ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಒಂದು ಮಗು ವಿದ್ಯೆ ಕಲಿತ ಬಳಿಕ ವೈದ್ಯೆ, ಇಂಜಿನಿಯರಿಂಗ್ ಕೆಲಸದಲ್ಲಿ ತೊಡಗಿ ಬಿಡುವಿಲ್ಲದೇ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಸ್ವಾರ್ಥ ಜೀವನವನ್ನು ನಡೆಸುತ್ತಿದ್ದಾರೆ. ಕಾರಣ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಾನವೀಯ ಗುಣ ಬೆಳೆಯಲು ಸಾಧ್ಯ. ಅನಾಥ ಮಕ್ಕಳ ಸರ್ವತೋಮುಖ ಬೆಳೆವಣಿಗೆಯಾಗಲೂ ಸಾಧ್ಯ ಎಂದು ಮಹಾಂತ ಸ್ವಾಮೀಜಿ ಹೇಳಿದರು.
ಸಿಂದಗಿ ಪಟ್ಟಣದ ಹೊರವಲಯದಲ್ಲಿರುವ ಭೀಮಾ ಯುನಿವರ್ಸಲ್ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಇಂಡಿ ತಾಲೂಕಿನ ಝಳಕಿಯ ಶಿವಶಂಕರ ವಿದ್ಯಾವರ್ಧಕ ಸಂಘದ ಧೂಳಖೇಡದಲ್ಲಿ ನಡೆಯುವ ಶ್ರೀಚಂದ್ರಶೇಖರ ಶ್ರವಣ ದೋಷವುಳ್ಳ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಂದ ಮಲ್ಲಗಂಬ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಭೀಮಾದಂತಹ ಶಾಲೆಗಳು ಗುರುತಿಸಿ ಇಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಮಕ್ಕಳ ಜನಪದ ಹಾಡು, ನೃತ್ಯ, ಉತ್ತರ ಕರ್ನಾಟಕದ ಜೋಗತಿ ನೃತ್ಯ, ಅಪ್ಪಟ ಜಾನಪದ ಕಲೆ, ತಲೆಯ ಪಡವಣ ಹೊತ್ತುಕೊಂಡು ನೃತ್ಯ ಪ್ರದರ್ಶನ, ಶಿಕ್ಷಕ ಆಂಗಿಕ ಸಂಜ್ಞೆ ಮೂಲಕ ಶ್ರವಣ ದೋಷವುಳ್ಳ ಮಕ್ಕಳು ನೃತ್ಯ, ಮಲ್ಲಗಂಬ, ನವದುರ್ಗಿಯರ ನೃತ್ಯ ವಿಶೇಷ ಗಮನ ಸೆಳೆಯಿತು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೋಳೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಶಾಹಿನ್ ಶೇಖ್ ನಿರ್ದೇಶಕರಾದ ಜಿ.ಕೆ.ಪಡಗಾನೂರ, ಡಾ.ಎಂ.ಎಂ.ಪಡಶೆಟ್ಟಿ, ದತ್ತು ಮಾವೂರ, ಪ್ರಶಾಂತ ಕಮತಗಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

