ಸಿಂದಗಿಯಲ್ಲಿ ನಡೆದ ಹೋರಾಟದಲ್ಲಿ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ದಾನಪ್ಪಗೌಡ ಚನಗೊಂಡ ಅಸಮಾಧಾನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವರ್ಷ ಪೂರ್ತಿ ಕಷ್ಟಪಟ್ಟು ರೈತ ಬೆಳೆದ ಕಬ್ಬಿಗೂ ಕಾರ್ಖಾನೆಯವರು ಕೊಡುವ ಹಣಕ್ಕೂ ಯಾವುದೇ ರೀತಿಯ ತುಲನೆಯಾಗುತ್ತಿಲ್ಲ. ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸುವಾಗ ಪ್ರತಿ ಸಲ ಹೋರಾಟ ನಡೆಸುವುದು ಅನಿವಾರ್ಯವಾಗುತ್ತಿದೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ದಾನಪ್ಪಗೌಡ ಚನಗೊಂಡ ಅಸಮಾಧಾನ ವ್ಯಕ್ತಪಡಿಸಿದರು.
ಸಿಂದಗಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಬ್ಬಿನ ಬೆಂಬಲ ಬೆಲೆ ನಿಗದಿಗಾಗಿ ಜರುಗಿದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಚಿತ ಗ್ಯಾರಂಟಿಗಳನ್ನು ನೀಡುತ್ತಿರುವ ಸರಕಾರ ಕಷ್ಟಪಟ್ಟು ಬೆಳೆದ ರೈತನ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವಲ್ಲಿ ಮೀನಾಮೇಷ ಎಣಿಸಲು ಕಾರಣವಾದರು ಏನು? ಸಕ್ಕರೆ ಸಚಿವ ಶಿವಾನಂದ ಪಾಟೀಲರು ಕೃಷ್ಣ ಮತ್ತು ಭೀಮಾ ಬೆಲ್ಟ್ನ ಭೂಮಿಯಲ್ಲಿ ವ್ಯತ್ಯಾಸವಿದೆ ಹಾಗಾಗಿ ಇಳುವರಿಯಲ್ಲಿಯೂ ವ್ಯತ್ಯಾಸವಿದೆ ಎಂದು ಹೇಳುವ ಮೂಲಕ ರೈತರಲ್ಲಿಯೇ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ನೆರೆ ಜಿಲ್ಲೆಯವರ ಕಬ್ಬಿಗೆ ೩೩೦೦ ರೂ. ನಿಗದಿಗೊಳಿಸಿ ವಿಜಯಪುರ ಮತ್ತು ಕಲಬುರಗಿ ಭಾಗದ ಕಬ್ಬಿನ ಬೆಲೆಗೆ ಕಡಿಮೆ ಬೆಲೆ ನಿಗದಿಗೊಳಿಸಿದ್ದು ಮಲತಾಯಿ ಧೋರಣೆಯಾಗಿದೆ. ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಅನ್ಯ ಜಿಲ್ಲೆಗಳಿಗಿಂತ ಸಕ್ಕರೆಯ ಅಂಶ ಈ ಜಿಲ್ಲೆಗಳಲ್ಲಿನ ಕಬ್ಬಿಗಿದೆ. ಕಾರ್ಖಾನೆಯವರು ವರ್ಷ ತುಂಬಿದ ಕಬ್ಬಿನ ಸಕ್ಕರೆಯ ಅಂಶ ಪರಿಗಣಿಸದೇ ಕೊನೆಗೆ ಉಳಿದ ಐದಾರು ತಿಂಗಳು ತುಂಬಿದ ಕಬ್ಬಿನ ಸಕ್ಕರೆಯ ಅಂಶವನ್ನೇ ರಿಕವರಿ ಎಂದು ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದರಲ್ಲಿ ಸರಕಾರ ಹಾಗೂ ಕಾರ್ಖಾನೆ ಮಾಲೀಕರು ಶಾಮಿಲಾಗಿದ್ದಾರೆ ಎಂದು ಹರಿಹಾಯ್ದರು.
ರೈತರ ಪರ ಎಂದು ಪೋಜು ಕೊಡುವ ಇಂಡಿ ಮತ್ತು ವಿಜಯಪುರ ನಗರ ಶಾಸಕರು ಕಾರ್ಖಾನೆಯ ವಿಷಯ ಬಂದಾಗ ರೈತಪರ ನೀತಿಯೇ ಬದಲಾಗುತ್ತದೆ. ಆಗ ರೈತಪರ ಹೋಗಿ ಕಾರ್ಖಾನೆಯ ಪರ ವಾಲುವ ಈ ನಾಯಕರು ಹೇಗೆ ರೈತ ನಾಯಕರಾದಾರು ಎಂದು ಹರಿಹಾಯ್ದ ಅವರು, ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಹ ಮೌನ ವಹಿಸಿದ್ದನ್ನು ನೋಡಿದರೆ ಇವರಿಗೂ ಕಾರ್ಖಾನೆಗಳಿಂದ ರಾಯಧನ ಬರುತ್ತಿರಬಹುದೆಂಬ ಸಂಶಯ ಕಾಡುತ್ತಿದೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ಕಾರ್ಖಾನೆಯ ಮಾಲೀಕರು ಶೇ.೨೦ ಬಂಡವಾಳ ಹೂಡಿದರೆ ಇನ್ನುಳಿದ ಶೇ.೮೦ರಷ್ಟು ಬಂಡವಾಳ ರೈತರದ್ದೇ ಆಗಿರುತ್ತದೆ. ಸರಕಾರಿ ನೌಕರರು ೭ನೆಯ ವೇತನ ಆಯೋಗ ಇದ್ದರೂ ೮ನೆಯ ವೇತನ ಆಯೋಗಕ್ಕಾಗಿ ಹೋರಾಟ ಮಾಡುತ್ತಾರೆ. ರಾಜಕಾರಣಿಗಳು ಗುಪ್ತ ಸಭೆ ಮಾಡಿ ಯಾರದೇ ಅನುಮತಿ ಇಲ್ಲದೇ ಸಂಬಳವನ್ನು ಶೇ.೩೦-೪೦ರಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇವರೆಲ್ಲರನ್ನು ಸಲಹುವ ಅನ್ನದಾತನ ಬೆಳೆಗೆ ಸೂಕ್ತ ಬೆಂಬಲ ಬೆಲೆ ದೊರಕಿಸಿ ಕೊಡದ ಸರಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಬಸವರಾಜ ರಂಜುಣಗಿ, ಎಂ.ಎ.ಉಸ್ತಾದ, ಸಲಿಂ ಮುಲ್ಲಾ, ಭೀಮರಾಯ ಮನಗೂಳಿ, ರಾಜು ಕಲಕೇರಿ, ಪ್ರಭು ಖಜುರಗಿ, ಪಿರಪ್ಪ ಖಜುರಗಿ, ಭೀಮಾಶಂಕರ ಹಿರೇಮಠ, ರವಿಕುಮಾರ ಮೂಲಿಮವಿ, ಬಸವರಾಜ ಚಾವರ, ನಿಲ್ಲಮ್ಮ ಯಡ್ರಾಮಿ, ಲಕ್ಕಮ್ಮ ಬಿರಾದಾರ, ಬಸವರಾಜ ಚಂಡ್ರಪ್ಪಗೋಳ, ಶಿವಶರಣ ಹೆಗ್ಗನದೊಡ್ಡಿ, ಪ್ರಕಾಶ ದಾಸರ, ಸಾಗರ ಜೇರಟಗಿ, ಶಿವಾನಂದ ಕಗ್ಗೋಡ, ಬಾಪುಗೌಡ ಬಗಲಿ, ನರಸು ದೇವರಮನಿ ಸೇರಿದಂತೆ ನೂರಾರು ರೈತರು ಇದ್ದರು.

“ತಹಶೀಲ್ದಾರರು ತಾಲೂಕಿನ ಎಲ್ಲ ಕಾರ್ಖಾನೆ ಮಾಲೀಕರ ಸಭೆ ಕರೆದು ಸಾಯಂಕಾಲ ೬ಗಂಟೆಯ ಒಳಗಾಗಿ ದರ ನಿಗದಿ ಮಾಡಿ ಆದೇಶ ಹೊರಡಿಸದಿದ್ದರೆ ತಹಶೀಲ್ದಾರ್ ಕಛೇರಿ ಮತ್ತು ಕಾರ್ಖಾನೆಗಳಿಗೆ ಬೀಗ ಹಾಕಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ. ರೈತರ ತಾಳ್ಮೆಯನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ತಾಲೂಕಾಡಳಿತ ಕೈ ಹಾಕಬಾರದು.”
– ಚಂದ್ರಗೌಡ ಪಾಟೀಲ
ಜಿಲ್ಲಾಧ್ಯಕ್ಷರು, ರೈತಸಂಘ ವಿಜಯಪುರ

