ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ನಡೆಯುತ್ತಿರುವ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಪಠ್ಯ ಹಾಗೂ ಪಠ್ಯೇತರ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು ಇರುವದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದು ಶಿಕ್ಷಣ ಸಂಯೋಜಕಿ ಅನುಜಾ ಗುಬ್ಬಾ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ, ಕ್ಷೇತ್ರಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ಸಮೂಹ
ಸಂಪನ್ಮೂಲ ಕೇಂದ್ರ-2 ವ್ಯಾಪ್ತಿಯ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶವಿದೆ. ವಿದ್ಯಾರ್ಥಿಗಳು ತಮಗೆ ಆಸಕ್ತಿ ವಿಷಯದಲ್ಲಿ ಭಾಗವಹಿಸಿ ಸ್ಪರ್ಧಾಮನೋಭಾವದಿಂದ ಭಾಗವಹಿಸುವುದು ಮುಖ್ಯವಾಗಿದೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ ಬರುವ ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವ, ಧೈರ್ಯ ಬರುತ್ತದೆ. ಕಳೆದ 22 ವರ್ಷಗಳಿಂದ ನಿರಂತರವಾಗಿ ಪ್ರತಿಭಾ ಕಾರಂಜಿಯನ್ನು ಶಿಕ್ಷಣ ಇಲಾಖೆಯು ನಡೆಸಿಕೊಂಡು ಬರುತ್ತಿದೆ. ಇದು ಮಕ್ಕಳಿಗಾಗಿ ರೂಪಿಸಿದ ಯೋಜನೆಯಾಗಿದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಚನ್ನಗೊಂಡ ಮಾತನಾಡಿ, ಬಸವನಬಾಗೇವಾಡಿ ಕ್ಲಸ್ಟರ್-2 ರಲ್ಲಿ ಎಂಟು ಪ್ರೌಢಶಾಲೆ ಸೇರಿದಂತೆ ಒಟ್ಟು 23 ಶಾಲೆಗಳು ಬರುತ್ತವೆ. ಈ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸ್ಪರ್ಧೆ ನಿರ್ಣಾಯಕರು ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ತಮ್ಮ ನಿರ್ಣಯ ನೀಡುವ ಮೂಲಕ ಸೂಕ್ತ ಪ್ರತಿಭೆಗೆ ಆಯ್ಕೆ ಮಾಡಬೇಕು. ವಿದ್ಯಾರ್ಥಿಗಳು ತಾವು ಭಾಗವಹಿಸುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ತಮ್ಮ ಪ್ರತಿಭೆ ಅನಾವರಣಗೊಳಿಸಲು ಈ ವೇದಿಕೆಯನ್ನು ಬಳಕೆ ಮಾಡಿಕೊಳ್ಳಬೇಕು. ಒಂದರಿಂದ ನಾಲ್ಕನೇ ತರಗತಿ ವಿಭಾಗದಲ್ಲಿ 11 ಸ್ಪರ್ಧೆ, ಐದರಿಂದ ಏಳನೇ ತರಗತಿ ವಿಭಾಗದಲ್ಲಿ 13 ಸ್ಪರ್ಧೆ, ಎಂಟರಿಂದ ಹತ್ತನೇ ತರಗತಿ ವಿಭಾಗದಲ್ಲಿ 17 ಸ್ಪರ್ಧೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮವನ್ನು ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಬು ಕೆಂಬಾವಿ ಉದ್ಘಾಟಿಸಿದರು. ವೇದಿಕೆಯಲ್ಲಿ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಕೆ.ಆರ್.ಲಮಾಣಿ, ಆದರ್ಶ ಶಿಕ್ಷಕರ ವೇದಿಕೆಯ ತಾಲೂಕಾಧ್ಯಕ್ಷ ಎಂ.ಎನ್.ಯಾಳವಾರ, ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಹೂಗಾರ, ವಿವೇಕಾನಂದ ಪ್ರಾಥಮಿಕ ಶಾಲೆಯ ಮುಖ್ಯಗುರು ಕೃಷ್ಣಾ ಲಮಾಣಿ, ಬಸವೇಶ್ವರ ದೇವಾಲಯ ಶಾಲೆಯ ಮುಖ್ಯಗುರು ಯಮನಪ್ಪ ಮಿಣಜಗಿ ಇದ್ದರು.
ವೇದಾವತಿ ಜಾಧವ ಪ್ರಾರ್ಥಿಸಿದಳು. ಜಿ.ಎಂ.ಗಂಜಾಳ ನಿರೂಪಿಸಿ, ವಂದಿಸಿದರು. ನಂತರ ವಿವಿಧ ಸ್ಪರ್ಧೆಗಳು ಜರುಗಿದವು.

