ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ಸಾಹಿತ್ಯದಲ್ಲಿ ಉತ್ತಮ ಬರಹಗಾರರಿದ್ದಾರೆ. ಪ್ರೌಢ ಸಾಹಿತ್ಯದಂತೆ ಮಕ್ಕಳ ಸಾಹಿತ್ಯವೂ ವಿಮರ್ಶೆಗೆ ಒಳಗಾಗಬೇಕು. ಹಿರಿಯ ಸಾಹಿತಿಗಳು ಮಕ್ಕಳ ಸಾಹಿತ್ಯವನ್ನು ನಿರ್ಲಕ್ಷಿಸುತ್ತ ಬಂದಿರುವುದರಿಂದ ಉತ್ತಮ ಮಕ್ಕಳ ಸಾಹಿತ್ಯ ಬರಹಗಾರರಿಗೆ ಅನ್ಯಾಯವಾಗಿದೆ ಎಂದು ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ ಅವರು ಅಭಿಪ್ರಾಯ ಪಟ್ಟರು.
ಅವರು ವಿಜಯಪುರದ ರಾಜಕುಮಾರ ಬಡಾವಣೆಯಲ್ಲಿಯ ಅನ್ನಪೂರ್ಣಾ ನರ್ಸಿಂಗ ಹೋಮದಲ್ಲಿ ಲಿಂ.ಅನ್ನಪೂರ್ಣಾ ಕಾಗಲಕರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಸಮಾರಂಭವೊಂದರಲ್ಲಿ ಮಾತನಾಡಿದರು.
ಮಕ್ಕಳ ಸಾಹಿತಿಗಳಾದ ಶಾಂತಾ ಜೋಗೇನವರ ಅವರು ರಚಿಸಿದ ನಾಟಕಗಳನ್ನು ಎಸ್. ಎಂ.ಹದಿಮೂರ, ಅವರ ಕಾವ್ಯ ಕೃತಿಗಳನ್ನು ಕುರಿತು ಕೆ.ಸುನಂದಾ ಮತ್ತು ಶರಣರ ಚರಿತ್ರೆಗಳ ಕುರಿತು ಶಿವುಕುಮಾರ ಶಿವಸಿಂಪಿಯವರು ಸಮಗ್ರವಾಗಿ ಗ್ರಂಥಾವಲೋಕನ ಮಾಡಿದರು.
ನಂತರ ನಡೆದ ಮಕ್ಕಳ ಕವಿಗೋಷ್ಠಿಯಲ್ಲಿ ಶಿವಾನಂದ ಹದಿಮೂರ, ಪಂಡಿತರಾವ ಪಾಟೀಲ, ಜಯಶ್ರೀ ಬಿರಾದಾರ, ವಿಜಯಕುಮಾರ ಬಂಗಾರಗುಂಡ, ಡಾ.ಸುರೇಶ ಕಾಗಲಕರ, ಕೆ.ಎಸ್.ಬಾಗೇವಾಡಿ, ಸುನಂದಾ ಕೋರಿ ಕವನ ವಾಚನಮಾಡಿ ಶ್ರೋತೃಗಳ ಗಮನ ಸೆಳೆದರು.
ಹಿರಿಯ ಸಾಹಿತಿಗಳಾದ ಬಿ.ಆರ್.ನಾಡಗೌಡ, ಡಾ.ಸುರೇಶ ಕಾಗಲಕರ, ದತ್ತಿ ದಾಸೋಹಿಗಳಾದ ಶಾಂತಾ ಜೋಗೇನವರ ಮತ್ತು ಎಂ.ಆರ್.ಕಾಗಲಕರ ಅವರನ್ನು ಸನ್ಮಾನಿಸಲಾಯಿತು. ಸಿದ್ದಲಿಂಗಪ್ಪ ಹದಿಮೂರ ಸ್ವಾಗತಿಸಿದರು. ಪಂಡಿತರಾವ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಹಿರಿಯರಾದ ಸಿ.
ಎಸ್.ಕಣಕಾಲಮಠ, ರಾವಸಾಹೇಬ ಬಿರಾದಾರ, ಕೆ.ಆರ್.ಅರಿಕೇರಿಮಠ, ಎಲ್.ಪಿ.ಬಿರಾದಾರ, ಪ್ರೇಮಾನಂದ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

