ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೀಸಲಾತಿ ಗೊಂದಲ ಶೀಘ್ರ ನಿವಾರಿಸಿ ರಾಜ್ಯದ ನಾನಾ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಜತೆಗೆ ವಯೋಮಿತಿ ಸಡಿಲಗೊಳಿಸಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಗ್ರಾಮೀಣ ಭಾಗದ ಬಡ ನಿರುದ್ಯೋಗಿಗಳು ಸರ್ಕಾರಿ ನೌಕರಿ ಪಡೆದುಕೊಳ್ಳಬೇಕೆಂಬ ಮಹದಾಸೆಯೊಂದಿಗೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಸ್ವಂತ ಊರು, ವಯಸ್ಸಾದ ತಂದೆ-ತಾಯಿ ಹಾಗೂ ಕುಟುಂಬ ವರ್ಗದವರನ್ನು ಬಿಟ್ಟು ದೂರದ ಬೆಂಗಳೂರು, ಧಾರವಾಡ ಹಾಗೂ ವಿಜಯಪುರದಂತಹ ನಗರಗಳಲ್ಲಿ ಸಾಲ ಶೂಲ ಮಾಡಿದ್ದಾರೆ. 5-6 ವರ್ಷಗಳಿಂದ ಬಾಡಿಗೆ ಮನೆ, ಪಿಜಿಗಳಲ್ಲಿದ್ದು, ಕಷ್ಟ ಪಟ್ಟು ಹಗಲಿರುಳು ಓದುತ್ತಿದ್ದಾರೆ.
ಅಲ್ಲದೆ ಕಳೆದ ಎರಡು ವರ್ಷಗಳಿಂದ ಒಳ ಮೀಸಲಾತಿ ಜಾರಿ ವಿಳಂಬದಿಂದಾಗಿ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ತಡೆ ಹಿಡಿದಿರುವುದರಿಂದ ಪಿಜಿ ರೂಮುಗಳ ಬಾಡಿಗೆಯನ್ನು ಕಟ್ಟಲಿಕ್ಕಾಗದೇ ಊಟ ಮಾಡುವುದಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸ ನೇಮಕಾತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಯಾವುದೇ ನೇಮಕಾತಿಯಿಲ್ಲದೇ ಇರುವುದರಿಂದ ಲಕ್ಷಾಂತರ ಯುವಕರು ತಮ್ಮ ಬದುಕಿನ ಭರವಸೆ ಕಳೆದುಕೊಳ್ಳುತ್ತಿದ್ದಾರೆ ಎಂದು ನಿರಾಣಿ ಸಿಎಂಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ವಯೋಮಿತಿ ಮೀರಿ ಸರ್ಕಾರಿ ನೌಕರಿಯಿಂದ ವಂಚಿತರಾಗಿ ಮಾನಸಿಕವಾಗಿ ಕುಗ್ಗುವಂತಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಧಾರವಾಡದಲ್ಲಿ 5-6 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದ ಬಡ ಯುವ ಸ್ಪರ್ಧಾಕಾಂಕ್ಷಿಯೊಬ್ಬರು ಮಾನಸಿಕವಾಗಿ ನೊಂದು ಮೃತಪಟ್ಟಿದ್ದು ಅವರ ಪೋಷಕರಿಗೆ ದಿಕ್ಕೇ ತೋಚದಂತಾಗಿದೆ ಎಂದೂ ನಿರಾಣಿ ಪತ್ರದಲ್ಲಿ ತಿಳಿಸಿದ್ದಾರೆ.
ಶೇ.56 ರಷ್ಟು ಮೀಸಲಾತಿ ಹಾಗೂ ರೋಸ್ಟರ್ ಬಿಂದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹಾಗಾಗಿ ನೇಮಕಾತಿಗಳು ವಿಳಂಬವಾಗುತ್ತಿದ್ದು. ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ.
ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಲಕ್ಷಾಂತರ ನಿರುದ್ಯೋಗಿಗಳು ಕಳೆದ ಸೆಪ್ಟೆಂಬರ್ ನಲ್ಲಿ ರಾಜ್ಯದ ವಿದ್ಯಾಕಾಶಿ ಧಾರವಾಡದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ವಿಜಯಪುರದಲ್ಲಿಯೂ ಬೃಹತ್ ಹೋರಾಟ ನಡೆಸಿದರು.
ಹಾಗಾಗಿ ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ
ನಿರಾಣಿ ಒತ್ತಾಯಿಸಿದ್ದಾರೆ.

