ಅಸಂಖ್ಯಾತ ಭಕ್ತರ ಮಧ್ಯೆ ಸಾಗಿದ ದೈವಿಕ ಚಕ್ರಗಳು
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಹಾಗೂ ವಿಜ್ರಂಭಣೆಯಿಂದ ಜರುಗಿತು. ಸಾವಿರಾರು ಭಕ್ತರ ಸಾನ್ನಿಧ್ಯದಲ್ಲಿ ಎರಡು ದಿನಗಳ ಜಾತ್ರಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶೋಭೆ ಪಡೆಯಿತು.
ರವಿವಾರ ಸಂಜೆ ೭ ಗಂಟೆಗೆ ಅಗ್ನಿ ಪುಟು ಪ್ರಾರಂಭಗೊಂಡಿತು. ಭಕ್ತಾದಿಗಳು ಅಗ್ನಿ ಕುಂಡಕ್ಕೆ ಕಟ್ಟಿಗೆ ಹಾಗೂ ಎಣ್ಣೆ ಸಮರ್ಪಿಸಿದರು. ಮಧ್ಯರಾತ್ರಿ ೨ ಗಂಟೆಗೆ ಅಗ್ನಿ ಪ್ರವೇಶ ವಿಧಿ ಪ್ರಾರಂಭಗೊಂಡಿತು. ಮೊದಲು ಪುರವಂತರು ಅಗ್ನಿ ಕುಂಡದ ಸುತ್ತ ಪ್ರದಕ್ಷಿಣೆ ಹಾಕಿ ಅಗ್ನಿ ಪ್ರವೇಶಿಸಿದರು.
ನಂತರ ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಇತರೆ ರಾಜ್ಯಗಳ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಅಗ್ನಿ ಪ್ರವೇಶಿಸಿ ಪುನೀತರಾದರು.
ಸೋಮವಾರದಂದು ಬೆಳಿಗ್ಗೆ ಮಹಾರುದ್ರಾಭಿಷೇಕದೊಂದಿಗೆ ಸಕಲ ಪೂಜಾ ಕ್ರಮಗಳನ್ನು ನೆರವೇರಿಸಲಾಯಿತು. ಸಂಜೆ ೫ ಗಂಟೆಗೆ ಆರಂಭವಾದ ಮದ್ದು ಸುಡುವ ಕಾರ್ಯಕ್ರಮ ಭಕ್ತರ ಚಿತ್ತವನ್ನು ಬಾನಂಗಳದತ್ತ ಸೆಳೆಯಿತು.
ನಂತರ ನಡೆದ ಭವ್ಯ ರಥೋತ್ಸವ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಅನೇಕ ಭಕ್ತರು ರಥವನ್ನು ಎಳೆದು ತಮ್ಮ ಮನೋಕಾಮನೆಗಳನ್ನು ಶ್ರೀ ವೀರಭದ್ರರ ಮುಂದಿಟ್ಟುಕೊಂಡರೆ, ಅಸಂಖ್ಯಾತ ಭಕ್ತರು ರಥಕ್ಕೆ ಬಾಳೆಹಣ್ಣು ಮತ್ತು ಉತ್ತತ್ತಿ ಸಮರ್ಪಿಸಿ ತಮ್ಮ ಇಷ್ಟಾರ್ಥಗಳಿಗೆ ಫಲ ನೀಡಲೆಂದು ಪ್ರಾರ್ಥಿಸಿಕೊಂಡರು.
ಜಾತ್ರೆಯ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ವಹಿಸಿತ್ತು. ಯಾವುದೇ ಅಡಚಣೆ ಇಲ್ಲದೆ ಕಾರ್ಯಕ್ರಮಗಳು ಸುಗಮವಾಗಿ ಜರುಗುವಂತೆ ಸ್ಥಳೀಯ ಆಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡಿತ್ತು.

