ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಕ್ಕಳು ದೇಶಕ್ಕಾಗಿ ಶ್ರಮಿಸಿದ ಮಹನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿರಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸನ್ಮಾರ್ಗದಲ್ಲಿ ನಡೆಯುವಂತೆ ಶಿಕ್ಷಕರು ಮತ್ತು ಪಾಲಕರು ಮಾರ್ಗದರ್ಶನ ನೀಡಬೇಕು ಎಂದು ಎಚ್.ಜಿ.ಪಪೂ ಕಾಲೇಜಿನ ಕನ್ನಡ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಹೇಳಿದರು.
ಪಟ್ಟಣದ ಸಮರ್ಥ ವಿದ್ಯಾವಿಕಾಸ ವಿವಿದೋದ್ದೇಶಗಳ ಸಂಸ್ಥೆಯ ಪ್ರೇರಣಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ.ಮ. ಪೂಜಾರ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ಕಲಿಸಲು ಸಾಧ್ಯ. ಪುಟಾಣಿ ಮಕ್ಕಳಿಗೆ ಒಳ್ಳೆಯ ವಿಚಾರ, ನಡವಳಿಕೆಗಳನ್ನು ಬಾಲ್ಯದಿಂದಲೇ ಕಲಿಸಿದರೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತಿ ಹ.ಮ.ಪೂಜಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಗು ಬೆಳೆಯುವ ಮನೆ ಹಾಗೂ ಸುತ್ತಲಿನ ಪರಿಸರ ಅವರ ಮಾನಸಿಕ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾಗಿರಬೇಕು. ಮಕ್ಕಳು ಬೆಳೆಯುತ್ತಲೇ ಸಂಸ್ಕಾರ, ಸಂಸ್ಕೃತಿ, ಪರಂಪರೆ ಕಲಿಯುತ್ತಾರೆ. ಮಕ್ಕಳ ಅಭಿವೃದ್ಧಿಗೆ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳು ಮೊಬೈಲ್ ಗಿಳಿನಿಂದ ಮಕ್ಕಳು ಆಚೆ ಬಂದು ಪುಸ್ತಕದ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಮಾತನಾಡಿದರು.
ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲೆಯ ವತಿಯಿಂದ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ವಲಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ೨೦೨೫-೨೬ರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತಿ ಹ.ಮ.ಪೂಜಾರ, ಮುಕ್ತಾಯಕ್ಕ ಕತ್ತಿ ಹಾಗೂ ಗಿನ್ನಸ್ ದಾಖಲೆ ಬರೆದ ದೃತಿ ಶಿರಶ್ಯಾಡ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಗುರುಮಾತೆ ಎಸ್.ಬಿ.ಅಸ್ಕಿ, ಸುರೇಶ, ಭಾಗ್ಯಶ್ರೀ ಮುರಡಿ, ಪ್ರವೀಣ ಸೂರ್ಯವಂಶಿ ಸೇರಿದಂತೆ ಶಾಲೆಯ ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಈಶ್ವರ ಹಿರೇಮಠ, ಅನುಶ್ರೀ ಹಿರೇಮಠ, ಹಾಗೂ ಸಚಿನ ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.

