ಮಕ್ಕಳ ದಿನಾಚರಣೆ ಪ್ರಯುಕ್ತ ಅಕಾಡೆಮಿ ಕೇಂದ್ರ ಕಛೇರಿಗೆ ವಿಶೇಷ ದೀಪಾಲಂಕಾರ | ಬೆಳಿಗ್ಗೆಯಿಂದ ಸಂಜೆವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
ಉದಯರಶ್ಮಿ ದಿನಪತ್ರಿಕೆ
ಧಾರವಾಡ: ದೇಶದ ಮೊದಲ ಪ್ರಧಾನಿಯಾಗಿ ನವ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಪಂಡಿತ ಜವಾಹರಲಾಲ ನೆಹರೂಜಿಯವರು. ಅವರ ಆದರ್ಶಗಳು ಸದಾ ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತಹವು. ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ನೆಹರೂ ರವರು ತಮ್ಮ ಜನ್ಮ ದಿನವನ್ನು ದೇಶದ ಮಕ್ಕಳಿಗಾಗಿ ಸಮರ್ಪಿಸಿದವರು. ಇಂದು ಮಕ್ಕಳ ದಿನಾಚರಣೆಯನ್ನು ನಾವೆಲ್ಲ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಮಕ್ಕಳೇ ನಾಡಿನ ನಾಳಿನ ಭವಿಷ್ಯ ಆಶಾಕಿರಣಗಳಾಗಿದ್ದು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಾ ಬದ್ಧವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಕೇಂದ್ರ ಕಚೇರಿಯಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಮುದ್ದು ಮಕ್ಕಳ ಸಮ್ಮುಖದಲ್ಲಿ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ಅಕಾಡೆಮಿಯ ಕೇಂದ್ರ ಕಛೇರಿಗೆ ವಿಶೇಷ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೊತೆಗೆ ಅಕಾಡೆಮಿಯ ಸಭಾಭವನದಲ್ಲಿ ಬೆಳಿಗ್ಗೆ ೧೦.೦೦ ರಿಂದ ಸಂಜೆ ೮.೦೦ ಘಂಟೆಯವರೆಗೆ ಮಕ್ಕಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಡೀ ಆವರಣ ವಿವಿಧ ವೇಷ ಭೂಷಣಗಳಿಂದ ವಿಶೇಷ ಉಡುಪು ಧರಿಸಿ ಆಗಮಿಸಿದ್ದ ಮುದ್ದು ಮಕ್ಕಳು ಎಲ್ಲರ ಗಮನ ಸೆಳೆದರು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಇದರ ಜೊತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಮಕ್ಕಳಿಗಾಗಿ ಬೆಳಿಗ್ಗೆ ೬.೩೦ ಗಂಟೆಗೆ ಧಾರವಾಡದ ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿತ್ತು. ನಾಡಿಗೆ ಕೊಡುಗೆ ನೀಡಿದ ವಿದ್ವಾಂಸರು ಜನ್ಮ ತಾಳಿದ ನಿವಾಸಗಳಿಗೆ ಭೇಟಿ ಕೊಟ್ಟು ಸಂಭ್ರಮಿಸಿದರು.

