ಕೇಂದ್ರ ಜಲ ಆಯೋಗದ ಸಹಾಯಕ ನಿರ್ದೇಶಕ ಅಧಿಕಾರಿಗಳಿಗೆ ಅಕ್ಷಯ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಣೆಕಟ್ಟುಗಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಅಣೆಕಟ್ಟು ಸುರಕ್ಷತಾ ಕಾಯ್ದೆಯನ್ನೇ ಜಾರಿಗೆ ತಂದಿದ್ದು, ಆಣೆಕಟ್ಟುಗಳ ಶಿಥಿಲದಿಂದ ಜೀವ ಹಾನಿಯಾದರೆ ಅದಕ್ಕೆ ಅಣೆಕಟ್ಟೆಗಳ ಅಧಿಕಾರಿಗಳನ್ನೇ ಹೊಣೆ ಮಾಡಿ, ಅದಕ್ಕೆ ಅಧಿಕಾರಿಗಳಿಗೆ ಕಾನೂನಿನಡಿ ಶಿಕ್ಷೆಗೂ ಅವಕಾಶ ಇದೆ ಎಂದು ಕೇಂದ್ರ ಜಲ ಆಯೋಗದ ಸಹಾಯಕ ನಿರ್ದೇಶಕ ಅಕ್ಷಯ ಹೇಳಿದರು.
ನವದೆಹಲಿಯ ಕೇಂದ್ರ ಜಲ ಆಯೋಗ, ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಸಹಯೋಗದಡಿ, ಅಣೆಕಟ್ಟುಗಳ ನವೀಕರಣ ಮತ್ತು ಸುಧಾರಣೆ ಯೋಜನೆ (ಡ್ರಿಪ್) ಅಡಿ ಇಲ್ಲಿಯ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಲಮಟ್ಟಿ ಅಣೆಕಟ್ಟು ಸುರಕ್ಷತೆಯ ಬಗ್ಗೆ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅಣೆಕಟ್ಟುಗಳ ಸುರಕ್ಷತೆ, ಭದ್ರತೆ, ಮೇಲ್ವಿಚಾರಣೆ ಎಂಬುದು ಜಲಾಶಯದ ಅಧಿಕಾರಿಗಳ ಅತ್ಯಂತ ಮಹತ್ವದ ಹೊಣೆಗಾರಿಕೆ ಎಂದರು.
ಕೇಂದ್ರ ಜಲ ಆಯೋಗ ಪ್ರತಿ ರಾಜ್ಯದಲ್ಲಿ ಒಂದೊಂದು ಅಣೆಕಟ್ಟುಗಳನ್ನು ಆಯ್ದು ಅಲ್ಲಿ ಅಣೆಕಟ್ಟುಗಳ ಬಗ್ಗೆ ಜಾಗೃತಿ ಮಾಡುತ್ತದೆ. ಪ್ರಸ್ತುತ ವರ್ಷ ಕರ್ನಾಟಕದಲ್ಲಿ ಆಲಮಟ್ಟಿ ಅಣೆಕಟ್ಟು ಒಂದನ್ನೇ ಮಾತ್ರ ಆಯ್ಕೆಮಾಡಿಕೊಳ್ಳಲಾಗಿದೆ ಎಂದರು.
ಅಣೆಕಟ್ಟುಗಳನ್ನು ಕಟ್ಟಲು ನಾನಾ ನಿಯಮಗಳನ್ನು ರೂಪಿಸಲಾಗಿದೆ. ಜತೆಗೆ ಹಳೆ ಅಣೆಕಟ್ಟುಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರದ ಡ್ರಿಪ್ ಅಡಿ ನವೀಕರಣ ಹಾಗೂ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಹರಭಜನ್ ಸಿಂಗ್, ಬಂಡ್ಲಾ ಹೇಮಾದಿತ್ಯ, ಜ್ಯೋತಿ ಗುಪ್ತಾ, ದೀಪ್ತಿ ಮೋಹನ, ಮೊಹಮ್ಮದ್ ಅಸ್ಲಾಂ, ಡಾ ರಾಜವೆಲ್ ಮಾಣಿಕ್ಯಂ, ಡಾ ಅಸಿಯಾ ಬೇಗಂ, ಗುರುನಾಥ ದಡ್ಡೆ, ರಾಕೇಶ ಜೈನಾಪುರ, ರೈತ ಮುಖಂಡ ಬಸವರಾಜ ಕುಂಬಾರ ಮಾತನಾಡಿದರು.
ಆಲಮಟ್ಟಿಯ ಕೆಲ ಕಡೆ ಜಾಗೃತಿ ಜಾಥಾ ಕಾರ್ಯಕ್ರಮವೂ ಜರುಗಿತು.
ಉದ್ಘಾಟನಾ ಸಮಾರಂಭದಲ್ಲಿ ಅಧಿಕಾರಿಗಳಾದ ವಿ.ಆರ್. ಹಿರೇಗೌಡರ, ಬಿ.ಎಸ್. ಪಾಟೀಲ, ಐ.ಎಲ್. ಕಳಸಾ ಮತ್ತೀತರರು ಇದ್ದರು.
ಅಧಿಕಾರಿಗಳಿಗೆ ಸೀಮಿತವಾದ ಜಾಗೃತಿ ಕಾರ್ಯಕ್ರಮ
ಕರ್ನಾಟಕದಲ್ಲಿ ಕೇವಲ ಆಲಮಟ್ಟಿ ಅಣೆಕಟ್ಟು ಒಂದನ್ನೇ ಆಯ್ದುಕೊಂಡು ಕೇಂದ್ರ ಜಲ ಆಯೋಗ ಜಲಾಶಯದ ಸುತ್ತಮುತ್ತಲಿನ ಜನರಿಗೆ, ಸಮುದಾಯಕ್ಕಾಗಿ ಅಣೆಕಟ್ಟುಗಳ ಸುರಕ್ಷತೆಯ ಬಗ್ಗೆ ತಿಳಿಸಲು ಜಾಗೃತಿ ಕಾರ್ಯಕ್ರಮ ಆಯೋಜಿಸಿದರೂ, ಕೆಬಿಜೆಎನ್ಎಲ್ ನ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಮುದಾಯದ ಯಾವೊಬ್ಬ ವ್ಯಕ್ತಿಯೂ ಪಾಲ್ಗೊಳ್ಳದೇ ಕೇವಲ ಕೆಬಿಜೆಎನ್ಎಲ್ ನೌಕರರು, ಕೆಲ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸೇರಿ ಕೇವಲ ೨೦೦ ಕ್ಕಿಂತಲೂ ಕಡಿಮೆ ಜನ ಮಾತ್ರ ಪಾಲ್ಗೊಂಡರು.
ಪ್ರಚಾರದ ಕೊರತೆಯ ಕಾರಣ ಕೇವಲ ಸಮುದಾಯ ಭವನಕ್ಕೆ ಕಾರ್ಯಕ್ರಮ ಸೀಮಿತಗೊಂಡಿತು.
ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಯಾರಿಗೂ ಈ ಬಗ್ಗೆ ಯಾವುದೇ ಮಾಹಿತಿಯೂ ಇರಲಿಲ್ಲ ಎಂದು ಹಲವರು ಅಸಮಾಧಾನ ತೋಡಿಕೊಂಡರು. ಇಷ್ಟೆಲ್ಲಾ ಮಹತ್ವದ ಕಾರ್ಯಕ್ರಮದ ಬಗ್ಗೆ ಸಮುದಾಯಕ್ಕೆ ಈ ಬಗ್ಗೆ ಮಾಹಿತಿ ನೀಡದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದರು.

