ವಿಜಯಪುರದ ಬಂಜಾರಾ ಶಿಕ್ಷಣ ಸಂಸ್ಥೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಪೂರಕವಾಗಿದೆ. ಓದಿನ ಜತೆಗೆ ಮಕ್ಕಳ ಪ್ರತಿಭೆಗಳ ಅನಾವರಣವೂ ಆಗಬೇಕು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಪ್ರಕಾಶಿಸುವಂತೆ ಮಾಡಲು, ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಮಹಾನಗರ ಪಾಲಿಕೆಯ ಪೌರ ಎಂ.ಎಸ್.ಕರಡಿ ಹೇಳಿದರು.
ನಗರದ ಬಂಜಾರಾ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರದಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ವಿಜಯಪುರ ನಗರ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ೨೦೨೫-೨೬ನೇ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು.
ಶಾಲೆಗಳಲ್ಲಿ ವಿದ್ಯೆ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದರೂ ಕ್ರೀಡೆಗಳು ಮಕ್ಕಳ ದೈಹಿಕ ಬೆಳವಣಿಗೆಗೆ ನೆರವಾದರೆ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ನೆರವಾಗುತ್ತವೆ. ಈ ಮೂಲಕ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಓದಿನಿಂದ ಮಾತ್ರವಲ್ಲದೆ ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿಯೂ ಉತ್ತಮ ಸಾಧನೆ ಮಾಡಲು ಅವಕಾಶಗಳಿದ್ದು, ಪಾಲಕರು ತಮ್ಮ ಮಕ್ಕಳ ಪ್ರತಿಭೆ ಹೊರತರಲು ಸಹಕಾರ ನೀಡುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಿ.ಎಲ್.ಚವ್ಹಾಣ್‌ರವರು ಮಾತನಾಡುತ್ತ. ಇಲ್ಲಿ ಆರೋಗ್ಯಕರವಾಗಿ ಸ್ಪರ್ಧೆಗಳು ನಡೆಯುತ್ತವೆ. ಕೇವಲ ಪ್ರಶಸ್ತಿ, ಪುರಸ್ಕಾರಕ್ಕಾಗಿ ಅಲ್ಲ. ಎಷ್ಟೋ ಮಕ್ಕಳಿಗೆ ತಮ್ಮಲ್ಲಿನ ಪ್ರತಿಭೆಯ ಅರಿವೇ ಇರುವುದಿಲ್ಲ. ಅವರ ಪ್ರತಿಭೆಯನ್ನು ಅವರಿಗೆ ತಿಳಿಯುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಈ ವೇಳೆಯಲ್ಲಿ ಕೆ.ಬಿ.ಎಸ್.ನಂ.೨೪ರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎ.ಬಿರಾದಾರ, ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಂದೀಪ ರಾಠೋಡ, ಎಸ್.ಜಿ.ರಾಠೋಡ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರುಗಳು, ವಿದ್ಯಾರ್ಥಿಗಳು, ಎಲ್ಲ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸ್ವಾಗತ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಎಲ್.ಚವ್ಹಾಣ್, ವಂದನಾರ್ಪಣೆ ಎಸ್.ಜಿ.ರಾಠೋಡ ಹಾಗೂ ನಿರೂಪಣೆಯನ್ನು ಎಚ್.ಎಂ.ಬೋರಾವತರವರು ನೆರವೇರಿಸಿದರು.

