ಕುದರಿಸಾಲವಾಡಗಿಯಲ್ಲಿ ಕಳೆದ ೩೧ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ತೆರವು ಗೊಳಿಸಿದ 143 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖಂಡ ಅಶೋಕಗೌಡ ಪಾಟೀಲ ಅವರ ನೇತೃತ್ವದಲ್ಲಿ ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ಕಳೆದ ಮೂವತ್ತೊಂದು ದಿನಗಳಿಂದ ನಿರಾಶ್ರಿತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ, ಅಹೋರಾತ್ರಿ ಧರಣಿ ಗುರುವಾರ ಸಂಜೆ ಲೋಕೋಪಯೋಗಿ ಇಲಾಖೆಯ ಇಇ ಸಿ.ಎಸ್.ಪೊಲೀಸಪಾಟೀಲ, ತಾಪಂ ಇಓ ಪ್ರಕಾಶ ದೇಸಾಯಿ ಅವರು ನೀಡಿದ ಭರವಸೆ ಮೇರೆಗೆ ಧರಣಿ ನೇತೃತ್ವ ವಹಿಸಿದ್ದ ಮುಖಂಡರು, ನಿರಾಶ್ರಿತರು ತಮ್ಮ ಧರಣಿಯನ್ನು ಹಿಂಪಡೆದುಕೊಂಡರು.
ಕಳೆದ 9 ದಿನಗಳಿಂದ ಧರಣಿ ನಿರತರು ಅಹೋರಾತ್ರಿ ಆರಂಭ ಮಾಡಿದ್ದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸಪಾಟೀಲ ಅವರು ನಿರಾಶ್ರಿತರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಜಿಲ್ಲಾ ಮುಖ್ಯರಸ್ತೆ ನಿರ್ಮಾಣ ಕಾಮಗಾರಿ ಆರಂಭ ಮಾಡುವ ಸಂದರ್ಭದಲ್ಲಿ ಕೆಲವು ಮನೆಗಳನ್ನು ತೆರವು ಗೊಳಿಸಲು ಕುರಿತು ಆಯಾ ಮನೆಗಳಿಗೆ ತಿಳಿಸಲಾಗಿತ್ತು. ಆಗ ಅವರು ಸುಮ್ಮನೆ ಇದ್ದ ಪರಿಣಾಮ ಕಾಮಗಾರಿ ಆರಂಭ ಮಾಡಿದ ಸಂದರ್ಭದಲ್ಲಿ ಮನೆಗಳನ್ನು ತೆರವುಗೊಳಿಸಲಾಯಿತು. ಇಲ್ಲಿ ಬಡವರಿಗೆ ಅನ್ಯಾಯವಾಗಿದೆ ಎಂದು ಕಳೆದ 31 ದಿನಗಳಿಂದ ನಿರಂತರವಾಗಿ ನಿರಾಶ್ರಿತರು ಧರಣಿ ಕುಳಿತುಕೊಂಡಿದ್ದಾರೆ. ಈ ಸಂದರ್ಭದಲ್ಲಿ ತೆರವುಗೊಳಿಸಿದ ಮನೆಗಳ ನಿವಾಸಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನಾವು ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿ ಮಾಡಲು ಮುಂದಾಗುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ತೆರವುಗೊಳಿಸಿದ ಮನೆಯವರಿಗೆ ಸೂಕ್ತ ಜಾಗೆಯನ್ನು ಪಂಚಾಯಿತಿಯವರು ನೀಡುತ್ತಾರೆ. ಸಂಪೂರ್ಣ ಮನೆ ತೆರವುಗೊಂಡವರಿಗೆ ಗುತ್ತಿಗೆದಾರರು ಅಗತ್ಯ ಮನೆ ಸಾಮಗ್ರಿಗಳನ್ನು ನೀಡುತ್ತಾರೆ. ಅವರು ಪಂಚಾಯಿತಿಯವರು ನೀಡುವ ಜಾಗೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಉಳಿದವರಿಗೂ ಅನುಕೂಲ ಮಾಡಿಕೊಡಲಾಗುವದು. ನಿಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತೇವೆ. ನಾಳೆಯಿಂದಲೇ ನಾವು ರಸ್ತೆ ಕಾಮಗಾರಿ ಆರಂಭಿಸುತ್ತೇವೆ. ರಸ್ತೆಯನ್ನು 55 ಪೂಟ್ ಇಲ್ಲವೇ 48 ಪೂಟ್ ಮಾಡದೇ ಯಾರಿಗೂ ತೊಂದರೆಯಾಗದಂತೆ ನಾವು ಸೂಕ್ತವಾದ ಅಳತೆಯಲ್ಲಿ ರಸ್ತೆ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸುತ್ತೇವೆ. ತಮ್ಮ ಧರಣಿಯನ್ನು ಹಿಂಪಡೆದುಕೊಂಡು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ತಾಪಂ ಇಓ ಪ್ರಕಾಶ ದೇಸಾಯಿ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದ ಸರ್ಕಾರಿ ಜಾಗೆಯಲ್ಲಿ ನಿರಾಶ್ರಿತರಿಗೆ ಅಗತ್ಯವಿರುವ ಜಾಗೆಯನ್ನು ಕೊಡಲಾಗುವದು. ನಾವು ಕಾನೂನು ರೀತಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಧರಣಿ ನೇತೃತ್ವ ವಹಿಸಿದ್ದ ಮುಖಂಡ ಅಶೋಕಗೌಡ ಪಾಟೀಲ ಮಾತನಾಡಿ, ಮೂರು ತಿಂಗಳ ಹಿಂದೆ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ನಮಗೆ ಈ ರಸ್ತೆ ಕುರಿತು ಸೂಕ್ತ ಮಾಹಿತಿ ನಮಗೆ ಇರಲಿಲ್ಲ. ನಾವು ಎಂದಿಗೂ ರಸ್ತೆಯಾಗಬಾರದು ಎಂಬ ಬೇಡಿಕೆ ಇಟ್ಟಿಲ್ಲ. ಆದರೆ ರಸ್ತೆ ಅಗಲೀಕರಣ ನೆಪದಲ್ಲಿ ಬಡವರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶ ಮಾತ್ರ ನಮ್ಮದು. ಇದೀಗ ಅಧಿಕಾರಿಗಳು ಬಡಜನರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬಡವರಿಗೆ ಮೋಸವಾಗಬಾರದು. ಕಳೆದ 31 ದಿನಗಳಿಂದ ಇಲ್ಲಿನ ನಿರಾಶ್ರಿತರು ಮಳೆ-ಚಳಿಯೆನ್ನದೇ ನಿರಂತರವಾಗಿ ಧರಣಿಯಲ್ಲಿ ಭಾಗವಹಿಸಿದ್ದಾರೆ. ಮಹಿಳೆಯರು ತುಂಬಾ ತೊಂದರೆ ಅನುಭವಿಸಿದ್ದಾರೆ. ಅಧಿಕಾರಿಗಳು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು ಸ್ವಾಗತಾರ್ಹ. ಶಾಸಕ ರಾಜುಗೌಡ ಪಾಟೀಲ ಅವರು ತಮ್ಮ ಅನುದಾನದಲ್ಲಿ ಈ ರಸ್ತೆಯಲ್ಲಿದ್ದ ವಿವಿಧ ವೃತ್ತ, ಮಸೀದಿ ದ್ವಾರ ಬಾಗಿಲು ನಿರ್ಮಾಣ ಮಾಡುವ ಭರವಸೆ ನಮಗಿದೆ. ನಿರಾಶ್ರಿತರೊಂದಿಗೆ ನಾನು ಸದಾ ಇರುತ್ತೇನೆ. ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಕುದರಿಸಾಲವಾಡಗಿ ರಸ್ತೆ ಅಗಲೀಕರಣ ವೇಳೆಯಲ್ಲಿ ಮನೆ ತೆರವಿನಿಂದ ನಿರಾಶ್ರಿತರ ಜನರಿಗೆ ಅಧಿಕಾರಿಗಳು ಜಾಗೆ ನೀಡುವ ಜೊತೆಗೆ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಅವರು ನೀಡಿದ ಭರವಸೆ ಈಡೇರಿಸುವ ವಿಶ್ವಾಸವಿದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಸೂಕ್ತ ಜಾಗೆ, ಮನೆ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಅಧಿಕಾರಿಗಳು ಒದಗಿಸಿಕೊಡುತ್ತಾರೆ. ಎಲ್ಲ ನಿರಾಶ್ರಿತರಿಗೆ ಅಧಿಕಾರಿಗಳು ಅನುಕೂಲ ಮಾಡಿಕೊಡುತ್ತಾರೆ ಎಂಬ ಭರವಸೆ ನೀಡಿದ್ದಾರೆ ಎಂದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ನಿರಾಶ್ರಿತರಿಗೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅಧಿಕಾರಿಗಳು ನೀಡಿದ ಭರವಸೆಯಂತೆ ನಡೆದುಕೊಳ್ಳದೇ ಹೋದರೆ ನಿರಾಶ್ರಿತರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಎಸ್.ಜಿ.ದೊಡಮನಿ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿದರು.
ಸ್ಥಳದಲ್ಲಿ ಡಾ. ಹಸನ್ ಢವಳಗಿ. ಬಾಬು ನದಾಫ, ಅದಾಂಸಾಬ ಢವಳಗಿ, ಕಾಮೇಶ ಭಜಂತ್ರಿ, ಗುರುರಾಜ ಗುಡಿಮನಿ, ಯಮನೂರಿ ಚಲವಾದಿ, ನಜೀರಪಟೇಲ ಗುಡ್ನಾಳ, ಅರವಿಂದ ಸಜ್ಜನ, ಶಾಂತಗೌಡ ಪಾಟೀಲ, ರಮಜಾನ ಮುಜಾವರ, ಬಾಳಾಸಾಹೇಬಗೌಡ ಪಾಟೀಲ, ಪಿ.ಜಿ.ಗೋಠೆದ, ಜಹಾಂಗೀರಸಾಬ ಬಾವೂರ,ಬಸವರಾಜ ದೇಸಾಯಿ, ಶ್ರೀಕಾಂತ ರೆಡ್ಡಿ, ದಾವಲಸಾಬ ಅತ್ತಾರ, ಶರಣಪ್ಪ ನಾಯ್ಕೋಡಿ, ಹನಮಂತ ಲಗಳಿ, ಅಲ್ತಾಫ ಅತ್ತಾರ, ಶ್ರೀಕಾಂತ ಹಚಡದ, ಪರಪ್ಪ ಕಳ್ಳಿಮನಿ, ಶಕೀನ ಎಲಗಾರ, ಪಾವಡೆವ್ವ ಇಂಗಳಗಿ, ಹಜರತಿಬಿ ಅತ್ತಾರ, ಸೈದಾಬಿ ಅತ್ತಾರ, ಶಿವವ್ವ ಇಂಗಳಗಿ, ಕಮಲವ್ವ ಕಳ್ಳಿಮನಿ, ಹಾಜರಾ ನಾಯ್ಕೋಡಿ, ಶೀಲಾ ಕಳ್ಳಿಮನಿ, ಬಸಮ್ಮ ತಮದಡ್ಡಿ, ದೌಲಬಿ ಎಲಗಾರ ಸೇರಿದಂತೆ ಇತರರು ಇದ್ದರು.

