ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಧರ್ಮಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಚಡಚಣ ವಲಯದ ಪರಮಾನಂದ ಕಾರ್ಯಕ್ಷೇತ್ರದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಬಟ್ಟೆ ಬ್ಯಾಗ್ ತಯಾರಿಕಾ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.
ತರಬೇತಿಯ ಸಮಾರೋಪ ಕಾರ್ಯಕ್ರಮವನ್ನು ಚಡಚಣ ತಾಲೂಕಿನ ಯೋಜನಾಧಿಕಾರಿ ನಟರಾಜ್ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ನಮ್ಮೆಲ್ಲರ ಮಾತೃ ಹೃದಯಿ ಮಾತೃಶ್ರೀ ಹೇಮಾವತಿ ಅಮ್ಮನವರು ಈ ನಾಡಿನ ಜನರ ಬಡತನ ನಿವಾರಣೆಗಾಗಿ ಮತ್ತು ಮಹಿಳೆಯರು ಸ್ವಾವಲಂಬನೆಯಾಗಿ ಬದುಕಬೇಕೆಂಬುವ ನಿಟ್ಟಿನಲ್ಲಿ ಸೃಜನಶೀಲ ಕಾರ್ಯಕ್ರಮದಂತಹ ವಿಶೇಷ ಕಾರ್ಯಕ್ರಮಗಳನ್ನು ಜ್ಞಾನವಿಕಾಸ ಕೇಂದ್ರದ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದ್ದು, ಅದೆಷ್ಟೋ ನಿರುದ್ಯೋಗಿಗಳನ್ನು ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ-ಉದ್ಯೋಗದ ತರಬೇತಿಗಳನ್ನು ನೀಡುವುದರ ಮೂಲಕ ಉದ್ಯೋಗಿಗಳನ್ನಾಗಿಸಿ ಸದಸ್ಯರ ಬದುಕು ಬಂಗಾರವಾಗುವಂತೆ ಮಾಡುತ್ತಿದೆ.
ಅದೇ ರೀತಿ ಭೂತಾಯಿ ಸಂರಕ್ಷಣೆ, ಪರಿಸರ ಸುರಕ್ಷತೆ, ಪ್ಲಾಸ್ಟಿಕ್ ಮುಕ್ತ ನಾಡನ್ನು ಮಾಡಬೇಕೆನ್ನುವ ಉದ್ದೇಶ ಹಾಗೂ ಸ್ವ ಉದ್ಯೋಗಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ನಮ್ಮ ತಾಲೂಕಿನ ಜಿ.ವಿ.ಕೆ ಕೇಂದ್ರದ ಸದಸ್ಯರಿಗೆ ಬಟ್ಟೆ ಬ್ಯಾಗ್ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದ್ದು, ತಾವೆಲ್ಲರೂ ಅತ್ಯಂತ ಉತ್ಸಕತೆಯಿಂದ ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡಿದ್ದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಇದನ್ನು ನೀವೆಲ್ಲರೂ ಬಂಡವಾಳವಾಗಿ ಬಳಕೆ ಮಾಡಿಕೊಂಡು ಇದರಿಂದ ನೀವು ದಿನದ ಆದಾಯವನ್ನು ಹೆಚ್ಚು ಮಾಡಿಕೊಂಡು ಸಮೃದ್ಧಿ ಹೊಂದಬೇಕೆಂಬುದು ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶಯವಾಗಿದೆ ಎಂದರು.
ಮುಖ್ಯ ಅತಿಥಿ ಚಡಚಣ ಕ.ರ.ವೇ. ಅಧ್ಯಕ್ಷ ಸೋಮಶೇಖರ ಬಡಿಗೇರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬಡವರ, ನಿರ್ಗತಿಕರ ಮತ್ತು ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಕಲ್ಯಾಣವನ್ನು ಸುಧಾರಿಸುವುದು ಮತ್ತು ಕೌಶಲ್ಯ ತರಬೇತಿ, ಉದ್ಯೋಗ ಸೃಷ್ಟಿ, ಸಾಲ ಸೌಲಭ್ಯ, ಆರೋಗ್ಯ ಮತ್ತು ನೈರ್ಮಲ್ಯ ಸುಧಾರಣೆ, ಕೃಷಿ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರೋತ್ಸಾಹ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಕೈಗೊಳ್ಳುತ್ತಿದ್ದು ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಚಡಚಣ ತಾಲ್ಲೂಕು ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷ ರುದ್ರಪ್ಪ ಪೂಜಾರಿ, ವಲಯದ ಮೇಲ್ವಿಚಾರಕ ಶಿವಯ್ಯ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.

