ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಬ್ಬು ಹೇರಿಕೊಂಡು ಹೋಗುವ ವಾಹನಗಳಿಗೆ ಕಡ್ಡಾಯವಾಗಿ ರಿಪ್ಲೆಕ್ಟರ್ ಅಳವಡಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ವಿಶೇಷ ಮುತವರ್ಜಿ ವಹಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಬ್ಬು ನುರಿಸುವ ಹಂಗಾಮು ಆರಂಭಗೊಂಡಿದೆ, ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಕಬ್ಬು ಹೇರಿಕೊಂಡು ಟ್ರಾಕ್ಟರ್, ಲಾರಿಗಳು ಪ್ರಯಾಣ ಮಾಡುತ್ತಿವೆ, ಅನೇಕ ಹೆದ್ದಾರಿಗಳಲ್ಲಿ ಈ ವಾಹನಗಳು ಸಂಚರಿಸುತ್ತಿವೆ, ಆದರೆ ಬಹುತೇಕ ಈ ತೆರನಾದ ವಾಹನಗಳಿಗೆ ರಿಪ್ಲೆಕ್ಟರ್‌ಗಳಿಲ್ಲ, ಇದರಿಂದಾಗಿ ಹಿಂಬದಿಯಾಗಿ ಬರುವ ವಾಹನಗಳಿಗೆ ವಾಹನ ಬರುವಿಕೆ ಗೊತ್ತಾಗುವುದಿಲ್ಲ, ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ, ದುರದೃಷ್ಟವಶಾತ್ ಅಪಘಾತವಾದರೆ ಜೀವ ಹಾನಿಯೂ ಸಂಭವಿಸುವ ಸಾಧ್ಯತೆ ಇರುತ್ತದೆ, ಅದರ ಜೊತೆಗೆ ಕಬ್ಬು ಬೆಳೆಗಾರರು ಕಷ್ಟಪಟ್ಟು ಬೆಳೆದ ಬೆಳೆಯೂ ಸಹ ಹಾನಿಯಾಗಿ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ಹೊರೆಯೂ ಉಂಟಾಗುತ್ತದೆ, ಈ ಎಲ್ಲ ಕಾರಣಗಳಿಂದ ಕಬ್ಬು ಹೇರಿಕೊಂಡು ಬರುವ ವಾಹನಗಳಿಗೆ ರಿಪ್ಲೆಕ್ಟರ್ ಹಾಗೂ ಪೂರಕವಾದ ಸುರಕ್ಷಾ ಉಪಕರಣಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ಮುತವರ್ಜಿ ವಹಿಸಬೇಕಾಗಿರುವುದು ಅಗತ್ಯವಾಗಿದೆ, ಈ ವಿಷಯವಾಗಿ ಜಿಲ್ಲಾಧಿಕಾರಿಗಳೊಂದಿಗೂ ಚರ್ಚೆ ನಡೆಸಿರುವೆ, ಈ ವಿಷಯದ ಬಗ್ಗೆ ನಿಗಾ ವಹಿಸುವಂತೆ ಚರ್ಚೆ ಮಾಡಿರುವೆ, ಅವರು ಸಹ ಈ ವಿಷಯವನ್ನು ಗಂಭೀರವಾಗಿ ಸ್ವೀಕರಿಸುವುದಾಗಿ ಹೇಳಿದ್ದಾರೆ ಎಂದು ಜಿಗಜಿಣಗಿ ಹೇಳಿದ್ದಾರೆ.

