ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸೈನಿಕ ಶಾಲೆಯಲ್ಲಿ 10ನೇ ಅಕ್ಟೋಬರ್ 2025, ಸೋಮವಾರ ರಂದು ಸೈಬರ್ ಜಾಗೃತಿ ಕಾರ್ಯಕ್ರಮ ನೆರವೇರಿತು.
ಇಂದಿನ ದಿನಮಾನದಲ್ಲಿ ಸೈಬರ್ ಅಪರಾಧಗಳ ಹಾವಳಿ ಹೆಚ್ಚಾಗಿದ್ದು ಸರ್ವರೂ ಅಂತರ್ಜಾಲದ ಬಳಕೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಬೇಕು ಎಂದು ಸಿ.ಇ.ಎನ್. ಸೈಬರ್ ಕ್ರೈಂ ಪೊಲೀಸ್ ಠಾಣೆ ವಿಜಯಪುರದ ಪೊಲೀಸ್ ಇನ್ಸ್ ಪೆಕ್ಟರ್ ರವಿ ಯಡವನ್ನವರು ಹೇಳಿದರು. ಬಿಜಾಪುರದ ಸೈನಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೈಬರ್ ಅಪರಾಧಗಳು ಯಾವುದೇ ಗಡಿ ಹೊಂದಿಲ್ಲ, ಹಲವಾರು ಅನಕ್ಷರಸ್ಥರು ಹಾಗೂ ಅಕ್ಷರಸ್ಥರು ಸಹ ಈ ಒಂದು ಸೈಬರ್ ಅಪರಾಧ ಹಾಗೂ ವಂಚನೆಗೆ ಬಲಿಯಾಗಿರುವ ಅನೇಕ ಪ್ರಕರಣಗಳನ್ನು ಕಾಣಬಹುದಾಗಿದೆ. ಸೈಬರ್ ಅಪರಾಧಗಳು ಸವಾಲಾಗಿ ಪರಿಣಮಿಸಿವೆ. ‘ಇಂಟರ್ನೆಟ್’ ಹೊಂದಿರುವ ಸ್ಮಾರ್ಟ್ಫೋನ್ ಬಳಕೆ ಹೆಚ್ಚಾಗಿರುವ ಪರಿಣಾಮ ಅಪರಾಧ ಹಾಗೂ ವಂಚನೆ ಎಸಗಲು ಅಪರಾಧಿಗಳಿಗೆ ಆನ್ಲೈನ್ ನಲ್ಲಿ ಅನೇಕ ಸಾಧನಗಳು ಲಭ್ಯವಿವೆ. ವಂಚಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ ಸೌಲಭ್ಯ ನೀಡುವ ಆಸೆ ಹುಟ್ಟಿಸಿ ವಂಚಿಸುವ ಪ್ರಕರಣಗಳು, ಹೂಡಿಕೆ ನೆಪದಲ್ಲಿ ಹಣ ಪಡೆದು ವಂಚಿಸುವ ಪ್ರಕರಣಗಳು, ಡಿಜಿಟಲ್ ಅರೆಸ್ಟ್ ಸಂಬಂಧಿತ ವಂಚನೆಗಳು, ಸಿಮ್ ಸ್ವಾಪಿಂಗ್ ಪ್ರಕರಣಗಳು, ಹ್ಯಾಕಿಂಗ್ ಪ್ರಕರಣಗಳು ಸೈಬರ್ ಅಪರಾಧಕ್ಕೆ ಉದಾಹರಣೆಯಾಗಿವೆ. ಸೈಬರ್ ಅಪರಾಧಗಳನ್ನು ಅಲ್ಲಗಳೆಯದೇ ಅವುಗಳ ಬಗ್ಗೆ ನಾವು ಜಾಗೃತರಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಯಾವುದೇ ಸೈಬರ್ ಅಪರಾಧಗಳು ಜರುಗಿದಲ್ಲಿ ತ್ವರಿತವಾಗಿ ಪ್ರಕರಣವನ್ನು ದಾಖಲಿಸಬೇಕು. ಸೈಬರ್ ಅಪರಾಧಕ್ಕೆ ಅಥವಾ ವಂಚನೆಗೆ ಒಳಗಾದರೆ ಧೈರ್ಯವಾಗಿ 1930 ಉಚಿತ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ವಿದ್ಯಾರ್ಥಿಗಳು ಸೈಬರ್ ವಂಚನೆ ತಡೆಗಟ್ಟುವಲ್ಲಿ ನೆರೆಹೊರೆಯವರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಜನರನ್ನು ಜಾಗೃತರಾಗಿರಲು ಸಹಕಾರಿಯಾಗಿಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ರವರು, ಸೈಬರ್ ಕ್ರೈಂ ಪೊಲೀಸ್ ಠಾಣೆ ವಿಜಯಪುರದ ಅಧಿಕಾರಿಗಳು, ಹಿರಿಯ ಮಾಸ್ಟರ್ ಶ್ರೀ. ರೇವಣಕುಮಾರ ದೇಸಾಯಿ, ಶಾಲೆಯ ಶೈಕ್ಷಣಿಕ ಮತ್ತುಆಡಳಿತ ಸಿಬ್ಬಂದಿವರ್ಗದವರು, ಎನ್.ಸಿ.ಸಿ. ಸಿಬ್ಬಂದಿವರ್ಗ ಮತ್ತು ಕೆಡೆಟ್‌ಗಳು ಉಪಸ್ಥಿತರಿದ್ದರು.

