ಚಿಮ್ಮಡ ಗಾಮ ಪಂಚಾಯತಿಯಿಂದ ಕಾವಲು ಸಮೀತಿ ರಚನೆ
ಉದಯರಶ್ಮಿ ದಿನಪತ್ರಿಕೆ
ವರದಿ: ಇಲಾಹಿ ಇ, ಜಮಖಂಡಿ
ಚಿಮ್ಮಡ: ಬಯಲು ಬಹಿರ್ದಸೆ ತಡೆಯಲು ಕೇಂದ್ರ, ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಗ್ರಾಮೀಣ ಭಾಗದ ಬಹುತೇಕ ಜನರು ಅವುಗಳ ಸದುಪಯೋಗ ಪಡೆದುಕೊಳ್ಳದೆ ಇನ್ನೂ ರಸ್ತೆ ಬದಿಯಲ್ಲೇ ಶೌಚಕ್ಕೆ ಹೋಗುವುದು ಸಾಮಾನ್ಯವಾಗಿದ್ದು ಅದನ್ನು ತಡೆಯಲು ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ಕಾವಲು ಸಮೀತಿ ರಚಿಸುವ ಮೂಲಕ ಹತೋಟಿಗೆ ತಂದಿದ್ದಾರೆ.
ಸುಮಾರು ಇಪ್ಪತ್ತು ಸಾವಿರ ಜನಸಂಖ್ಯೆ ಹೊಂದಿರುವ ಚಿಮ್ಮಡ ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗಳಲ್ಲಿಯೇ ಜನರು ಬಯಲು ಬಹಿರ್ದೆಸೆಗೆ ಹೋಗುತ್ತಿರುವುದರಿಂದ ಈ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿತ್ತು ಮೂಗು ಮುಚ್ಚಿಕೊಂಡೇ ಗ್ರಾಮ ಪ್ರವೇಶ ಮಾಡುವ ಸ್ಥಿತಿ ನಿರ್ಮಾಣಗೊಂಡಿತ್ತು, ಇದನ್ನು ತಡೆಗಟ್ಟಲು ಜಲ ನಿರ್ಮಲ ಯೋಜನೆ, ಸ್ವಚ್ಚ ಭಾರತ್ ಮಿಷನ್, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಅನುದಾನದಲ್ಲಿ ಈಗಾಗಲೇ ೨೫೦ ವಯಕ್ತಿಕ ಒಡೆತನದ ಗುಂಪು ಶೌಚಾಯಗಳು, ೩೦ ಸಾರ್ವಜನಿಕ ಶೌಚಾಲಯಗಳು, ೪ ಮಹಿಳಾ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು ೧೨ ಸಮುದಾಯ ಶೌಚಾಲಯಗಳ ನಿರ್ಮಾಣ ಪ್ರಗತಿಯಲ್ಲಿದೆ ಅಲ್ಲದೇ ವಯಕ್ತಿಕವಾಗಿ ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿಕೊಳ್ಳುವ ಬಡ ಕುಟುಂಬಕ್ಕೆ ಪರಿಶಿಷ್ಟ ಜಾತಿ/ಪಂಗಡದವರಿಗೆ ೨೦ ಸಾವಿರ ಇತರ ಕುಟುಂಬಗಳಿಗೆ ೧೨ ಸಾವಿರದಂತೆ ಸರಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಇಷ್ಟೆಲ್ಲ ಅನುಕೂಲ ಮಾಡಿಕೊಟ್ಟರೂ ಗ್ರಾಮವು ಬಯಲು ಶೌಚ ಮುಕ್ತವಾಗುತ್ತಿಲ್ಲ, ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದರೂ ಬಯಲು ಶೌಚಕ್ಕೆ ಬರುವ ಗ್ರಾಮಸ್ಥರ ಸಂಖ್ಯೆಯೇ ಬಹಳಷ್ಟಿದೆ ಇದಕ್ಕೆ ಗ್ರಾಮ ಪಂಚಾಯತಿಯ ಇಚ್ಛಾಶಕ್ತಿ ಕೊರತೆ, ಜನತೆಯ ಅಸಡ್ಡತೆಯೇ ಪ್ರಮುಖ ಕಾರಣವೆನ್ನಲಾಗಿದ್ದು ಸರಕಾರ ಈ ಕುರಿತು ಕಠೀನ ನಿರ್ದಾರ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಬಹುತೇಕ ಜನರ ಆಶಯವಾಗಿದೆ.
ಇಲ್ಲಿನ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ತಮ್ಮ ನೇತ್ರತ್ವದಲ್ಲಿಯೇ ಗ್ರಾಮ ಪಂಚಾಯತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರನ್ನೊಳಗೊಂಡ ೬ ಕಾವಲು ಸಮೀತಿ ರಚಿಸಿ ಕಳೆದ ಹತ್ತು ದಿನಗಳಿಂದ ಬೆಳಗಿನ ಜಾವ ೫ ಘಂಟೆಯಿಂದ ಬೆಳಿಗ್ಗೆ ೮ ಘಂಟೆಯವರೆಗೆ ಬಯಲು ಶೌಚಕ್ಕೆ ಬರುವ ಪ್ರತಿಯೊಬ್ಬ ಪುರುಷ, ಮಹಿಳೆಯರನ್ನು ಮನವೊಲಿಸಿ ಬಯಲು ಶೌಚ ಬಾರದಂತೆ ತಡೆಯಲಾಗುತ್ತಿದೆ, ಕಳೆದ ಹತ್ತು ದಿನಗಳಲ್ಲಿ ಶೇ. ೫೦ ರಷ್ಟು ಬಯಲು ಶೌಚ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.
“ವೈಯಕ್ತಿಕ ಹಾಗೂ ಗುಂಪು ಶೌಚಾಲಯ ಹೊಂದಿದವರೂ ಕೂಡ ಬಹಿರ್ದೇಸೆಗೆ ರಸ್ತೆ ಬದಿಯೇ ಬಳಸುತ್ತಿರುವುದರಿಂದ ಗ್ರಾಮದ ಸುತ್ತಲೂ ಗಲೀಜು ನಿರ್ಮಾಣವಾಗಿತ್ತು ಮೇಲಾಧಿಕಾರಿಗಳ ಸೂಚನೆ ಹಾಗೂ ಪತ್ರಿಕಾ ಮಾದ್ಯಮದ ಸಲಹೆ ಮೇರೆಗೆ ಕಾವಲು ಸಮೀತಿ ರಚಿಸಿ ಬಯಲು ಶೌಚಕ್ಕೆ ಬರುವ ಗ್ರಾಮಸ್ಥರ ಮನವೊಲಿಸಲಾಗುತ್ತಿದ್ದು ಗ್ರಾಮದ ಪ್ರತೀ ಕುಟುಂಬಗಳಿಗೆ ವಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದ್ದು ಹತೋಟಿಗೆ ಬರುವವರೆಗೂ ಕಾವಲು ಸಮೀತಿ ಕಾರ್ಯ ನಿರ್ವಹಿಸಲಿದೆ.”
– ಶಿವಾನಂದ ಬಿರಾದಾರ
ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ

