ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಉಳುವಿಗಾಗಿ ಜನವೇದಿಕೆ ಮಹಿಳಾ ಸಂಘಟನೆಯಿಂದ ವಿನೂತನ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಜಿಲ್ಲಾ ಆಸ್ಪತ್ರೆ ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಜನವೇದಿಕೆ ಮಹಿಳಾ ಸಂಘಟನೆ ರಂಗೋಲಿ ಚಳುವಳಿ ಹಮ್ಮಿಕೊಳ್ಳುವ ಮೂಲಕ ಪ್ರತಿಭಟಿಸಿದರು.
ಮಂಗಳವಾರ ಪಟ್ಟಣ ಪಂಚಾಯಿತಿ ಎದುರುಗಡೆ ಜನ ವೇದಿಕೆ ಮಹಿಳಾ ಸಂಘಟನೆ ಸದಸ್ಯರು ರಂಗೋಲಿ ಹಾಕುವ ಮೂಲಕ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಉಳಿವಿಗಾಗಿ ರಂಗೋಲಿ ಬಿಡಿಸಿ ವಿನೂತನವಾಗಿ ಪ್ರತಿಭಟಿಸಿದರು.
ನಂತರ ಪ.ಪಂ ಮುಖ್ಯಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನ್ಯಾಯ ಬೆಲೆ ಅಂಗಡಿ ಮಾಲಿಕ ಅಪ್ಪು ಶೆಟ್ಟಿ ಮಾತನಾಡಿ, ಸರಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಖಾಸಗಿಕರಣ ಮಾಡಿದರೆ ಬಡ ಜನರ ಚಿಕಿತ್ಸೆ ಕಷ್ಟಕರ ವಾಗುತ್ತದೆ. ಯಾವುದೆ ಕಾರಣಕ್ಕೂ ಸರಕಾರಿ ಆಸ್ಪತ್ರೆ ಮತ್ತು ಜಿಲ್ಲೆಗೆ ಮಂಜುರಾಗಿರುವ ಸರಕಾರಿ ವೈದ್ಯಕೀಯ ಕಾಲೇಜು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.
ಜನವೇದಿಕೆಯ ಮುಖ್ಯಸ್ಥೆ ಒಲಿವಾ ಸಲ್ಡಾನ ಮಾತನಾಡಿ, ವಿಜಯಾಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜುರಾಗಿದು ಅದು ಖಾಸಗಿ ಸಹಭಾಗಿತ್ವದಲ್ಲಿ ಮಾಡುತ್ತಿರುವ ಬಗ್ಗೆ ಜಿಲ್ಲೆಯ ಜನ ಕಳೆದ ಎರಡು ತಿಂಗಳಿಂದ ಹೋರಾಟ ಮಾಡುತ್ತಿದ್ದು ಈ ಬಗ್ಗೆ ಸರ್ಕಾರ ಸಾರ್ವಜನಿಕ ಹಿತ ಕಾಪಾಡುಲು ಮುಂದಾಗದಿರುವದು ವಿಪರ್ಯಾಸ ಸಂಗತಿ. ಈ ಬಗ್ಗೆ ಸರ್ಕಾರದ ಗಮನಕ್ಕೆ ಬಂದರೂ ವಿಜಯಪುರ ಜಿಲ್ಲೆಯ ತಮ್ಮ ಸರ್ಕಾರದ 6 ಶಾಸಕರು ಅದರಲ್ಲಿ ಇಬ್ಬರು ಸಚಿವರು ಇದ್ದರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಬೇಸರ ತಂದಿದೆ ಎಂದರು.
ಸರ್ಕಾರಿ ಖಾಸಗಿ ಒಪ್ಪಂದಗಳು (ಪಿಪಿಪಿ) ಎಲ್ಲೂ ಯಶಸ್ವಿಯಾಗಿಲ್ಲ. ರಾಯಚೂರು ಜಿಲ್ಲೆಯ ರಾಜೀವ್ ಗಾಂಧಿ ಸೂಪರ್ ಸ್ಪೆಶೀಯಾಲ್ಲಿ ಅಸ್ಪತ್ರೆಯನ್ನು ಅಪೋಲೊ ಸಂಸ್ಥೆಗೆ ಹಸ್ತಾಂತರ ಮಾಡಿದ ನಂತರ ಅಲ್ಲಿ ಹಣಕಾಸಿನ ಅಕ್ರಮಗಳು, ಬಿ.ಪಿ.ಎಲ್ ಕುಟುಂಬಗಳಿಗೆ ವಂಚನೆ ಮತ್ತು ಆರೋಗ್ಯ ಸೇವೆಗಳ ನಿರಾಕರಣೆ, ಕಳಪೆ ಮಟ್ಟದ ಆರೋಗ್ಯ ಸೇವೆಗಳು ಇತ್ಯಾದಿ ಸಮಸ್ಯೆಗಳ ಕುರಿತು ಸರ್ಕಾರದ್ದೇ ಮೌಲ್ಯಮಾಪನ ಸಾಬೀತು ಪಡಿಸಿದೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಬಿ ಆರ್ ಶೆಟ್ಟಿಯವರ ಕಂಪನಿಗೆ ಹಸ್ತಾಂತರ ಮಾಡಿ 9 ವರ್ಷಗಳಾದರೂ ಉಡುಪಿ ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡದ ಕೆಲಸ ಪೂರ್ಣಗೊಂಡಿಲ್ಲ. ಈ ರೀತಿ ಸರ್ಕಾರಿ-ಖಾಸಗಿ ಒಪ್ಪಂದಗಳ ವಿರುದ್ಧ ಬಲವಾದ ಪುರಾವೆಗಳಿದ್ದರೂ ಅವುಗಳನ್ನು ನಿರ್ಲಕ್ಷಿಸಿ, ಮತ್ತೆ ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ ರಂದರು. ಖಾಸಗೀಕರಣ ಮಾಡುವದರಿಂದ ಬಡ ದಲಿತ, ಆದಿವಾಸಿ, ಹಿಂದುಳಿದ ಜನಾಂಗಗಳ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಅಲ್ಪ ಅವಕಾಶವೂ ಕೂಡ ಕಣ್ಮರೆಯಾಗುತ್ತದೆ. ವೈದ್ಯರಾಗಬೇಕೆನ್ನುವ ಬಡ ಮಕ್ಕಳ ಕನಸು ನುಚ್ಚು ನೂರಾಗುತ್ತದೆ. ಸರಕಾರಿ ವೈದ್ಯಕೀಯ ಕಾಲೇಜು ಖಾಸಗಿಕರ ಮಾಡುವದರಿಂದ ವೈದ್ಯ ವೃತ್ತಿಯು ಉಳ್ಳವರು ಶ್ರೀಮಂತರು ಬಲಾಡ್ಯರ ಕಪಿಮುಷ್ಟಿ ಸೇರಿ ಆರೋಗ್ಯ ಸೇವೆಯು ಮತ್ತಷ್ಟು ವ್ಯಾಪಾರಿಕರಣಕ್ಕೆ ಇಳಿಯುತ್ತದೆ. ವೈದ್ಯರುಗಳು ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೈಬಿಡುತ್ತಾರೆ. ಯಾವುದೇ ನಿಯಂತ್ರಣವಿಲ್ಲದ ಖಾಸಗಿ ಆರೋಗ್ಯ ವಲಯಕ್ಕೆ ಶರಣಾಗತಿಯಾಗುವ ದುರಂತದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ ಎಂದರು. ಮುಖ್ಯಮಂತ್ರಿಗಳು ತಾವು ಹಿಂದುಳಿದ ಜನಾಂಗಕ್ಕೆ ಸೇರಿದವರಾಗಿ ನಾಡಿನ ದೀನ ದಲಿತರ ಕಷ್ಟಗಳನ್ನು ಉಳ್ಳವರಾಗಿದ್ದೀರಿ, ಜನಪರವಾಗಿ ನಡೆದುಕೊಳ್ಳುವ ತಾವು ಸರ್ಕಾರದ ಈ ಜನವಿರೋಧಿ ನಿರ್ಧಾರವನ್ನು ತಕ್ಷಣವೇ ಹೀಂಪಡೆದು ಈ ನಾಡಿನ ಜನರ ಆರೋಗ್ಯದ ಹಕ್ಕು ಮಾತ್ರವಲ್ಲದೇ ಘನತೆಯಿಂದ ಜೀವಿಸುವ ಹಕ್ಕನ್ನು ಕಾಪಾಡಬೇಕೆಂದು ಎಂದು ಹೆಳಿದರು.. ಜನವೇದಿಕೆ ಸಂಯೋಜಕ ಆನಂದ ಕುಮಸಗಿ, ಸದಸ್ಯರಾದ ಸಾವಿತ್ರಿ ಕನ್ನೊಳ್ಳಿ, ಭಾಗ್ಯಶ್ರೀ ಬಿರಾದಾರ, ಸಿದ್ದಮ್ಮ ನಾಯ್ಕೊಡಿ, ಮಲ್ಲಮ್ಮ ಕೂರಕುಟಗಿ, ಪುಷ್ಪಾ ಮೂಲಿಮನಿ, ಕವಿತಾ ಸಿಂಘೆ, ಭಾರತಿ ಸಿಂಘೆ ಸೇರಿದಂತೆ ನೂರಾರು ಮಹಿಳೆರು ಪಾಲ್ಗೊಂಡಿದ್ದರು. ಪ.ಪಂ ಅಧಿಕಾರಿ ಎಂ.ಎ. ಗುಣಕಿಕರ ಮನವಿ ಸ್ವಿಕರಿಸಿದರು.

