ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಾತು ವ್ಯಕ್ತಿಯನ್ನು ಮನುಷ್ಯನ್ನಾಗಿ ನಿರ್ಮಾಣ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂದರ್ಭವರಿತು ಸೂಕ್ಷ್ಮವಾಗಿ ಮಾತನಾಡಿದರೆ ಆ ಮಾತಿಗೆ ತೂಕ ಬರುತ್ತದೆ. ಇದರಿಂದ ಅವನು ಎಲ್ಲರ ಗೌರವಕ್ಕೆ ಪಾತ್ರನಾಗುತ್ತಾನೆಂದು ಬಿ.ಎಲ್.ಡಿ.ಇ. ಸಂಸ್ಥೆಯ ಪದವಿ ವಿಭಾಗದ ಆಡಳಿತಾಧಿಕಾರಿ ಪ್ರೊ. ವಿ.ಎಸ್.ಬಗಲಿ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ.ಇಂಗ್ಲೀಷ ಹಾಗೂ ಹಿಂದಿ ವಿಭಾಗಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪದಗಳ ಶಕ್ತಿಃ ತಮ್ಮನ್ನು ಅಭಿವ್ಯಕ್ತ ಪಡಿಸುವ ಕಲೆ ಎಂಬ ವಿಷಯದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಂದರ್ಭ ನೋಡಿಕೊಂಡು ಮಾತು ಆಡಬೇಕು. ಪ್ರತಿಯೊಬ್ಬರೂ ಮಾತಿನ ಕಲೆ ರೂಢಿಸಿಕೊಳ್ಳಬೇಕು. ಮಾತೇ ಮುತ್ತು, ಮಾತೇ ಮೃತ್ಯು ಎಂಬುವದನ್ನು ಅರಿತುಕೊಂಡು ಮಾತನಾಡಬೇಕೆಂದರು.
ಇಂಗ್ಲೀಷ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರಿಶ ಎಚ್.ಆರ್. ಮಾತನಾಡಿ, ಯಾವುದೇ ಒಂದು ಭಾಷೆಯು ಬಹುಕಾಲದವರೆಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಗಟ್ಟಿಯಾಗಿ ಉಳಿಯಬೇಕಾದರೆ ಭಾಷೆಯಲ್ಲಿ ಸ್ಪಷ್ಟತೆ, ಸಂಕ್ಷಿಪ್ತತೆ ಹಾಗೂ ಸಂದರ್ಭದ ಮಹತ್ವವನ್ನು ಒಳಗೊಂಡಿರಬೇಕು. ನಾವು ನಮ್ಮ ಸಾರ್ವತ್ರಿಕ ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ನಮ್ಮ ಭಾಷಾ ಪ್ರೌಢಿಮೆ ಹಾಗೂ ಅಭಿವ್ಯಕ್ತಿಯ ಸಾಮರ್ಥ್ಯವು ತುಂಬಾ ಪರಿಣಾಮ ಬೀರುತ್ತದೆಯೆಂದು ಅಭಿಪ್ರಾಯಪಟ್ಟರು.
ಹಿಂದಿ ವಿಷಯದ ಸಂಪನ್ಮೂಲ ವ್ಯಕ್ತಿ ಡಾ. ಧನ್ಯಕುಮಾರ ಬಿರಾದಾರ ಮಾತನಾಡಿ, ವ್ಯಕ್ತಿಯ ಬದುಕಿನಲ್ಲಿ ಮಾತು ಅಥವಾ ಅವನು ಬಳಸುವ ಪದದಿಂದಲೇ ಅವನು ಸಮಾಜದಲ್ಲಿ ಮೇಲ್ಮಟ್ಟಕ್ಕೆ ಅಥವಾ ಕೆಳಮಟ್ಟಕ್ಕಿಳಿಯಬಹುದು. ಆದ್ದರಿಂದ ನಾವು ಜಗಜ್ಯೋತಿ ಬಸವಣ್ಣನವರ ವಚನವಾದ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ನುಡಿಯನ್ನು ಚಾಚೂ ತಪ್ಪದೇ ಅಳವಡಿಸಿಕೊಂಡರೆ ಮೌಲಿಕ ವ್ಯಕ್ತಿಗಳಾಗಿ ಹೊರಹೊಮ್ಮಬಹುದೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು.
ಆಯ್.ಕ್ಯೂ.ಎ.ಸಿ.ಯ ಸಂಯೋಜಕ ಪ್ರೊ.ಸಿ.ಪಿ.ಧಡೇಕರ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಆರ್.ಎಮ್.ಮುಜಾವರ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಸಂತೋಷ ಸೂರ್ಯವಂಶಿ ಅವರು ವೇದಿಕೆಯಲ್ಲಿದ್ದರು.
ಠಾಕಾದೇವಿ ಲಮಾಣಿ ಪ್ರಾರ್ಥಿಸಿದಳು. ಶಿಫಾಸಾಧಿಕಾ ಮತ್ತು ನಿಖಿತಾ ನಿರೂಪಿಸಿದರು. ಪಿ.ಎಸ್.ನಾಟೀಕಾರ ವಂದಿಸಿದರು.

