ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯದಲ್ಲಿ ದುರಾಡಳಿತ, ಭ್ರಷ್ಟಾಚಾರ, ಅನ್ಯಾಯ, ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತನ್ನ ಪ್ರಾಮಾಣಿಕ ಹೋರಾಟದಿಂದ ನಾಡಿನ ಜನರ ಪ್ರೀತಿ ಮತ್ತು ವಿಶ್ವಾಸಗಳಿಸುತ್ತಿದ್ದು ಸದಸ್ಯತ್ವ ಪಡೆಯಲು ಜನ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಹೇಳಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಭಾಗದ ಕೆಆರ್‌ಎಸ್ ಪಕ್ಷದ ನೂತನ ಕ್ರಾಂತಿಗೆ ಈ ಭಾಗದ ಜನ ಸನ್ನದ್ಧರಾಗಬೇಕಿದೆ. ಸತ್ಯ, ನ್ಯಾಯ ನೀತಿ ಮತ್ತು ಧರ್ಮದ ಆಧಾರದ ಮೇಲೆ ಹೊಸ ಯುಗದ ರಾಜಕಾರಣವನ್ನು ಸ್ಥಾಪಿಸಲು ಭ್ರಷ್ಟರನ್ನು ಮೆಟ್ಟಿ ನಿಂತು ನೊಂದ ಪ್ರಜೆಯ ಧ್ವನಿಯಾಗಿ ಹೊರ ಹೊಮ್ಮುತ್ತಿರುವ ಏಕೈಕ ಪಕ್ಷವಾಗಿದೆ ಎಂದರು.
ಈ ವೇಳೆ ಕೆಆರ್‌ಎಸ್ ಪಕ್ಷದ ನಬಿ ಹುಣಶ್ಯಾಳ ಮಾತನಾಡಿ, ಅಕ್ರಮವಾಗಿ ಮಧ್ಯ ಮಾರಾಟ ದಂದೆ ಅವ್ಯಾಹತವಾಗಿ ನಡೆಸುತ್ತ ಯುವಕರನ್ನು ದುಮಾರ್ಗದೆಡೆ ಸೆಳೆದು ಗುಲಾಮರನ್ನಾಗಿ ಮಾಡುವ ಹುನ್ನಾರ ಇಂದಿನ ರಾಜಕೀಯ ಪಕ್ಷಗಳು ನಡೆಸುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುವ ನೇತಾ ಬೈಠಕ್ ಅಭಿಯಾನದ ಮೂಲಕ ಯುವಕರನ್ನು ಒಂದೂಗೂಡಿಸುವ ಕಾರ್ಯಕ್ಕೆ ನಮ್ಮ ಪಕ್ಷ ಮುಂದಾಗುತ್ತಿದೆ. ಇದರಿಂದ ಭ್ರಷ್ಠಮುಕ್ತ ಸರಕಾರ ನಡೆಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಹೊಬಳಿ, ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಬಲವರ್ಧನೆ ಮಾಡಲಾಗುತ್ತಿದೆ. ಯುವಕರು ಯಳ್ಳವರ ಗುಲಾಮರಾಗುವುದಕ್ಕಿಂತ ಸ್ವ ನಾಯಕತ್ವ ಬೆಳೆಸಿಕೊಂಡು ಸ್ವಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡು ಮುನ್ನೆಡೆದಾಗ ಮಾತ್ರ ಸಾಮಾನ್ಯ ಜನತೆ ಸಹ ಚುನಾವಣೆಗೆ ಸ್ಪರ್ಧಿಸುವಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಶೋಕ ಜಾಧವ, ಪ್ರವೀಣ ಕನಸೆ, ನಾಗನಿಂಗ ನಾಟಿಕಾರ, ರಾಘವೇಂದ್ರ ಛಲವಾದಿ ಇದ್ದರು.

