ೭ ವರ್ಷಗಳಿಂದ ಅಲ್ಲಿ ತಾವು ಬೆಳೆದ ವಿಶೇಷ ಪೇರಲಹಣ್ಣಿನ ಜೊತೆಗೆ ವಿವಿಧ ಬಗೆಯ ಉಪಹಾರ ಏರ್ಪಡಿಸಿದ್ದಾರೆ.
ಅವರ ಸೇವೆಗೆ ಮಕ್ಕಳಾದ ಲತಾ ತಡಪಟ್ಟಿ, ದಾನಮ್ಮ ಸಾರಂಗಮಠ, ಮಂಜುಳಾಗುರು ಕೈಜೋಡಿಸಿ ಸ್ನಾನ, ಕುಡಿಯುವ ನೀರು ಸಹಿತ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ.

