ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಸಮುದಾಯದ ಭಾಗವಹಿಸುವಿಕೆಯು ಅತ್ಯಂತ ಮಹತ್ವದ್ದಾಗಿದ್ದು, ಮಕ್ಕಳ ಶೈಕ್ಷಣಿಕ ಉನ್ನತಿಗೆ ಪಾಲಕರ ಪಾತ್ರ ಬಹು ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಹೇಳಿದರು.
ಅವರು, ನಗರದ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ ೪೯ರ ಅಫಜಲಪುರ ಟಕ್ಕೆ ವಿಜಯಪುರ ನಗರ ವಲಯದ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಹಾಗೂ ಶಾಲಾ ಪೋಷಕರ-ಶಿಕ್ಷಕರ ಮಹಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಹಮ್ಮಿಕೊಂಡ ವಿಶೇಷ ಮಹಾ ಪೋಷಕರ ಸಭೆಗೆ ಅಫಜಲಪುರ ಟಕ್ಕೆಯ ಬಹತೇಕ ಎಲ್ಲ ಪಾಲಕರು ಪಾಲ್ಗೊಂಡು ತಮ್ನ ಮಗುವಿನ ಶೈಕ್ಷಣಿಕ ಪ್ರಗತಿ ತಿಳಿದುಕೊಳ್ಳಲು ಇದೊಂದು ಸದಾವಕಾಶ ಒದಗಿಸಿದೆ. ಮನೆಯೇ ಮೊದಲ ಪಾಠ ಶಾಲೆ, ಜನನಿ ಮೊದಲ ಗುರು ಎಂಬಂತೆ ಮಕ್ಕಳು ಶಾಲೆಯಲ್ಲಿ ಕಲಿತ ದೈನಂದಿನ ವಿಷಯಗಳ ಕುರಿತಾಗಿ, ಪಾಲಕರು ಮಕ್ಕಳೊಂದಿಗೆ ಬೆರೆತು ಪ್ರೋತ್ಸಾಹಿಸಬೇಕು. ಮಗು ಮತ್ತಷ್ಟು ಪ್ರೇರಣೆ ಹೊಂದಿ, ತನ್ನ ಕಲಿಕೆಯಲ್ಲಿ ಉತ್ಸುಕತೆ ತೋರಿ, ವಿಷಯ ಕರಗತ ಮಾಡಿಕೊಳ್ಳಲು ಪಾಲಕರ ಕಕುಲಾತಿ ಅತ್ಯಂತ ಅವಶ್ಯವಿದೆ. ಸರಕಾರಿ ಶಾಲೆಗಳಲ್ಲಿ ಶೇ.ನೂರರಷ್ಟು ಹಾಜರಾತಿ ಇರಬೇಕು ಮತ್ತು ಶಾಲೆಗೆ ಆಗಮಿಸಿದ ಪ್ರತಿ ಮಗು ಅತ್ಯಂತ ಉತ್ಸಾಹದಿಂದ ಕಲಿಕೆಯಲ್ಲಿ ಭಾಗವಹಿಸಲು ಶಿಕ್ಷಕರ ಕಲಿಕಾ ಬೋಧನೆ ಪರಿಣಾಮಕಾರಿಯಾಗಲು ಕಲಿಕಾ ಬೋಧನಾ ಅಂಶಗಳು ಸಮ್ಮಿಳಿತಗೊಳಿಸಿ ಬೋಧನೆ ಮಾಡಬೇಕು. ಇಲಾಖೆಯಿಂದ ಪ್ರತಿ ತಿಂಗಳು ಪಾಲಕರ ಸಭೆಯನ್ನು ಆಯೋಜನೆ ಮಾಡಲಾಗುತ್ತಿದೆ. ಎಲ್ಲಾ ಪಾಲಕರು ಈ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ, ಅಗತ್ಯ ಸಲಹೆ ಸೂಚನೆ ನೀಡಬೇಕು ಎಂದರು.
ಇಂದು ಹಮ್ಮಿಕೊಂಡ ಮಹಾಸಭೆಯು ರಾಜ್ಯದ ಪ್ರತಿಯೊಂದು ಸರಕಾರಿ ಶಾಲೆ ಮತ್ತು ಸರಕಾರಿ ಕಾಲೇಜಿನಲ್ಲಿ ಏಕಕಾಲಕ್ಕೆ ನಡೆಯುತ್ತಿದೆ.ಇದರ ಮುಖ್ಯ ಉದ್ದೇಶ ಸರಕಾರ ಶಿಕ್ಷಣಕ್ಕಾಗಿ ಒದಗಿಸುತ್ತಿರುವ ಸೌಲಭ್ಯಗಳ ಮಾಹಿತಿ ಪಾಲಕರು ಹೊಂದಬೇಕು. ಜೊತೆಗೆ ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಮತ್ತು ಪಾಲಕರ ಹಾಗೂ ಜವಾಬ್ದಾರಿ ಕುರಿತ ಮಾಹಿತಿ ವಿನಿಮಯ ಮಾಡಿಕೊಳ್ಳುವುದಾಗಿದೆ ಎಂದರು.
ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ವ್ಹಿ ಹೊಸೂರ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಯೋಗೆಶಕುಮಾರ ನಡುವಿನಕೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲಕರಿಗೆ ಮತ್ತು ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಲ್ತಾಫ ಇಟಗಿ, ಶಾಲೆಯ ಮುಖ್ಯ ಗುರುರುಗಳಾದ ಚಂದ್ರಕಾಂತ ಕನಸೆ, ಎ ಕೆ ದಳವಾಯಿ, ಶಿಕ್ಷಣ ಸಂಯೋಜಕರು, ರಾಜು ಮಸೂತಿ, ಬಿ ಆರ್ ಪಿ, ಬಸವರಾಜ ಪಡಗಾನೂರ, ಸಿ ಆರ್ ಪಿ, ಮತ್ತು ಎಸ್ ಬಿ ಐ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ವಿಕಾಸ ಸೇರಿದಂತೆ ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ ಸದಸ್ಯರು, ಅಫಜಲಪುರ ಟಕ್ಕೆ ನಿವಾಸಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಗುರುರುಗಳಾದ ಚಂದ್ರಕಾಂತ ಕನಸೆ ಸ್ವಾಗತಿಸಿದರು. ಮಲ್ಲಯ್ಯ ಸ್ವಾಮಿ ಶಿಕ್ಷಕರು ವಂದಿಸಿದರು ಹಾಗೂ ಸವಿತಾ ತಿಗಡಿ ನಿರೂಪಿಸಿದರು.

