ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಎಂದಿಗೂ ಯಶಸ್ಸು ರಾತ್ರೋರಾತ್ರಿ ಬರುವುದಿಲ್ಲ. ಏಕೆಂದರೆ ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಆದ್ದರಿಂದ ಯಶಸ್ಸಿಗೆ ಒಂದು ದೊಡ್ಡ ಹೋರಾಟ ಮಾಡಲೇಬೇಕಾಗುತ್ತದೆ. ಯಾವುದೇ ಯಶಸ್ವಿ ವ್ಯಕ್ತಿ ತನ್ನನ್ನು ತಾನು ಅಗಾಧವಾಗಿ ಬದಲಿಸಿಕೊಳ್ಳುತ್ತಾನೆ. ಬದಲಾಗುವುದು ಅಷ್ಟೊಂದು ಸರಳ ಪ್ರಕ್ರಿಯೆ ಅಲ್ಲ. ಅದು ಕಂಬಳಿ ಹುಳುವೊಂದು ಚಿಟ್ಟೆಯಾಗುವ ಪ್ರಕ್ರಿಯೆಯಂತೆ. ಇಷ್ಟವಾದದ್ದನ್ನೆಲ್ಲ ಬಿಡುವುದು ಕಷ್ಟವಾದುದನ್ನು ಮಾಡುವುದು ಯಶಸ್ವಿಯಾಗಲು ಅಗತ್ಯವಿದೆ. ಯಶಸ್ಸಿಗೆ ಬೇಕಾಗಿರುವುದು ಇಷ್ಟವಾದುದನ್ನು ಮಾಡುವುದಲ್ಲ ಗುರಿಗೆ ಸಂಬಂಧಿಸಿದ ಅಗತ್ಯವಾದುದನ್ನು ಮಾಡುವುದು. ಪ್ರಿಯವಾದವುಗಳು ಹಲವೊಮ್ಮೆ ಜೀವನಕ್ಕೆ ಜರೂರ ಮಾಡಲೇಬೇಕಾದ ಸಂಗತಿಗಳು ಆಗಿರುವುದಿಲ್ಲ. ಕೆಲವೊಮ್ಮೆ ಅವುಗಳು ಅಷ್ಟು ಉಪಯುಕ್ತವೂ ಆಗಿರುವುದಿಲ್ಲ.
ಕೊರತೆ
ನೀವು ದೊಡ್ಡದನ್ನೇನು ಸಾಧಿಸಲು ಆಗುತ್ತಿಲ್ಲ ಎಂದರೆ ನಿಮ್ಮಲ್ಲಿ ಯೋಗ್ಯತೆ ಇಲ್ಲ ಎಂದಲ್ಲ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಯೋಗ್ಯತೆ ಇದ್ದೆ ಇದೆ. ವೈಫಲ್ಯಕ್ಕೆ ಕಾರಣ ಯೋಗ್ಯತೆಯ ಕೊರತೆಯಲ್ಲ ಬದಲಾಗಿ ಕಲ್ಪನಾಶಕ್ತಿಯ ಕೊರತೆ. ಸಾವಿರ ಸಾವಿರ ಕೋಟಿ ಗಳಿಸುವ ಸಿನಿಮಾಗಳು ಮೊದಲು ತಯಾರಾಗುವುದು ಕಲ್ಪನಾಶಕ್ತಿಯಲ್ಲಿಯೇ ಅಲ್ಲವೇ? ಸಾಹಸ ಕಥೆಗಳು ಸಹ ಕಲ್ಪನಾಶಕ್ತಿಯ ಭಾಗಗಳಲ್ಲದೇ ಮತ್ತೇನು? ಅತ್ಯದ್ಭುತವಾದ ಕಲ್ಪನೆಯು ವಾಸ್ತವಕ್ಕೆ ಇಳಿದಾಗ ಅಪೂರ್ವ ಯಶಸ್ವಿ ವ್ಯಕ್ತಿಗಳಾಗಿ ದಂತ ಕಥೆಗಳಾಗಿ ಹೊರಹೊಮ್ಮುತ್ತಾರೆ. ಕಠಿಣ ಪರಿಶ್ರಮವನ್ನು ಮಾಡುವ ಕೂಲಿ ಕಾರ್ಮಿಕರು ಏಕೆ ಪ್ರಗತಿಯನ್ನು ಸಾಧಿಸುವುದಿಲ್ಲ ಎಂದರೆ ಅವರು ದೊಡ್ಡದಾಗಿ ಯೋಚಿಸುವುದಿಲ್ಲ.
ದೊಡ್ಡದು

ಜ್ಞಾನಕ್ಕಿಂತಲೂ ಕಲ್ಪನಾಶಕ್ತಿ ದೊಡ್ಡದು. ಜ್ಞಾನಕ್ಕೆ ಸೀಮಿತ ಪರಿಧಿ ಇದೆ. ಕಲ್ಪನೆ ವಿಶ್ವವನ್ನೂ ಮೀರಿದ್ದು. ರಾತ್ರಿಯಲ್ಲಿ ಕಲ್ಪನಾಶಕ್ತಿ ಹೆಚ್ಚಾಗುತ್ತದೆ ಏಕೆಂದರೆ ರಾತ್ರಿಯಲ್ಲಿ ಮೆದುಳು ವಿಶ್ರಾಂತಿ ಪಡೆಯುತ್ತದೆ. ಹಗಲಿನ ಒತ್ತಡಗಳಿಂದ ಮುಕ್ತವಾಗಿ ಯೋಚಿಸುತ್ತದೆ. ಹೀಗಾಗಿ ಕಲ್ಪನಾಶಕ್ತಿ ಹೆಚ್ಚು ಕೆಲಸ ಮಾಡುತ್ತದೆ. ಹಗಲಿನಲ್ಲಿ ಮೆದುಳು ಪ್ರಾಯೋಗಿಕ ಕೆಲಸಗಳಲ್ಲಿ ನಿರತವಾಗಿರುತ್ತದೆ. ಆದ್ದರಿಂದ ಸೃಜನಶೀಲತೆ ಕಡಿಮೆಯಾಗುತ್ತದೆ.
ಕಲ್ಪನಾಶಕ್ತಿ ಎಂದರೆ..?
ಕಲ್ಪನಾಶಕ್ತಿ ಎಂದರೆ ವಿಚಾರ ಮಾಡುವ ಶಕ್ತಿ. ವಿಚಾರ ಯಾವುದೇ ಇರಬಹುದು. ನಿಮ್ಮ ಭವಿಷ್ಯದ ಕುರಿತಾಗಿ, ಇಲ್ಲವೇ ಯಾವುದೇ ಸಮಸ್ಯೆಯ ಪರಿಹಾರದ ಬಗ್ಗೆಯೂ ಇರಬಹುದು. ಪ್ರತಿಯೊಬ್ಬರಲ್ಲೂ ಕಲ್ಪನಾಶಕ್ತಿ ಬೇರೆ ಬೇರೆ ತರಹದಲ್ಲಿರುತ್ತದೆ. ನಿಮ್ಮ ಜೀವನ ಅಂದುಕೊಂಡಂತೆ ಬದಲಾಗುತ್ತದೆ. ನಿಮ್ಮ ಆಲೋಚನೆಗಳಿಂದ ಕಲ್ಪನಾಶಕ್ತಿಯಿಂದ ಅಂದುಕೊಂಡ ಬದುಕು ನಿರ್ಮಾಣ ಆಗುತ್ತದೆ ಅಂದರೆ ನಂಬಲು ಆಗುವುದಿಲ್ಲ ಅಲ್ಲವೇ? ನನ್ನಿಂದ ಏನಾಗುತ್ತೆ ಯಾರೂ ಅಂದುಕೊಂಡಿರುವುದನ್ನು ನಾನು ಮಾಡುತ್ತೇನೆ ಎಂದು ಬಲವಾಗಿ ನಂಬಿರುವ ವ್ಯಕ್ತಿಯ ಬಳಿ ಇರುವ ಕಾರಣಗಳೆಂದರೆ ಒಂದು ಪರಿಸ್ಥಿತಿ ಏನೇ ಇದ್ದರೂ ಅದನ್ನು ಲೆಕ್ಕಿಸದೇ ಇರುವುದು. ಹೊರಗಿನ ಪ್ರಪಂಚಕ್ಕೆ ಕಿವಿಗೊಡದೆ ತನ್ನ ಕಲ್ಪನೆಯನ್ನು ಸಾಕಾರಗೊಳಿಸಲು ಬೆನ್ನು ಹತ್ತುವುದು.
ಕಲ್ಪನಾ ಶಕ್ತಿಯನ್ನು ಹೆಚ್ಚಿಸಲು ಕೆಲವೊಂದು ತಂತ್ರಗಳು ಇಲ್ಲಿವೆ.
ಕಲಿಕೆಯಿಂದ ಕಲ್ಪನೆಯು ಹೊರಹೊಮ್ಮುತ್ತದೆ. ಹೊಸ ವಿಷಯಗಳನ್ನು ಕಲಿಯುವ ಇಚ್ಛೆಯು ಬದಲಾವಣೆಯನ್ನು ಸ್ವೀಕರಿಸುವ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಅಳೆಯುತ್ತದೆ. ಓದು ಕಲ್ಪನಾತ್ಮಕ, ತಾರ್ಕಿಕತೆ ಮತ್ತು ಸೃಜನಶೀಲ ಚಿಂತನೆಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಆದ್ದರಿಂದ ಓದನ್ನು ರೂಢಿಸಿಕೊಳ್ಳಬೇಕು.
ಕಥೆ ಹೇಳಿ
ಜನರು ಕಥೆಗಳನ್ನು ಕೇಳಲು ಇಷ್ಟಪಡುತ್ತಾರೆ. ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಹೇಳಲು ಒಂದು ಕಥೆ ಇರುತ್ತದೆ. ನೀವು ಹೇಳುವ ಕಥೆ ವಿವರಣಾತ್ಮಕವಾಗಿರಲಿ. ಅದು ನಿಮಗೆ ಮತ್ತು ನಿಮ್ಮ ಕೇಳುಗರಿಗೆ ದೃಶ್ಯಿಕರಿಸಿಕೊಳ್ಳಲು ಅನುವು ಮಾಡಿಕೊಡಲಿ. ದೃಶ್ಯೀಕರಣವು ಸ್ಪರ್ಶ, ವಾಸನೆ, ರುಚಿ ಮತ್ತು ಇತರ ಇಂದ್ರೀಯಗಳನ್ನು ಸಹ ಒಳಗೊಂಡಿರುತ್ತದೆ. ದೃಶ್ಯೀಕರಣವು ಕಲ್ಪಿಸಿಕೊಳ್ಳುವಲ್ಲಿ ಹೆಚ್ಚು ಪ್ರಮುಖ ಭಾಗವಾಗಿದೆ ಎಂಬುದನ್ನು ಮರೆಯುವಂತಿಲ್ಲ.
ಹಿಂಜರಿಯದಿರಿ
ಒಂದೇ ರೀತಿಯ ಕೆಲಸಗಳನ್ನು ಮಾಡುತ್ತಿದ್ದರೆ ಅದೇ ರೀತಿಯ ವಿಷಯಗಳು ಸಿಗುತ್ತಲೇ ಇರುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ ಪದೇ ಪದೇ ಅದೇ ಅದೇ ಕೆಲಸಗಳನ್ನು ಮಾಡುತ್ತಿದ್ದರೆ ಅದೇ ರೀತಿಯ ಫಲಿತಾಂಶ ಒರೆಯುತ್ತಿರುತ್ತದೆ. ಆದ್ದರಿಂದ ಹೊಸತನ್ನು ಪ್ರಯತ್ನಿಸಲು ಮುಂದಾಗಬೇಕು. ಹೊಸ ವಿಷಯಗಳನ್ನು ಅನುಭವಿಸಲು ಅಥವಾ ಹೊಸ ಸಾಹಸಗಳನ್ನು ಪ್ರಯತ್ನಗಳನ್ನು ಕೈಗೊಳ್ಳಲು ನಿಮಗೆ ಸವಾಲು ಹಾಕಿಕೊಳ್ಳಲು ಹಿಂಜರಿಯದಿರಿ.
ಕುತೂಹಲದಿಂದಿರಿ
ಹೊಸ ವಿಷಯಗಳ ಕಲಿಕೆ ಕಲ್ಪನೆಯನ್ನು ಅಧಿಕವಾಗಿಸುತ್ತದೆ. ಮಕ್ಕಳು ತಮ್ಮ ಕುತೂಹಲಕಾರಿ ಸ್ವಭಾವದಿಂದಾಗಿ ಹೆಚ್ಚು ಕಲ್ಪನಾಶೀಲರಾಗಿರುತ್ತಾರೆ. ಇದರಿಂದ ಉತ್ತರಗಳನ್ನು ಹುಡುಕುವ ಹೊಸ ವಿಷಯಗಳನ್ನು ಕಲಿಯುವ ನಮ್ಮ ಅಂತರ್ಗತ ಸ್ವಭಾವವು ವಯಸ್ಸಿನೊಂದಿಗೆ ಕಣ್ಮರೆಯಾಗುವುದಿಲ್ಲ. ಆದ್ದರಿಂದ ಸದಾ ಕುತೂಹಲದಿಂದ ಇರಲು ಕಲಿತುಕೊಳ್ಳಬೇಕು.
ಬೆಳೆಸಿಕೊಳ್ಳಿ
ಪ್ರತಿಯೊಬ್ಬರಲ್ಲೂ ಒಂದೊಂದು ಕೌಶಲ್ಯ ಇದ್ದೇ ಇರುತ್ತದೆ. ನೀವು ಉತ್ತಮ ಸಾಧನೆ ಮಾಡುವ ಕ್ಷೇತ್ರಗಳಲ್ಲಿ ಅಥವಾ ನಿಮಗೆ ಉತ್ತಮವಾಗಿ ಹೇಗೆ ಮಾಡಬೇಕೆಂದು ತಿಳಿದಿರುವ ವಿಷಯಗಳಲ್ಲಿ ನಿಮ್ಮ ಕಲ್ಪನೆಯನ್ನು ಹರಿ ಬಿಡುವತ್ತ ಗಮನಹರಿಸಿ.
ವಿಭಿನ್ನವಾಗಿ ನೋಡಿ
ಆಯಾಸ ಮತ್ತು ಬೇಸರವಾದಾಗ ಸೃಜನಶೀಲತೆ ಕಡಿಮೆಯಾಗುತ್ತದೆ. ವಿಷಯಗಳನ್ನು ಹೊಸ ದೃಷ್ಟಿಕೋನದಿಂದ ನೋಡಿ. ಇದು ನಿಮಗೆ ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಿದ್ದಕ್ಕೆ ಹೊಸ ಆಲೋಚನೆಗಳನ್ನು ಪ್ರಚೋದಿಸುವ ವಿಷಯಗಳಿಗೆ ಹೊಸ ವಿಧಾನವನ್ನು ನೀಡುತ್ತದೆ. ವಿಭಿನ್ನವಾಗಿ ನೋಡಿ ಕಲ್ಪನಾಶಕ್ತಿ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತದೆ.
ಕೊನೆ ಹನಿ
ಯಾವುದನ್ನು ನಾವು ಕಲ್ಪಿಸಬಲ್ಲೆವೋ ಅದನ್ನು ನಿರ್ಮಿಸಬಲ್ಲೆವು. ದೊಡ್ಡದಾಗಿ ಕಲ್ಪನಾಶಕ್ತಿಯನ್ನು ಬೆಳೆಸಿಕೊಂಡರೆ ಯಶಸ್ಸು ಹಿಂಬಾಲಿಸದು. ಅದಕ್ಕೆ ತಕ್ಕ ಪರಿಶ್ರಮವೂ ಬೇಕಾಗುತ್ತದೆ. ಮನಸ್ಸಿಗೆ ತಿಳಿದಾಗ ಮನಸ್ಸಿಗೆ ಬಂದಾಗ ಪರಿಶ್ರಮ ವಹಿಸುವುದಲ್ಲ. ಮನಸ್ಸಿಗೆ ಬೇಡವಾದಾಗಲೂ ಕಲ್ಪನೆಯಲ್ಲಿ ಕಂಡಿದ್ದನ್ನು ವಾಸ್ತವಕ್ಕೆ ಇಳಿಸುವುದರ ಬೆನ್ನು ಹತ್ತಬೇಕು. ನನಗೆಲ್ಲ ಗೊತ್ತು ಎಂಬುದು ಅವನತಿಯ ಸಂಕೇತ. ನಿನ್ನೆಗಿಂತ ಇಂದು ಉತ್ತಮ ಇಂದಿಗಿಂತ ನಾಳೆ ಉತ್ತಮವಾದ ಪರಿಶ್ರಮದ ಹಾದಿಯಲ್ಲಿ ಸಾಗುತ್ತಿದ್ದರೆ ‘ಸಕ್ಸಸ್ ವಿಲ್ ಬಿ ದ ಬಾಯ್‌ಪ್ರೊಡಕ್ಟ್’ ವಿನಸ್ಟನ್ ಚಿರ್ಚಿಲ್ ಹೇಳುತ್ತಾನೆ: ‘ಯೋಚನೆಗಳ ಮೇಲಿನ ನಿಯಂತ್ರಣವೇ ನಾವು ಶ್ರೇಷ್ಡತೆಗೆ ತೆರಬೇಕಾದ ಬೆಲೆ.’ ಅಷ್ಟೇ ಅಲ್ಲ ಕಲ್ಪಿಸಬಲ್ಲದ್ದನ್ನು ನಿರ್ಮಿಸಬಲ್ಲೆವು ಆದ್ದರಿಂದ ಕಲ್ಪನಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ‘ಮನಸ್ಸು ಒಳ್ಳೆಯ ಸೇವಕ ಬಲುಕೆಟ್ಟ ಯಜಮಾನ.’ ಮನಸ್ಸನ್ನು ಸೇವಕನನ್ನಾಗಿಸಿ ಕಲ್ಪನಾಶಕ್ತಿ ಬೆಳೆಸಿಕೊಂಡರೆ ಯಶಸ್ವಿ ಜೀವನ ತೆರೆದ ತೋಳುಗಳಿಂದ ಸ್ವಾಗತಿಸುತ್ತದೆ.


